ಬೆಂಗಳೂರು:
ಜಾತ್ರೆ ಇನ್ನಿತರ ಜನಸಂದಣಿ ಇರುವ ಕಡೆಗಳಲ್ಲಿ ಮಹಿಳೆಯರ ಗಮನಕ್ಕೆ ಬಾರದಂತೆ ಚಿನ್ನದ ಸರಗಳನ್ನು ಕಟರ್‍ನಿಂದ ಕಟ್ ಮಾಡಿ ಪರಾರಿಯಾಗುತ್ತಿದ್ದ ಐನಾತಿ ಸರಗಳ್ಳ ಮಣಿ ಮತ್ತವನ ಸಹಚರ ರಾಬರಿಕುಮಾರ್‍ನನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.
ಆನೇಕಲ್‍ನ ಸುಣವಾರಹಳ್ಳಿಯ ಮಣಿಕಂಠ ಅಲಿಯಾಸ್ ಮಣಿ (24) ಮತ್ತು ಕೋರಮಂಗಲದ ವೆಂಕಟಾಪುರದ ರಾಬರಿ ಕುಮಾರ್ ಅಲಿಯಾಸ್ ಕುಮಾರ್ (22)ನನ್ನು ಬಂಧಿಸಿ
205 ಗ್ರಾಂ ಚಿನ್ನದ ಆಭರಣಗಳು, ಎರಡು ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಆರೋಪಿ ಮಣಿಕಂಠ 15 ದಿನಗಳ ಹಿಂದೆ ವರ್ತೂರಿನ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ. ಇದಲ್ಲದೆ ಕಳೆದ ಜನವರಿಯಲ್ಲಿ ವರ್ತೂರಿನ ಜಾತ್ರೆಯಲ್ಲಿ ಮಹಿಳೆಯೊಬ್ಬರ ಗಮನಕ್ಕೆ ಬಾರದಂತೆ ಅವರ ಕತ್ತಿನಲ್ಲಿದ್ದ ಸರವನ್ನು ಕಟರ್‍ನಿಂದ ಕಟ್ ಮಾಡಿ ದೋಚಿದ್ದನು.
ಕಳೆದ 2017ರ ಏಪ್ರಿಲ್‍ನಲ್ಲಿ ಪಣತ್ತೂರು ದಿಣ್ಣೆಯ ರೈಲ್ವೆ ಅಂಡರ್ ಪಾಸ್ ಬಳಿ ಮಹಿಳೆಯೊಬ್ಬರಿಗೆ ಆಕೆಯ ಗಮನಕ್ಕೆ ಬಾರದಂತೆ ಚಿನ್ನದ ಚೈನ್ ಅನ್ನು ಕಟರ್‍ನಿಂದ ಕಟ್ ಮಾಡಿ ಪರಾರಿಯಾಗಿದ್ದ. ಅದೇ ವರ್ಷದ ಮಾರ್ಚ್‍ನಲ್ಲಿ ಸರ್ಜಾಪುರ ರಸ್ತೆಯ ದೇವಾಲಯದವೊಂದರ ಬಳಿ ಇಬ್ಬರು ಹೆಂಗಸರ ಚಿನ್ನದ ಸರಗಳನ್ನು ಕಟರ್‍ನಿಂದ ಕಟ್ ಮಾಡಿ ಪರಾರಿಯಾಗಿದ್ದನು.
ಈ ಸಂಬಂಧ ದಾಖಲಾಗಿದ್ದ ಪ್ರಕರಣಗಳನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ವರ್ತೂರು ಪೊಲೀಸರು, ಆರೋಪಿ ಮಣಿಕಂಠನನ್ನು ಬಂಧಿಸಿ, ಆತನ ಜೊತೆ ಸೇರಿ ವಾಹನ ಕಳವು, ಮನೆ ಕಳವು ಮಾಡುತ್ತಿದ್ದ ರಾಬರಿ ಕುಮಾರ್‍ನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.