ದಾವಣಗೆರೆ:
ವೀರಶೈವ-ಲಿಂಗಾಯತರು ಸಂಘಟಿತರಾಗುವ ಮೂಲಕ ಸಮಾಜ ಒಡೆಯುವ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕರೆ ನೀಡಿದರು.
ನಗರದ ಶ್ರೀಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಜಿಲ್ಲಾ ಸಮಾವೇಶ, ವಿಶ್ವಸ್ಥ ಮಂಡಳಿ ಸದಸ್ಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ರಾಜಕಾರಣಕ್ಕಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಹೀಗಾಗಿ ವೀರಶೈವ ಒಳಪಂಗಡಗಳು ಒಗ್ಗಟ್ಟಾಗುವ ಮೂಲಕ ಸಮಾಜ ಒಡೆಯುವ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕೆಂದು ಕಿವಿಮಾತು ಹೇಳಿದರು.
ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕೆಲಸ ಮಾಡಬೇಕಾಗಿದೆ ಎಂದ ಅವರು, ಚೆನ್ನಾಗಿ ಓದಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರ ಜೊತೆ-ಜೊತೆಗೆ ಆರ್ಥಿಕವಾಗಿ ದುರ್ಬಲರಿರುವ ವಿದ್ಯಾರ್ಥಿಗಳನ್ನೂ ಗುರುತಿಸಿ ನೆರವು ನೀಡಿ, ಆರ್ಥಿಕವಾಗಿ ಹಿಂದುಳಿದವರಿಗೂ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕಂದು ಸಲಹೆ ನೀಡಿದರು.
ಸಮಾಜದ ಜಾಗೃತಿ, ಸಂಘಟನೆ, ಒಗ್ಗಟ್ಟು ಮೂಡಿಸುವ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಅಲ್ಲದೆ, ಬಸವಣ್ಣನವರ ಸಂದೇಶಗಳನ್ನು ಎಲ್ಲಾ ಕಡೆ ಪಸರಿಸುವ ಕೆಲಸವಾಗಬೇಕು. ಸಮಾಜವನ್ನು ಒಗ್ಗಟ್ಟಿನಿಂದ ಮುಂದೆ ಕೊಂಡೊಯ್ಯಬೇಕಾದ ಹೊಣೆ ಸಮಾಜದ ಮುಖಂಡರ ಮೇಲಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಉದ್ಯೋಗದ ಆಧಾರದಲ್ಲಿ ಒಳಪಂಗಡಗಳು ಹುಟ್ಟಿಕೊಂಡಿವೆ. ಆದರೆ, ಇದೇ ಇಂದು ಒಳಜಗಳಕ್ಕೆ ಕಾರಣವಾಗಿದೆ. ಒಡೆದಾಳುವ ರಾಜಕಾರಣಿಗಳು ವೀರಶೈವ-ಲಿಂಗಾಯತ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಯಾರೂ ಸಹ ಆಸ್ಪದ ನೀಡಬಾರದು ಎಂದು ಕಿವಿಮಾತು ಹೇಳಿದರು.
ಸುಮಾರು 2 ಕೋಟಿಯಷ್ಟಿದ್ದ ಸಮಾಜದ ಜನಸಂಖ್ಯೆಯನ್ನು 70 ಲಕ್ಷಕ್ಕೆ ತರುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದ್ದು, ಇಂಥಹ ಸಂದರ್ಭದಲ್ಲಿ ಎಲ್ಲರೂ ಸಂಘಟಿತರಾಗಿ ಒಗ್ಗಟ್ಟಾಗಿ ಸಮಾಜ ಕಟ್ಟಿದಾಗ ಎಲ್ಲರೂ ಮುಂದೆ ಬರಲು ಸಾಧ್ಯವಾಗಲಿದೆ. ಆಗ ಸಮಾಜವೂ ತತ್ತ ತಾನೆಯೇ ಉದ್ಧಾರವಾಗಲಿದೆ ಎಂದರು.
ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಡಾ.ಶಿವಬಸಪ್ಪ ಹೆಸರೂರು ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ. ಧಾರ್ಮಿಕ ಆಚರಣೆಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ಜಾತಿ ಸಂಘಟನೆಗೆ ನಮ್ಮ ಸಮಾಜ ಒತ್ತು ನೀಡಿರಲಿಲ್ಲ. ಆದರೆ ಇತರೆ ಜಾತಿಯವರು ಒಗ್ಗಟ್ಟಾಗಿದ್ದರಿಂದ ನಾವೂ ಅನಿವಾರ್ಯವಾಗಿ ಸಂಘಟನೆ ಮಾಡಬೇಕಾಯಿತು. ಸೇವೆ, ಅಭಿವೃದ್ಧಿಯೇ ನಮ್ಮ ಸಂಘಟನೆಯ ಧ್ಯೇಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಯಿತು. ವಿಶ್ವಸ್ಥ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್.ಸಿದ್ಧಲಿಂಗೇಶ್ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಅಥಣಿ ಎಸ್. ವೀರಣ್ಣ, ರಾಜ್ಯ ಉಪಾಧ್ಯಕ್ಷ ದೇವರಮನಿ ಶಿವಕುಮಾರ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸರಳಾ ಹರ್ಕೆರೆ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಸಮಾಜದ ಮುಖಂಡರಾದ ಎಂ.ವಿ.ಗೊಂಗಡಿ ಶೆಟ್ರು, ಅಜ್ಜಂಪುರ ವಿಜಯಕುಮಾರ, ದೊಗ್ಗಳ್ಳಿ ವಿಜಯಪ್ರಕಾಶ, ಹೊಸಕೆರೆ ರುದ್ರಣ್ಣ, ಡಿ.ವಿ.ಶರಣಪ್ಪ, ಗಂಗಾಧರ ಎರೆಸೀಮೆ, ಹಾಸಬಾವಿ ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.