ಸರ್ಕಾರಗಳ ಸಂಪರ್ಕ ಕೊಂಡಿಯಾಗಿದ್ದ ಅನಂತ್

ದಾವಣಗೆರೆ:

      ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರ ಸಚಿವ ಹೆಚ್.ಎನ್.ಅನಂತಕುಮಾರ್ ಅಗಲಿಕೆಯಿಂದ ಪಕ್ಷಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.

      ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಅನಂತ್‍ಕುಮಾರ್ ನಿಧನದ ಹಿನ್ನೆಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನಂತಕುಮಾರ್ ಅವರು ಪಕ್ಷನಿಷ್ಠ ಹಾಗೂ ಪ್ರಾಮಾಣಿಕ ನಾಯಕರಾಗಿದ್ದರು ಎಂದು ಸ್ಮರಿಸಿದರು.

       ಉತ್ತಮ ಸಂಘಟಕರಾಗಿದ್ದ ಅನಂತಕುಮಾರ್ ಅವರು ಎಬಿವಿಪಿ ಮತ್ತು ಬಿಜೆಪಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರು ಸಂಸದರಾಗಿ ಆಯ್ಕೆಯಾದಾಗಿನಿಂದಲೂ ಕೆಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ಸಹ ಸರಳ, ಸಜ್ಜನಿಕೆಯ ರಾಜಕಾರಣಕ್ಕೆ ಹೆಸರಾಗಿದ್ದರು. ಅಲ್ಲದೆ, ಪಕ್ಷದ ಕಾರ್ಯಕರ್ತರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು ಎಂದರು.

       ನಗರಸಭೆ ಮಾಜಿ ಸದಸ್ಯ ಪಿ.ಸಿ.ಮಹಾಬಲೇಶ್ವರ ಮಾತನಾಡಿ, ನಾನು 80ರ ದಶಕದಲ್ಲಿ ಅಭಾವಿಪ ನಗರ ಕಾರ್ಯದರ್ಶಿಯಾಗಿದ್ದ ಸಂದರ್ಭದಿಂದಲೂ ಈಗಿನ ವರೆಗೂ ಅವರ ಒಡಾನಟದಲ್ಲಿದ್ದೆ. ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿ ಪರಿಷತ್ ಅನ್ನು ಬಲಿಷ್ಠಗೊಳಿಸಲು ಸಾಕಷ್ಟು ಶ್ರಮಿಸಿದ್ದರು. ನಂತರ ರಾಜಕೀಯ ಪ್ರವೇಶ ಮಾಡಿದ ಅವರು ಸಂಸದರಾದರು. ನಾನು ಅವರನ್ನು ಯಾವಾಗ ಭೇಟಿಯಾದರೂ ನೀನು ಬೆಂಗಳೂರಿಗೆ ಬಂದು ಬಿಡು. ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಹೇಳುತ್ತಿದ್ದರು. ಹೀಗೆ ನನ್ನಂಥಹ ಸಾಮಾನ್ಯ ಕಾರ್ಯಕರ್ತರನ್ನು ರಾಜಕೀಯ ನಾಯಕನನ್ನಾಗಿ ಮಾಡುವ ಕನಸು ಅವರಿಗಿತ್ತು ಎಂದು ನೆನೆದರು.

        ಬಿಜೆಪಿ ಮುಖಂಡ ಗುರುಸ್ವಾಮಿ ಮಾತನಾಡಿ, ಹಿಂದೆ ಬಿಜೆಪಿ ಎಂದರೆ, ಬ್ರಾಹ್ಮಣರಿಗೆ ಸೀಮಿತವಾಗಿರುವ ಪಕ್ಷ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅಲ್ಲದೆ, ಆಗ ಬಿಜೆಪಿಗೆ ಲಿಂಗಾಯತರು ಸಹ ವೋಟು ಹಾಕುತ್ತಿರಲಿಲ್ಲ. ಇದನ್ನು ಅರಿತ ಅನಂತಕುಮಾರ್ ಎಲ್ಲಾ ಜಾತಿ, ಜನಾಂಗದವರನ್ನು ಬಿಜೆಪಿಗೆ ಕರೆತಂದು ಪಕ್ಷ ಸಂಘಟನೆ ಮಾಡಿದ್ದರ ಫಲವಾಗಿ ಇಂದು ರಾಜ್ಯದಲ್ಲಿ ಪಕ್ಷ ಬೃಹದಾಕಾರವಾಗಿ ಬೆಳೆದಿದೆ ಎಂದು ಅನಂತರ ಸಂಘಟನಾ ಚತುರತೆಯನ್ನು ಬಣ್ಣಿಸಿದರು.

       ಎಸ್‍ಸಿ ಮೋರ್ಚಾ ಮುಖಂಡ ಎಲ್.ಡಿ.ಗೋಣೆಪ್ಪ ಮಾತನಾಡಿ, ಪಕ್ಷದ ಕಾರ್ಯಕ್ರಮದ ಹಿನ್ನಲೆಯಲ್ಲಿ ಸುಮಾರು ಎರಡು ದಶಕಗಳ ಹಿಂದೆ ದಾವಣಗೆರೆಯಿಂದ ಒಂಭತ್ತು ಜನರು ದೆಹಲಿಗೆ ಹೋಗಿದ್ದೇವು. ಆಗ ನಮ್ಮನ್ನೆಲ್ಲ ಅತ್ಯಂತ ಗೌರವದಿಂದ ಸತ್ಕರಿಸಿದ್ದರು. ವಸತಿ, ನಮ್ಮ ಶೈಲಿಯ ಊಟ, ತಿಂಡಿಯ ವ್ಯವಸ್ಥೆ ಮಾಡಿದ್ದರು. ಅಲ್ಲದೆ, ಸಂಸತ್‍ಭವನ ಸೇರಿದಂತೆ ಅನೇಕ ಸ್ಥಳಗಳ ವೀಕ್ಷಣೆಗೂ ಅವಕಾಶ ಕಲ್ಪಿಸಿದ್ದರು ಎಂದರು.

         ಇನ್ನೋರ್ವ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಅವರು ಜಿಲ್ಲೆಗೆ ವಾಂಬೆ (ವಾಲ್ಮೀಕಿ-ಅಂಬೇಡ್ಕರ್ ವಸತಿ ಯೋಜನೆ) ಯೋಜನೆಯಡಿ ಸುಮಾರು ಎರಡು ಸಾವಿರ ಮನೆಗಳನ್ನು ಕೇಂದ್ರ ಸರ್ಕಾರದಿಂದ ಕೊಡಿಸಿದ್ದರು. ಬಸಾಪುರ ಗ್ರಾಮಕ್ಕೆ ಈ ಯೋಜನೆಯ ಉದ್ಘಾಟನೆಗೂ ಆಗಮಿಸಿದ್ದರು. ಇದನ್ನು ನೋಡಿದರೆ, ಜನಪರ ಕಾಳಜಿ ಕಾಣುತ್ತದೆ ಎಂದು ಹೇಳಿದರು.

         ಸಂತಾಪ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಕೆ.ಆರ್. ಜಯಶೀಲಾ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್. ಶಿವಕುಮಾರ್, ಎನ್.ರಾಜಶೇಖರ್, ಬಿ.ರಮೇಶ ನಾಯ್ಕ, ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಬಿ.ಎಂ. ಸತೀಶ್, ಪ್ರಭು ಕಲ್ಬುರ್ಗಿ, ಹೇಮಂತಕುಮಾರ್, ಸಹನಾ ರವಿ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link