ಸರ್ಕಾರಗಳು ರೈತರ ಹಿತ ಕಾಪಾಡಬೇಕು

ಗುಬ್ಬಿ

          ಕಳೆದ ಹಲವು ವರ್ಷಗಳಿಂದಲೂ ಸಮರ್ಪಕವಾಗಿ ಮಳೆ ಬಾರದೆ ರೈತರು ಸಾಲ ಮಾಡಿ ಬೆಳೆದ ಕೃಷಿ ಬೆಳೆಗಳು ಒಣಗುತ್ತಿದ್ದು ಅಲ್ಪ ಸ್ವಲ್ಪ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ದೊರೆಯದೆ ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ತೀವ್ರತರ ಸಮಸ್ಯೆ ಎದುರಿಸುವಂತಾಗಿದ್ದು ಸರ್ಕಾರಗಳು ರೈತರ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸುವ ಮೂಲಕ ರೈತರ ಹಿತ ಕಾಪಾಡುವಂತೆ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ತಿಳಿಸಿದರು.

           ತಾಲ್ಲೂಕಿನ ಬೆಲವತ್ತ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಏರ್ಪಡಿಸಿದ್ದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಯಾವುದೇ ದೃಢನಿರ್ಧಾರ ಕೈಗೊಳ್ಳದಿರುವ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ನ.19 ರಂದು ವಿಧಾನ ಸೌಧ ಮುತ್ತಿಗೆ ಹಾಕುತ್ತಿದ್ದು ಸರ್ಕಾರಗಳು ತ್ವರಿತವಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಒತ್ತಾಯಿಸಿದರು.

             ನ.30 ರಂದು ದೆಹಲಿಯಲ್ಲಿ ರೈತರು ಸೇರಿದಂತೆ ಹಲವು ಸಂಘಟನೆಗಳು ಏಕಕಾಲದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ರಾಜ್ಯ ಸರಕಾರ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 2 ಲಕ್ಷ ಹಾಗೂ ಸಹಕಾರ ಸಂಘದಲ್ಲಿ ಒಂದು ಲಕ್ಷ ಮನ್ನಾ ಮಾಡಿದ್ದಾರೆ. ಆದರೆ ಇದು ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮೊದಲು ತಮ್ಮ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ತಿಳಿಸಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಕೈ ಬಿಟ್ಟಿದ್ದಾರೆ. ಹಾಗಾಗಿ ನಮ್ಮ ಸಮಸ್ಯೆಗಳು ಬಗೆಹರಿಸುವವರೆಗೂ ಹೋರಾಟ ಬೀಡುವುದಿಲ್ಲ ಎಂದು ತಿಳಿಸಿದರು.

           ರೈತ ಸಂಘದ ಜಿಲ್ಲಾ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿಯು ಇಂದು ರೈತರಿಂದ ಲಂಚ ವಸೂಲಿ ಮಾಡುತ್ತಿದ್ದು ಅವರ ಜೀವನವನ್ನೆ ಸರ್ವನಾಶ ಮಾಡುತ್ತಿದ್ದಾರೆ. ಬರಗಾಲದಿಂದ ರೈತರ ಬದುಕು ತತ್ತರಿಸಿದ್ದರೂ ಅವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ನಿಲ್ಲಿಸಲು ಈ ಸರಕಾರಗಳಿಂದ ಸಾಧ್ಯವಾಗಿಲ್ಲ. ಸರಕಾರಗಳು ಕೇವಲ ರೈತರ ಹೆಸರನ್ನು ಹೇಳಿಕೊಂಡು ಕೋಟ್ಯಂತರ ಹಣವನ್ನು ಲೂಟಿ ಮಾಡುತ್ತಿದ್ದು ರೈತರಿಗೆ ನೀಡಬೇಕಾದಂತಹ ಯಾವುದೇ ಸೌಲಭ್ಯವನ್ನು ನೀಡುತ್ತಿಲ್ಲ.

           ಹೇಮಾವತಿ ನಾಲೆಯನ್ನು ವಿಸ್ತಾರ ಮಾಡಿ ಹೆಚ್ಚಿನ ನೀರನ್ನು ತಾಲ್ಲೂಕಿಗೆ ಹರಿಸಿದ್ದರೆ ಇಂದು ಸಾಕಷ್ಟು ಭೂಮಿ ನೀರಾವರಿಯನ್ನು ಪಡೆಯಬಹುದಿತ್ತು. ಆದರೆ ಅಂತಹ ಕೆಲಸವನ್ನು ಮಾಡದೆ ಅನಗತ್ಯವಾದ ಯೋಜನೆಗಳನ್ನು ಮಾಡುತ್ತಿವೆ. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಯಾವ ಸರಕಾರಗಳು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

         ಪ್ರಧಾನ ಕಾರ್ಯದರ್ಶಿ ವೆಂಕಟೇಗೌಡ, ಜಗದೀಶ್, ಹಾರನಹಳ್ಳಿ ಪ್ರಭಣ್ಣ, ಲೋಕೇಶ್, ಸಿ.ಟಿ.ಕುಮಾರ್, ಮೂಡಲಪ್ಪ, ಚಿಕ್ಕಗೌಡ, ಬಸವರಾಜು ಚನ್ನಬಸವಣ್ಣ, ನಂದೀಶ್, ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link