ಸರಳ ಹಬ್ಬ ಆಚರಿಸಿ, ಸಂತ್ರಸ್ಥರ ಒಳಿತಿಗೆ ಪ್ರಾರ್ಥಿಸೋಣ

 ದಾವಣಗೆರೆ:

      ಕೊಡಗು ಹಾಗೂ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಆಸ್ತಿ-ಪಾಸ್ತಿ, ಪ್ರಾಣ ಹಾನಿಯಾಗಿರುವ ಹಾಗೂ ಹಲವರು ಸಂಕಷ್ಟಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಡಂಬರದ ಬದಲು ಸರಳವಾಗಿ ಆಚರಿಸಿ, ಉಳಿದ ಹಣವನ್ನು ನೆರೆ ಸಂತ್ರಸ್ಥರಿಗೆ ಕಳುಹಿಸಿ, ಹಬ್ಬದಲ್ಲಿ ಪ್ರವಾಹದಿಂದ ನಲುಗಿರುವ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಬೇಕೆಂಬ ಅಭಿಪ್ರಾಯ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೋಮವಾರ ಬಕ್ರೀದ್ ಹಬ್ಬದ ಪ್ರಯುಕ್ತವಾಗಿ ಏರ್ಪಡಿಸಿದ್ದ ಸೌಹಾರ್ದ ಸಭೆಯಲ್ಲಿ ಕೇಳಿಬಂತು.

      ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಈ ವರ್ಷದ ಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬ ಹಾಗೂ ಹಿಂದೂ ಬಾಂಧವರ ಗಣಪತಿ ಹಬ್ಬಗಳಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ, ಸಂಕಷ್ಠದಲ್ಲಿರುವವರಿಗೆ ಒಳಿತಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.

      ಸಂತೋಷದಿಂದ ಇರುಲು ಹಾಗೂ ಪರಸ್ಪರ ಸಂತೋಷ ಹಂಚಿಕೊಳ್ಳುವ ಕಾರಣಕ್ಕಾಗಿ ಹಬ್ಬಗಳನ್ನು ಆಚರಿಸುತ್ತೇವೆ. ಸಮಾಜದಲ್ಲಿ ಈ ಸಂತೋಷದ ವಾತಾವರಣ ಇರಬೇಕಾದರೆ, ಎಲ್ಲಾ ಜಾತಿ ಜನಾಂಗದವರು ಸೇರಿ ಹಬ್ಬಗಳನ್ನು ಆಚರಿಸಬೇಕಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸಲು ಪೊಲೀಸ್ ಇಲಾಖೆಯ ಜೊತೆಗೆ ಸಾರ್ವಜನಿಕರು ಸಹಕಾರ ಅತ್ಯವಶ್ಯವಾಗಿದೆ. ಹೀಗಾಗಿ ಶಾಂತಿ-ಸುವ್ಯವಸ್ಥೆ ನೆಲೆಸಲು ಸಾರ್ವಜನಿಕರು ಪೊಲೀಸ್ ಇಲಾಖೆಯ ಜೊತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

      ಅಂಜುಮನ್ ಏ ಇಸ್ಲಾಂ ಸಂಸ್ಥೆ ಅಧ್ಯಕ್ಷ ಸಾಧಿಕ್ ಪೈಲ್ವಾನ್ ಮಾತನಾಡಿ, ಪ್ರಸ್ತುತ ದಾವಣಗೆರೆಯಲ್ಲಿ ಎಲ್ಲಾ ಸಮಾಜಗಳ ಹಿರಿಯರ ಮಾರ್ಗದರ್ಶನದ ಅಡಿಯಲ್ಲಿ ಹಬ್ಬ ಆಚರಿಸಲಾಗುತ್ತಿದ್ದು, ನಮ್ಮ ಹಬ್ಬಗಳಲ್ಲಿ ಹಿಂದೂ ಬಾಂಧವರು, ಹಿಂದೂ ಬಾಂಧವರ ಹಬ್ಬಗಳಲ್ಲಿ ನಾವು ಅಭಿನಂದಿಸುವ ಮೂಲಕ ಶಾಂತಿಯುತವಾಗಿ ಹಬ್ಬ ಆಚರಿಸಲಾಗುತ್ತಿದೆ. ಇದೇ ರೀತಿಯಲ್ಲಿ ಎಲ್ಲಾ ಹಬ್ಬಗಳು ಶಾಂತಿಯುತವಾಗಿ ಆಚರಣೆಯಾಗಲಿದೆ ಎಂದು ಆಶಿಸಿದರು.

      ಆರ್‍ಎಸ್‍ಎಸ್‍ನ ಮುಖಂಡ ಕೆ.ಬಿ.ಶಂಕರನಾರಾಯಣ ಮಾತನಾಡಿ, ಕೇರಳ ಹಾಗೂ ಕೊಡಗು ಜನರು ಪ್ರವಾಹಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಾವು ಅದ್ಧೂರಿಯಾಗಿ ಹಬ್ಬ ಆಚರಿಸುವುದು ಸರಿಯಲ್ಲ. ಆದ್ದರಿಂದ ನೊಂದವರ ನೋವಿಗೆ ಸ್ಪಂದಿಸುವ ರೀತಿಯಲ್ಲಿ ಹಬ್ಬಗಳನ್ನು ಸರಳವಾಗಿ ಆಚರಿಸೋಣ. ಯಾವುದೇ ಗೊಂದಲ, ಗಲಾಟೆಗಳಿಗೆ ಅವಕಾಶವಾಗದಂತೆ, ಎಲ್ಲರೂ ಕೂಡಿ ಹಬ್ಬ ಆಚರಿಸೋಣ ಎಂದು ಸಲಹೆ ನೀಡಿದರು.

      ಮುಸ್ಲಿಂ ಧರ್ಮಗುರು ಇಬ್ರಾಹಿಂ ಸಖಾಫಿ ಮಾತನಾಡಿ, ದಕ್ಷಿಣ ಕಾಶ್ಮೀರವೆಂದೇ ಹೆಸರಾಗಿರುವ ರಾಜ್ಯದ ಕೊಡಗು ಜಿಲ್ಲೆಯ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಬಕ್ರೀದ್ ಹಬ್ಬದ ಮೂಲಕ ದೇಶದ ಶಾಂತಿ, ನೆಮ್ಮದಿಗೆ ಪ್ರಾರ್ಥಿಸೋಣ. ಅಲ್ಲದೆ, ಆಡಂಬದರ ಬದಲು ಸರಳವಾಗಿ ಹಬ್ಬ ಆಚರಿಸಿ ನಮ್ಮ ಸಂತೋಷದ ಪಾಲನ್ನು ಸಂತ್ರಸ್ತರಿಗೆ ಹಂಚೋಣ ಎಂದರು.

      ಪಾಲಿಕೆ ಸದಸ್ಯ ಹೆಚ್.ಜಿ.ಉಮೇಶ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡುವುದು ಮೊದಲ ಆದ್ಯತೆಯಾಗಬೇಕು. ಈ ಹಿನ್ನೆಲೆಯಲ್ಲಿ ಬಕ್ರಿದ್ ಹಾಗೂ ಗಣೇಶ ಹಬ್ಬಗಳನ್ನು ಸರಳವಾಗಿ ಆಚರಿಸಬೇಕು. ಶಾಂತಿಗೆ ಭಂಗ ಬಾರದಂತೆ ಯಾವ ಧರ್ಮೀಯರಿಗೂ ಡಿಜೆ ಬಳಕೆಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.

      ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ಮಾತನಾಡಿ, ಸೌಹಾರ್ದತೆ, ಸಂತೋಷ ಹಂಚಿಕೊಳ್ಳುವುದೇ ಹಬ್ಬದ ಉದ್ದೇಶವಾಗಿದೆ. ಆದ್ದರಿಂದ ಯಾವುದೇ ರೀತಿಯ ಗೊಂದಗಳಿಗೆ ಅವಕಾಶವಾಗದಂತೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ನಾಗರೀಕರೂ ಸಹಕರಿಸಬೇಕು ಎಂದರು.

      ಇನ್ನೋರ್ವ ಪಾಲಿಕೆ ಸದಸ್ಯ ಎಂ.ಹಾಲೇಶ ಮಾತನಾಡಿ, ಪ್ರವಾಹ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಮಹಾನಗರ ಪಾಲಿಕೆ ನೌಕರರು ಹಾಗೂ ಸದಸ್ಯರು ಒಂದು ದಿನದ ವೇತನ ಕೊಡಲು ಚಿಂತನೆ ನಡೆಸಲಾಗಿದೆ. ಇದೇ ರೀತಿ ಈ ಬಾರಿ ಗಾಂಧಿ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಕೈಬಿಟ್ಟು, ನೆರೆ ಸಂತ್ರಸ್ತರಿಗೆ ನೆರವಾಗಲು ತೀರ್ಮಾನಿಸಲಾಗಿದೆ ಎಂದರು.

      ವಕೀಲ ರಜ್ವಿಖಾನ್ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿದೆ. ಭಾರತೀಯರಾಗಿ ಹುಟ್ಟಿದಕ್ಕೆ ಗರ್ವ ಪಡಬೇಕಾಗಿದೆ. ಕೆಲ ಬಾರಿ ಅಣ್ಣ-ತಮ್ಮಂದಿರ ಮಧ್ಯೆ ವೈಮನಸ್ಸು ಉಂಟಾದ ಸಂದರ್ಭದಲ್ಲೂ ಸರಿಪಡಿಸಿಕೊಂಡು ಸೌಹಾರ್ದದಿಂದ ಜೀವನ ನಡೆಸುತ್ತಿದ್ದೇವೆ. ಆದರೆ, ಕೆಲವರು ಸ್ವಾರ್ಥಕ್ಕಾಗಿ ಅಣ್ಣ-ತಮ್ಮಂದಿರ ಮಧ್ಯೆ ಬಿರುಕು ಮೂಡಿಸಿ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಇದಕ್ಕೆ ಯಾರೂ ಆಸ್ಪದ ನೀಡಬಾರದು ಎಂದು ಮನವಿ ಮಾಡಿದರು.

      ಹಿಂದೂ ಜಾಗರಣಾ ವೇದಿಕೆಯ ಸತೀಶ್ ಪೂಜಾರಿ ಮಾತನಾಡಿ, ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸಂಕಷ್ಟಕ್ಕೆ ತುತ್ತಾಗಿರುವವರ ಒಳತಿಗಾಗಿ ಬಕ್ರೀದ್ ಹಬ್ಬದಲ್ಲಿ ಪ್ರಾರ್ಥಿಸೋಣ. ಬಕ್ರೀದ್ ಹಬ್ಬ ಬಕ್ರೀದ್ ಹಬ್ಬವಾಗಿಯೇ ಆಚರಣೆಯಾಗಲಿ ಬೈಲಿದ್ ಆಗದಿರಲಿ ಎಂದರು.

      ವಕ್ಫ್ ಬೋರ್ಡ್‍ನ ಸಿರಾಜ್ ಮಾತನಾಡಿ, ಹಬ್ಬದ ಮೂರು ದಿನಗಳಲ್ಲಿ ಪಾಲಿಕೆ ಸಮರ್ಪಕ ನೀರು ಪೂರೈಸುವುದರ ಜೊತೆಗೆ ಹಬ್ಬದಲ್ಲಿ ಉತ್ಪತ್ತಿಯಾಗಿರುವ ತ್ಯಾಜ್ಯಾವನ್ನು ಸಮರ್ಪಕವಾಗಿ ಸಾಗಿಸಲು ಟ್ರಾಕ್ಟರ್ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮಾತನಾಡಿ, ಸಮಾಜದಲ್ಲಿ ಮತ್ತಷ್ಟು ಸೌಹಾರ್ದ ವಾತಾವರಣ ನಿರ್ಮಾಣ ಆಗಬೇಕಾದರೆ, ನಗರದಲ್ಲಿ ಮೊದಲು ಸಿಸಿ ಕ್ಯಾಮೇರಾ ಅಳವಡಿಸಬೇಕಾಗಿದೆ. ಇದಕ್ಕಾಗಿ ತಾವು ವೈಯಕ್ತಿಕವಾಗಿ 5001 ರೂ. ದೇಣಿಗೆ ನೀಡುತ್ತೇನೆ ಹಾಗೂ ಸಿಸಿ ಕ್ಯಾಮೇರಾ ಅಳವಡಿಕೆಗೆ ಸಾರ್ವಜನಿಕರಿಂದ ದೇಣಿಗೆ ಸಹ ಸಂಗ್ರಹಿಸುತ್ತೇವೆ ಎಂದರು.

      ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಅನೀಸ್ ಪಾಷಾ ಮಾತನಾಡಿ, ಕೆಲವರು ಕ್ಷುಲ್ಲಕ ಕಾರಣಕ್ಕೆ ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್‍ಗಿರಿ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಈ ನೈತಿಕ ಪೊಲೀಸ್‍ಗಿರಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

      ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ, ಡಿವೈಎಸ್ಪಿ ಎಂ.ಬಾಬು, ಪಾಲಿಕೆ ಆರೋಗ್ಯ ಶಾಖೆಯ ಚಂದ್ರಶೇಖರ್ ಸುಂಖದ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಿಪಿಐ ಉಮೇಶ ನಿರೂಪಿಸಿದರು. ಸಿಪಿಐ ಆನಂದ್ ಸ್ವಾಗತಿಸಿದರು. ಇಪ್ಟಾ ಕಲಾವಿದ ಐರಣಿ ಚಂದ್ರು ಜಾಗೃತ ಗೀತೆ ಹಾಡಿದರು.

  ಒಮ್ಮೆ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ, ಆತನಿಗೆ ಶಿಕ್ಷೆ ನೀಡಿದಾಗ ಆತ ಸರಿದಾರಿಯಲ್ಲಿ ಮುನ್ನಡೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ತಪ್ಪಿತಸ್ಥರನ್ನು ಪೊಲೀಸರು ಕರೆದೊಯ್ದಾಗ ತಪ್ಪಿತಸ್ಥರ ಪರಬಾರದೆ, ಶಿಕ್ಷೆ ನೀಡಲು ಸಹಕರಿಸಬೇಕು.
                                                                 -ಆರ್.ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

 

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link