ಸರ್ಕಾರದ ಉಳಿವು ಅಳಿವು ಕಾಂಗ್ರೆಸ್ ಮುಖಂಡರ ಕೈಯಲ್ಲಿ-ಶ್ರೀರಾಮುಲು

ಚಳ್ಳಕೆರೆ

                ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರ ಅಸ್ಥಿತ್ವಕ್ಕೆ ಬಂದು ಕೇವಲ 93 ದಿನಗಳಾಗಿದ್ದು, ಈ ಸರ್ಕಾರದ ಅಳಿವು ಉಳಿವಿನ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಬಾರಿ ವ್ಯತಿರಿಕ್ತ ಹೇಳಿಕೆಗಳು ವ್ಯಕ್ತವಾಗಿವೆ. ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಬೆಂಬಲಿಗರು ಸರ್ಕಾರದ ಉಳಿವಿನ ಬಗ್ಗೆ ಸಂದೇಹ ವ್ಯಕ್ತ ಪಡಿಸಿದರೆ, ಸಚಿವ ಡಿ.ಕೆ.ಶಿವಕುಮಾರ್ ಇದಕ್ಕೆ ವ್ಯತಿರಿಕ್ತ ಹೇಳಿಕೆಯನ್ನು ನೀಡುತ್ತಿದ್ಧಾರೆ. ಒಟ್ಟಿನಲ್ಲಿ ರಾಜ್ಯದ ಜನತೆ ಈ ಸರ್ಕಾರದ ಮೇಲೆ ಇನ್ನೂ ಪೂರ್ಣ ವಿಶ್ವಾಸವಿಟ್ಟಿಲ್ಲವೆಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.

                  ಅವರು ನಗರಕ್ಕೆ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಬಳ್ಳಾರಿ ರಸ್ತೆಯಲ್ಲಿ ಪತ್ರಿಕೆಯೊಂದಿಗೆ ಪ್ರಸ್ತುತ ರಾಜ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ತಮ್ಮದೇಯಾದ ದಾಟಿಯಲ್ಲಿ ವಿಶ್ಲೇಷಣೆ ಮಾಡಿದರು. ಮೂರು ತಿಂಗಳುಗಳ ನಂತರ ಕಾಂಗ್ರೆಸ್ ಪಕ್ಷದಲ್ಲಿ ಪ್ರಸ್ತುತ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತದ ಬಗ್ಗೆ ನಿರಾಸೆ ಭಾವನೆ ಮೂಡಿದ್ದು, ಮತ್ತೊಮ್ಮೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ಕಾಂಗ್ರೆಸ್ ಪಕ್ಷದ ಅನೇಕ ದುರೀಣರು ತೆರೆಮರೆಯಲ್ಲಿ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ.

                    ರಾಜ್ಯ ಸರ್ಕಾರ ಅನಗತ್ಯವಾಗಿ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ನೆರವು ನೀಡಲ್ಲ ಎನ್ನುವ ಅರ್ಥದಲ್ಲಿ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ನೀಡುವಂತೆ ರಾಜ್ಯ ಸರ್ಕಾರಕ್ಕೂ ತನ್ನ ನೆರವನ್ನು ನೀಡಿದೆ. 13ನೇ ಹಣ ಕಾಸಿನ ಯೋಜನೆಯಲ್ಲಿ ರಾಜ್ಯಕ್ಕೆ 88,583 ಸಾವಿರ ಕೋಟಿ ಹಣವನ್ನು ನೀಡಿದೆ. 14ನೇ ಹಣಕಾಸಿನಲ್ಲಿ ರಾಜ್ಯಕ್ಕೆ 2.10 ಲಕ್ಷ ಕೋಟಿ ಅನುದಾನ ನೀಡಿದೆ. 14ನೇ ಹಣಕಾಸಿನಲ್ಲಿ ಚಿತ್ರದುರ್ಗ ಜಿಲ್ಲೆಗೆ ವಿಶೇಷವಾಗಿ 4.685 ಕೋಟಿ ನೀಡಿದೆ. ಚಳ್ಳಕೆರೆ ನಗರಸಭೆಗೆ ಕಳೆದ 14-15, 15-16, 16-17ನೇ ಸಾಲಿನಲ್ಲಿ ಹಂತ ಹಂತವಾಗಿ ಒಟ್ಟು 900 ಕೋಟಿಯನ್ನು ನಗರದ ಅಭಿವೃಧ್ಧಿಗೆ ನೀಡಿದೆ. ಆದರೆ, ಈ ಭಾರಿ ಮೊತ್ತದ ಹಣ ವ್ಯವಸ್ಥಿತವಾಗಿ ರಾಜ್ಯದ ಅಭಿವೃದ್ಧಿಗೆ ಬಳಸಲಾಗಿದೆ ಎಂಬ ಬಗ್ಗೆ ಇನ್ನೂ ಸರ್ಕಾರದಿಂದ ತಿಳಿಯಬೇಕಿದೆ ಎಂದರು.

                    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಇತ್ತೀಚೆಗೆ ಮಂಡಿಸಿದ ಬಜೆಟ್‍ನಲ್ಲಿ ಸಣ್ಣ ವ್ಯಾಪಾರಸ್ಥರಿಗೆ 25 ಸಾವಿರ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿದ್ದು, ಬಜೆಟ್ ಮಂಡನೆಯಾಗಿ 2 ತಿಂಗಳು ಆದರೂ ಯಾವುದೇ ವ್ಯಾಪಾರಿಗೆ ಒಂದು ರೂಪಾಯಿ ಸಹ ಸಾಲ ನೀಡಿಲ್ಲ. ಇತ್ತೀಚೆಗೆ ತಾನೇ ಖಾಸಗಿ ವ್ಯಕ್ತಿಗಳಿಂದ ಸಾಲ ಮನ್ನಾ ಮಾಡುವ ಬಗ್ಗೆ ಮಾತನಾಡಿದ್ಧಾರೆ. ಆದರೆ, ಇದುವರೆಗೂ ಕುಮಾರಸ್ವಾಮಿಯವರು ನೀಡಿದ ಯಾವುದೇ ಭರವಸೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಪ್ರಾಯಶಃ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ವಿಜಯದತ್ತ ತೆಗೆದುಕೊಂಡು ಹೋಗಲು ಈ ರೀತಿಯ ಭರವಸೆ ನೀಡುತ್ತಿದ್ದಾರೆಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ ಎಂದರು.

                   ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ನಿರಂತರವಾಗಿ ಕೇಂದ್ರ ಸರ್ಕಾರದ ಮೇಲೆ ಅನಗತ್ಯ ಟೀಕಾಪ್ರಹಾರಗಳನ್ನು ಮಾಡುವುದು ಸರಿಯಲ್ಲ. ಕೊಡಗು ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಅರಿಯಲು ಮಾನ್ಯ ಪ್ರಧಾನ ಮಂತ್ರಿಗಳ ಸೂಚನೆ ಮೇರೆಗೆ ರಕ್ಷಣಾ ಮಂತ್ರಿಗಳು ಆಗಮಿಸಿದ್ದು, ಅವರು, ವಾಸ್ತವ ಪರಿಸ್ಥಿತಿಯನ್ನು ಅರಿತು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ ನಂತರ ಪರಿಹಾರ ನೀಡುವ ಬಗ್ಗೆ ಸೂಕ್ತ ನಿರ್ಧಾರವನ್ನು ಪ್ರಧಾನ ಮಂತ್ರಿಗಳು ಕೈಗೊಳ್ಳುತ್ತಾರೆ. ಆದರೆ, ಹಾನಿಯ ಪ್ರಮಾಣದ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಮಾಹಿತಿಯನ್ನು ಇದುವರೆಗೂ ನೀಡಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಮನವಿಯನ್ನು ಮಾಡಿಲ್ಲ. ಇತ್ತೀಚೆಗೆ ತಾನೇ ಕೋಲಾರ ಜಿಲ್ಲಾಧಿಕಾರಿ ವಿವಿಧ ಇಲಾಖೆ ಅಧಿಕಾರಿಗಳು ನಷ್ಟದ ಪ್ರಮಾಣದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ ಎಂದಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರವನ್ನು ದೂರುವ ಉಪಮುಖ್ಯಮಂತ್ರಿಗಳು ರಾಜ್ಯದ ಜನತೆಯ ಪರವಾಗಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ ಎಂದರು.
                    ಕೊಡಗು ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ರಕ್ಷಣಾ ಸಚಿವರಿಗೆ ಯಾವ ಪ್ರದೇಶಕ್ಕೆ ಭೇಟಿ ನೀಡಬೇಕು ಎಂಭ ಬಗ್ಗೆ ಜಿಲ್ಲಾ ಆಡಳಿತ ಸ್ವಷ್ಟ ಮಾಹಿತಿ ನೀಡಲ್ಲ. ಉಸ್ತುವಾರಿ ಸಚಿವ ಮಹೇಶ್‍ರವರು ಸಹ ಪ್ರವಾಸದ ವೇಳೆಯಲ್ಲಿ ಹೆಚ್ಚು ಉತ್ಸಾಹ ತೋರಲಿಲ್ಲ. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಅಧಿಕಾರಿಗಳು ಮತ್ತು ಸಚಿವರ ವ್ಯತಿರಿಕ್ತ ಹೇಳಿಕೆಗಳಿಂದ ಅಸಮದಾನಗೊಂಡಿದ್ದು ನಿಜ. ಆದರೆ, ಈ ಬಗ್ಗೆ ಉಪಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳು ಮತ್ತು ಸಚಿವರಿಂದ ಪ್ರವಾಸದ ಅವ್ಯವಸ್ಥೆಯ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಕೇಂದ್ರ ರಕ್ಷಣಾ ಸಚಿವರ ಮೇಲೆಯೇ ಹೇಳಿಕೆ ನೀಡುವುದು ಸರಿಯಲ್ಲವೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್, ಉಪಾಧ್ಯಕ್ಷ ರಾಮದಾಸ್, ಶಿವಪುತ್ರಪ್ಪ, ಕೆ.ಟಿ.ಕುಮಾರಸ್ವಾಮಿ, ರತ್ನಮ್ಮ, ಎಂವೈಟಿ ಸ್ವಾಮಿ, ಕಾಲುವೇಹಳ್ಳಿ ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap