ಚಳ್ಳಕೆರೆ
ರಾಷ್ಟ್ರದೆಲ್ಲೆಡೆ ಶೋಷಿತ ಸಮುದಾಯದ ಆಶಾಕಿರಣವಾಗಿ ಪ್ರಜ್ವಲಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ 128ನೇ ಜನ್ಮ ದಿನೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಬಾಲ್ಯದಲ್ಲೇ ಶೋಷಣೆಯ ವಿರುದ್ದ ಸಿಡಿದೆದ್ದು, ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿಯನ್ನು ಪ್ರಾರಂಭಿಸಿದ ಮಹಾನ್ ಪುರುಷ ಎಂದು ಸಹಾಯಕ ಚುನಾವಣಾಧಿಕಾರಿ, ಜಿಲ್ಲಾ ಯೋಜನಾಧಿಕಾರಿ ಆರ್.ರಾಜಶೇಖರ್ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ಸಮುದಾಯದ ಆಶಾಕಿರಣವಾಗಿದ್ದು, ಅವರ ಜನ್ಮ ದಿನೋತ್ಸವದ್ದು, ಅವರ ಆದರ್ಶ ಪಾಲನೆಗೆ ನಾವೆಲ್ಲರೂ ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ಉಪನ್ಯಾಸ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಸ್ವಾತಂತ್ರ್ಯ ಲಭಿಸಿದ ನಂತರ ರಚನೆಯಾದ ಕೇಂದ್ರ ಸರ್ಕಾರದ ಮಂತ್ರಿಮಂಡಲದಲ್ಲಿ ರಾಷ್ಟ್ರದ ಮೊಟ್ಟ ಮೊದಲ ಕಾನೂನು ಸಚಿವರಾಗಿ ಅಧಿಕಾರ ವಹಿಸಿಕೊಂಡವರು ಡಾ.ಬಿ.ಆರ್.ಅಂಬೇಡ್ಕರ್. ಮಹಾರಾಷ್ಟ್ರದಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲೇ ಹಲವಾರು ವಿಷಯಗಳಲ್ಲಿ ಪರಿಣಿತಿಯನ್ನು ಪಡೆದು ಲಂಡನ್ನ ಆಕ್ಸ್ಪರ್ಡ್ ವಿಶ್ವವಿದ್ಯಾಲಯದಲ್ಲಿ ಹಲವಾರು ವಿಷಯಗಳಲ್ಲಿ ಪದವಿ ಪಡೆದರು.
ತಾವು ಶಿಕ್ಷಣ ಪಡೆದ ಶಾಲೆಯಲ್ಲೇ ಸಹ ಪಾಟಿಗಳು ಮತ್ತು ಶಿಕ್ಷಕರಿಂದ ಅವಮಾನಕ್ಕೆ ಒಳಗಾದ ಇವರು ಶಾಲೆಯಿಂದ ಹೊರ ಬಂದ ನಂತರ ಸಮುದಾಯದ ಮೇಲೆ ಆಗುತ್ತಿರುವ ಶೋಷಣೆ, ದೌರ್ಜನ್ಯ ಮತ್ತು ದರ್ಪಕ್ಕೆ ಕೊನೆ ಆಡುವ ನಿಟ್ಟಿನಲ್ಲಿ ಸಮುದಾಯದವನ್ನು ಸಂಘಟಿಸಿ ಜಾಗೃತಿ ಮೂಡಿಸಿದರು. ಅವರು, ಅವಮಾನ, ಶೋಷಣೆ ಮತ್ತು ಸಮಾಜದಿಂದ ಅಲಕ್ಷಿಸಿಲ್ಪಟ್ಟರೂ ಸಹ ದೃತಿಗೆಡದೆ ಜಾತಿ-ಜಾತಿಗಳ ಮದ್ಯೆ ಇದ್ದ ಕಂದಚಾರವನ್ನು ದೂರ ಮಾಡಿದರು.
ಅವರ ಅದ್ವಿತೀಯ ಜ್ಞಾನದ ಶಕ್ತಿಗೆ ಎಲ್ಲರೂ ಮೌನವಾಗುವಂತೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಮಾತನಾಡಿ, ಅಸಮಾನತೆ ಮತ್ತು ಶೋಷಣೆ ಸಮಾಜದಲ್ಲಿ ಆಳಾವಾಗಿ ಬೇರುಬಿಟ್ಟು ಜಾತಿ ಜಾತಿಗಳ ನಡುವೆ ವೈಶ್ಯಮ್ಯ ತಾಂಡವಾಡುವ ಸ್ಥಿತಿಯಲ್ಲಿ ತಮ್ಮದೇಯಾದ ಸಾವiಥ್ರ್ಯದ ಮೂಲಕ ಶೋಷಣೆ ವಿರುದ್ದ ಸಿಡಿದೆದ್ದ ಮಹಾನ್ ಶ್ರೇಷ್ಠ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪೌರಾಯುಕ್ತ ಪರಮೇಶ್ವರಪ್ಪ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಸಿಡಿಪಿಒ ಸಿ.ಕೆ.ಗಿರಿಜಾಂಬ, ಪಶುವೈದ್ಯ ಇಲಾಖೆಯ ಡಾ.ಹನುಮಪ್ಪ, ಭದ್ರಾ ಮೇಲ್ದಂಡೆ ಇಲಾಖೆ ಇಂಜಿನಿಯರ್ ಮಹೇಂದ್ರ, ಇಂಜಿನಿಯರ್ ರಾಜಪ್ಪ, ಶಿರಸ್ತೇದಾರ್ ಮಂಜುನಾಥ, ಚಂದ್ರಶೇಖರ್, ರವಿಶಂಕರ್, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ತಾಲ್ಲೂಕು ಕಚೇರಿಯ ಡಿ.ಶ್ರೀನಿವಾಸ್ ಸ್ವಾಗತಿಸಿದರು. ಗ್ರಾಮ ಲೆಕ್ಕಿಗ ರಾಜೇಶ್ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಕಚೇರಿ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








