ಸಮಾನತೆಯಲ್ಲಿ ನಂಬಿಕೆಯಿಲ್ಲದ ಬಿಜೆಪಿಯಿಂದ ನೀತಿಬೋಧನೆ ಬೇಡ

ತುಮಕೂರು:

ಅವಕಾಶ ಬಂದಾಗ ದಲಿತರಿಗೆ ಸಿಎಂ ಹುದ್ದೆ ಪಕ್ಷ ಕಲ್ಪಿಸುತ್ತದೆ: ಡಾ.ಜಿ.ಪರಮೇಶ್ವರ. ಸಮಾನತೆಯಲ್ಲಿ ನಂಬಿಕೆಯಿಲ್ಲದ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷ ದಲಿತರಿಗೆ ಸಿಎಂ ಪದವಿ ನೀಡುವ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ತಿರುಗೇಟು ನೀಡಿದರು.

ದಲಿತ ಸಿಎಂ ವಿಷಯ ಪ್ರಸ್ತಾಪಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಇತರೆ ಬಿಜೆಪಿ ನಾಯಕರು ನೀಡಿದ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ರಾಜಕಾರಣದ ದೃಷ್ಟಿಯಿಂದ ದಲಿತ ಸಿಎಂ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದಲಿತ ನಾಯಕರಿಗೆ ಅವರ ಅರ್ಹತೆ ಆಧಾರದಲ್ಲಿ ಸಂದರ್ಭ ಒದಗಿ ಬಂದಾಗಲೆಲ್ಲ ಉನ್ನತ ಸ್ಥಾನಮಾನ ನೀಡಿದೆ. ಮಹಾರಾಷ್ಟ್ರದ ದಲಿತ ನೇತಾರ ಸುಶೀಲ್‍ಕುಮಾರ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ರಾಜ್ಯಪಾಲರನ್ನಾಗಿಸಿದ್ದು ಕಾಂಗ್ರೆಸ್ ಪಕ್ಷವೇ. ಮೇದಾವಿ ರಾಜನೀತಜ್ಞ ಕೆ.ಆರ್.ನಾರಾಯಣನ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಯಾರು? ಬಿಜೆಪಿಯವರು ಸಂವಿಧಾನಕ್ಕೆ ಅಪಮಾನಿಸುವಂತೆ ದಲಿತ ಸಮುದಾಯವನ್ನು ಅನಗತ್ಯವಾಗಿ ಎಳೆದು ತರುವುದು ಬೇಡ. ಬಸವಣ್ಣ, ಬುದ್ಧ ಅವರು ಪ್ರತಿಪಾದಿಸಿದ ಮೇಲು-ಕೀಳು ಬೇಡ.

ಮನುಷ್ಯರೆಲ್ಲರೂ ಒಂದೇ ಎಂಬ ಪರಿಕಲ್ಪನೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಪ್ರಸ್ತಾವನೆಯಲ್ಲೇ ಉಲ್ಲೇಖಿಸಿದ್ದಾರೆ. ಬಹುಮತ ಪಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಆಗಿ ಆಯ್ಕೆ ಮಾಡಲಾಗುತ್ತದೆ. ಪರಿಸ್ಥಿತಿಗನುಗುಣವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಇತರೆ ಸಮುದಾಯಗಳಿಗೂ ಕಾಂಗ್ರೆಸ್‍ನಲ್ಲಿ ಅವಕಾಶ ಲಭ್ಯವಾಗಲಿದೆ. ಬಿಜೆಪಿಯವರು ಮೂಗುತೂರಿಸುವ ಅಗತ್ಯವಿಲ್ಲ ಎಂದರು.

ಬಿಜೆಪಿಯವರು ಅಧಿಕಾರ ವಿಕೇಂದ್ರಿಕರಣದ ವಿರೋಧಿಗಳು: ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಚುನಾವಣೆಯನ್ನು ಕಾಲ ಕಾಲಕ್ಕೆ ನಡೆಸದೆ ಇದ್ದರೆ ಅಧಿಕಾರ ವಿಕೇಂದ್ರಿಕರಣದ ಆಶಯವೇ ಮೂಲೆಗುಂಪಾಗಲಿದೆ. ಆಡಳಿತಾರೂಢ ಬಿಜೆಪಿಯವರು ಇನ್ನೂ 8-9 ತಿಂಗಳು ಚುನಾವಣೆ ವಿಳಂಬ ಮಾಡಲು ಮುಂದಾಗುವ ಮೂಲಕ ಅಧಿಕಾರ ವಿಕೇಂದ್ರಿಕರಣದ ವಿರೋಧಿಗಳೆಂದು ಸಾಬೀತು ಪಡಿಸುತ್ತಿದ್ದಾರೆ. ಅಧಿಕಾರವನ್ನೆಲ್ಲ ತಮ್ಮ ಬಳಿಯೇ ಕೇಂದ್ರಿಕರಿಸುವುದು ಬಿಜೆಪಿಯವರ ಉದ್ದೇಶ ಎಂದರು.

ಇಲಿ-ಹೆಗ್ಗಣಗಳ ತಾಣವಾಗಿದೆ ಸುವರ್ಣಸೌಧ: 400ಕೋಟಿ ವೆಚ್ಚ ಮಾಡಿ ಕಟ್ಟಿದ ಬೆಳಗಾವಿ ಸುವರ್ಣಸೌಧ ಹಾಳಾಗುತ್ತಿದ್ದು, ನಿಯಮಿತವಾಗಿ ಅಲ್ಲಿ ಅಧಿವೇಶನ ನಡೆಸಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದ ಡಾ.ಜಿ.ಪರಮೇಶ್ವರ ಸರಕಾರಿ ಕಚೇರಿಗಳನ್ನು ಆಭಾಗಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದರೂ ಆ ಕೆಲಸವನ್ನು ಸರಕಾರ ಮಾಡಿಲ್ಲ. ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲು ವೇದಿಕೆಯಾಗಬೇಕಾದ ಸುವರ್ಣ ಸೌಧ, ಇಲಿ-ಹೆಗ್ಗಣಗಳ ತಾಣವಾಗಿ ಧೂಳು ಹಿಡಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಂತ ಬಲದ ಮೇಲೆ ಅಧಿಕಾರದ ವಿಶ್ವಾಸ: ಹಾನಗಲ್, ಸಿಂಧಗಿ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್‍ಗೆ ಮುಂದಿನ ಚುನಾವಣೆಗೆ ದಿಕ್ಸೂಚಿ, ಆತ್ಮವಿಮರ್ಶೆಯ ಪಾಠ ಎರಡನ್ನೂ ಕಲಿಸಿದ್ದು, 2023ರಲ್ಲಿಕಾಂಗ್ರೆಸ್ ಸ್ವಂತ ಬಲದ ಮೆಲೆ ಅಧಿಕಾರಕ್ಕೇರುವ ವಿಶ್ವಾಸ ಮೂಡಿಸಿದೆ. ಭಾನುವಾರ ನಡೆದ ಕಾಂಗ್ರೆಸ್ ಪರಾಮರ್ಶನಾ ಸಭೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ವೃದ್ಧಿ ಹಾಗೂ ಡಿಸಿಸಿ, ಕೆಪಿಸಿಸಿ ಹಾಗೂ ಎಐಸಿಸಿಗೆ ಪ್ರತಿನಿಧಿಗಳನ್ನು ಸದಸ್ಯರ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಡಲು ಚರ್ಚಿಸಲಾಗಿದೆ. ಪ್ರತೀ ರಾಜ್ಯ, ಜಿಲ್ಲೆಯಿಂದ ಎಐಸಿಸಿಗೆ ಆಯ್ಕೆಯಾದ ಪ್ರತಿನಿಧಿಗಳು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಬಿಜೆಪಿ ಸರಕಾರದ ವೈಫಲ್ಯಗಳ ವಿರುದ್ಧ ಜನಜಾಗೃತಿ ಸಮಾವೇಶವನ್ನು ಜಿಲ್ಲಾ, ತಾಲೂಕು, ಬ್ಲಾಕ್ ಮಟ್ಟದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಬಿಟ್ ಕಾಯಿನ್ ಹಗರಣದ ಹಿಂದಿರುವವರ ಹೆಸರು ಬಹಿರಂಗಗೊಳಿಸಿ:
ಬಿಟ್ ಕಾಯಿನ್, ಕ್ರಿಪ್ಕೊ ಕರೆನ್ಸಿ ದೇಶದಲ್ಲಿ ನಿಷೇಧಿತವಾಗಿದ್ದು, ಇದರ ಚಲಾವಣೆ ಮಾಡುತ್ತಿದ್ದ ಆರೋಪಿ ಶ್ರೀಕಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಪೊಲೀಸರು ಸಮಗ್ರ ತನಿಖೆ ನಡೆಸಿ ಸತ್ಯ ಬಹಿರಂಗಗೊಳಿಸಬೇಕಿದೆ. ಈ ಬಿಟ್ ಕಾಯಿನ್ ಚಲಾವಣೆ ಹಿಂದೆ ರಾಜಕಾರಣಿಗಳ ಮಕ್ಕಳು, ಐಪಿಎಸ್ ಅಧಿಕಾರಿಗಳು ಹೀಗೆ ಹಲವು ಗಣ್ಯರು ಹೆಸರುಗಳು ಕೇಳಿಬರುತ್ತಿದ್ದು, ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಹಗರಣದಿಂದಿರುವ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕಾರ್ಯಮಾಡಬೇಕು.
-ಡಾ.ಜಿ.ಪರಮೇಶ್ವರ, ಮಾಜಿ ಗೃಹಸಚಿವರು.

ಮುದ್ದಹನುಮೇಗೌಡರು ಕಾಂಗ್ರೆಸ್ ತೊರೆಯುವುದಿದ್ದರೆ ಟಿಕೆಟ್ ಕೇಳುತ್ತಿರಲಿಲ್ಲ

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್‍ನ ಕ್ರಿಯಾಶೀಲ ಸಂಸದರಾಗಿ ಕಾರ್ಯನಿರ್ವಹಿಸಿದವರು. ಸಂಸತ್‍ನ ಚರ್ಚೆಗಳಲ್ಲಿ ತಮ್ಮ ವಾಕ್ಪಟುತ್ವದಿಂದ ದೇಶದ ಗಮನಸೆಳೆದಿದ್ದಾರೆ. ಅವರು ಕಾಂಗ್ರೆಸ್‍ನ ಚಟುವಟಿಕೆಯಲ್ಲಿ ಸಕ್ರಿಯವಾಗಿಲ್ಲವೆಂಬ ಕಾರಣಕ್ಕೆ ಅವರು ಕಾಂಗ್ರೆಸ್ ತೊರೆಯುತ್ತಾರೆ ಎಂದು ಹೇಳುವುದು ತಪ್ಪು, ಮುದ್ದಹನುಮೇಗೌಡರು ಕಾಂಗ್ರೆಸ್ ತೊರೆಯುವುದಿದ್ದರೆ ಹಿಂದೆ ತಾವು ಪ್ರತಿನಿಧಿಸಿದ್ದ ಕುಣಿಗಲ್‍ನಿಂದ ಮರಳಿ ಪಕ್ಷದ ಟಿಕೆಟ್ ಕೊಡಿ ಎಂದು ಕೇಳುತ್ತಿರಲಿಲ್ಲ. ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಅವರಿಗೇನಾದರೂ ಅಸಮಧಾನವಿದ್ದರೆ ನಾನೇ ಖುದ್ದು ಅವರ ಮನೆಗೆ ತೆರಳಿ ಸಮಸ್ಯೆ ಬಗೆಹರಿಸುವೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap