ಸರಕಾರ, ಸರಕಾರಿ ಸಂಸ್ಥೆಗಳಿಂದಲೇ ಬೆಂಗಳೂರು ಕೆರೆಗಳ ಗುಳುಂ ಮಾಜಿ ಸಿಎಂ ಹೆಚ್.ಡಿ.ಕೆ ಆರೋಪ

ಬೆಂಗಳೂರು: ಬಡಾವಣೆಗಳ ನಿರ್ಮಾಣದ ಹೆಸರಿನಲ್ಲಿ, ಅಭಿವೃದ್ಧಿಯ ನೆಪದಲ್ಲಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಕೆರೆಕಟ್ಟೆಗಳನ್ನು ನುಂಗಿ ನೀರು ಕುಡಿಯಲಾಗಿದೆ. ಸರಕಾರಿ ಮತ್ತು ಸರಕಾರಿ ಸಂಸ್ಥೆಗಳೇ ಕೆರೆಗಳನ್ನು ನುಂಗಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು; ಒಂದೊಂದೇ ಕೆರೆಯನ್ನು ನುಂಗುತ್ತಿದ್ದಾರೆ. ಅದಕ್ಕೆ ತರೇಹವಾರಿ ನೆಪ ಮಾಡಿಕೊಂಡು ಸ್ವಾಹ ಮಾಡುತ್ತಿದ್ದಾರೆ. ಉಳಿದ ಕೆರೆಗಳಿಗೆ ತ್ಯಾಜ್ಯ ನೀರನ್ನು ತುಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಳೇಕಹಳ್ಳಿ ಕರೆಯನ್ನು ಮುಚ್ಚಿದರು. ಬೇಕಾದ ಹಾಗೆ ಬೇಲಿ ಹಾಕಿಕೊಂಡು ಜಲಸಂಪನ್ಮೂಲಗಳನ್ನು ಹಾಳು ಮಾಡಿದರು. ಬೆಂಗಳೂರು ಕೆರೆಗಳನ್ನು ಉಳಿಸುವುದು ಕೆಂಪೇಗೌಡರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಅವರು ಪ್ರತಿಪಾದಿಸಿದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ನಗರದ ಕೆರೆಗಳನ್ನು ಕಬಳಿಕೆ ಮಾಡಿರುವುದನ್ನು ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಿದೆ. ನಾನು ಸಿಎಂ ಆಗಿದ್ದಾಗ ಜೆಪಿ ನಗರದ ಕೆಲ ಬಡಾವಣೆಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಆ ನೀರು ಮನೆಗಳಿಗೆ ನುಗ್ಗದೆ ಕೆರೆಗೆ ಹರಿದುಹೋಗುವ ರೀತಿ ವ್ಯವಸ್ಥೆ ಮಾಡಿದೆ. ಕೆಲ ದಿನಗಳ ಹಿಂದೆ ಭಾರೀ ಮಳೆಯಾದರೂ ಪುಟ್ಟೇನಹಳ್ಳಿ ಭಾಗದ ಮನೆಗಳಿಗೆ ನೀರು ನುಗ್ಗಿಲ್ಲ. ಆಗ ಅಲ್ಲಿಗೆ ಭೇಟಿ ನೀಡಿದಾಗ ಹೆಲಿಕಾಪ್ಟರ್’ನಲ್ಲಿ ನನ್ನ ಮೇಲೆ ಪುಷ್ಷಾರ್ಚನೆ ಮಾಡಿದರು. ಆದರೆ, ಚುನಾವಣೆ ಬಂದಾಗ ನನ್ನನ್ನು ಮರೆತೇ ಬಿಟ್ಟರು ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.

ಒಂದೆಡೆ ಕೆರೆಗಳನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಿದ್ದೇವೆ. ಇನ್ನೊಂದೆಡೆ ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಇಲ್ಲಿ ಕೆರೆ ಉಳಿಸಿಕೊಂಡಿಲ್ಲ, ಉಳಿಸಿಕೊಳ್ಳುವ ಬಗ್ಗೆ ಮಾತನಾಡುವುದೂ ಇಲ್ಲ. ಕೊನೆಪಕ್ಷ ಈಗ ಉಳಿದಿರುವ ಕೆರೆಗಳನ್ನಾದರೂ ರಕ್ಷಣೆ ಮಾಡಿದ್ದೀವಾ? ಅದೂ ಇಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಏನು? ಒಂದು ಕಡೆ ಬೆಳೆಯುತ್ತಿದ್ದೇವೆ, ಮತ್ತೊಂದೆಡೆ ಹೊಸ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಗುಡುಗಿದರು.

ಬೆಂಗಳೂರು ನಗರ ಇಡೀ ವಿಶ್ವಕ್ಕೆ ಪರಿಚಯ ಇರುವ ನಗರಿ. ಇದಕ್ಕೆ ಕಾರಣ ಕೆಂಪೇಗೌಡರು. ಕೆಂಪೇಗೌಡರ ಜಯಂತಿ ಇಡೀ ಕರ್ನಾಟಕದಲ್ಲಿ ನಡೆಯಬೇಕು. ಆ ಮೂಲಕ ಅವರ ಆಶಯಗಳನ್ನು ಸಾಕಾರಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಅವರು ಹೇಳಿದರು.

ಯಾವ್ಯಾವುದಕ್ಕೋ ಹಣ ಕಳೆದಿದ್ದೇವೆ. ಕೊನೆಪಕ್ಷ ಕೆಂಪಾಂಬುದಿ ಕೆರೆಯನ್ನಾದರೂ ಸಂಘದವತಿಯಿಂದ ಜೀರ್ಣೋದ್ಧಾರ ಮಾಡಿ. ಅದಕ್ಕೆ ನಾವೆಲ್ಲರೂ ಆರ್ಥಿಕವಾಗಿ ಶಕ್ತಿ ತುಂಬೋಣ ಎಂದ ಕುಮಾರಸ್ವಾಮಿ; ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆಗೆ ಮಾಡಬೇಕೆಂದು ಸರಕಾರವನ್ನು ಒತ್ತಾಯ ಮಾಡಿದರು.

ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರ ಅಗಾಧವಾಗಿ ಬೆಳೆಯುತ್ತಿದೆ. ಈ ಕಾರಣಕ್ಕಾಗಿ ನಗರದ ಮೇಲೆ ಒತ್ತಡವನ್ನು ತಡೆಯುವ ಉದ್ದೇಶದಿಂದ ನಾನು ಮುಖ್ಯಮಂತ್ರಿ ಆಗಿದ್ದಾಗ ಐದು ಟೌನ್’ಶಿಪ್’ಗಳನ್ನು ನಿರ್ಮಾಣ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದೆ. ಆದರೆ, ಆ ಕೆಲಸ ಮಾಡಲು ಕೆಲವರು ಬಿಡಲಿಲ್ಲ. ವ್ಯವಸ್ಥಿತವಾಗಿ ತಡೆಯೊಡ್ಡಿದರು.

ನಮ್ಮ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮ ಆಗುತ್ತಿದೆ. ಕೆಂಪೇಗೌಡರ ಬಗ್ಗೆ ಹಾಗೂ ಆ ಕುಟುಂಬ ಈ ಸಮಾಜಕ್ಕೆ ಕೊಟ್ಟ ಬಗ್ಗೆ ಬಹಳ ದಿನ ಮಾಹಿತಿ ಇರಲಿಲ್ಲ. ಆದರೆ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶಯದಂತೆ ನಡೆದ ಸಂಶೋಧನೆಯಿಂದ ನಾಡಪ್ರಭುಗಳ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಕೆಂಪೇಗೌಡರು, ಮತ್ತವರ ವಂಶಸ್ಥರು ಈ ನಾಡಿಗಾಗಿ ಕೊಟ್ಟಿರುವ ಕೊಡುಗೆಗಳನ್ನು ನಾವೆಲ್ಲರೂ ಸ್ಮರಿಸಬೇಕಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಶ್ರೀ ಡಾ.ನಿರ್ಮಲಾನಂದ ಮಹಾಸ್ವಾಮಿಗಳು, ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಮತ್ತಿತರರು ಭಾಗಿಯಾಗಿದ್ದರು.

Recent Articles

spot_img

Related Stories

Share via
Copy link
Powered by Social Snap