ಶಿರಾ:
ಸರ್ಕಾರವು ರೈತರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅಂತಹ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳುವ ಜಾಣ್ಮೆಯನ್ನು ತೋರುವ ಮೂಲಕ ತಮ್ಮ ಆರ್ಥಿಕ ಸಂಕಷ್ಟದಿಂದ ರೈತರು ಹೊರಬರಬೇಕಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಿ.ಸತ್ಯನಾರಾಯಣ್ ತಿಳಿಸಿದರು.
ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಗಂಗಾಕಲ್ಯಾಣ ಯೋಜನೆಯಡಿಯಲ್ಲಿನ ಅರ್ಹ ಫಲಾನುಭವಿಗಳಿಗೆ ಕೊಳವೆ ಬಾವಿಯ ಯಂತ್ರೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಪರಿಣಾಮ ಅಂತರ್ಜಲ ಬತ್ತುತ್ತಿದೆ. ಸಾವಿರ ಅಡಿ ಭೂಮಿ ಕೊರೆದರೂ ನೀರು ಲಭ್ಯವಾಗದಂತಾಗಿದೆ. ಕಳೆದ ಎರಡು ತಿಂಗಳಿಂದಲೂ ಹೇಮಾವತಿಯ ನೀರು ಕಳ್ಳಂಬೆಳ್ಳ ಕೆರೆಯತ್ತ ಹರಿದು ಬರುತ್ತಿದ್ದು ಇದೀಗ ಕೆಲವೇ ದಿನಗಳಲ್ಲಿ ಶಿರಾ ಕೆರೆಯನ್ನೂ ತಲುಪಲಿದೆ ಎಂದರು.
ಅತ್ಯಂತ ಕಡು ಬಡತನದ ರೈತರನ್ನು ಗುರ್ತಿಸಿ ಗಂಗಾ ಕಲ್ಯಾಣ ಯೋಜನೆಯಿಂದ ಕೊಳವೆ ಬಾವಿ ಕೆರೆಸಲಾಗಿದ್ದು ಇದೀಗ ಯಂತ್ರೋಪಕರಣಗಳನ್ನೂ ನೀಡಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 32, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 16 ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ 20 ಸೇರಿದಂತೆ ಒಟ್ಟು 68 ಮಮದಿ ಅರ್ಹ ಫಲಾನುಭವಿಗಳಿಗೆ ಕೊಳವೆ ಬಾವಿಗೆ ಅಳವಡಿಸಲಾಗುವ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ ಎಂದರು.
ಸರ್ಕಾರವು ಉತ್ತಮ ಗುಣಮಟ್ಟದ ಯಂತ್ರೋಪಕರಣಗಳನ್ನು ನೀಡಿದ್ದು ಈ ಉಪಕರಣಗಳನ್ನು ತಮ್ಮ ಮನೆಯ ವಸ್ತುಗಳಂತೆಯೇ ಬಳಸಬೇಕಿದೆ. ಬಡ ರೈತರ ಆರ್ಥಿಕ ಸಂಕಷ್ಟ ದೂರವಾಗಬೇಕಾದರೆ ಇಂತಹ ಯೋಜನೆಗಳನ್ನು ರೈತರು ಉಪಯೋಗಿಸಿಕೊಳ್ಳಬೇಕು ಎಂದು ಸತ್ಯನಾರಾಯಣ್ ತಿಳಿಸಿದರು.
ತಾ.ಪಂ. ಅಧ್ಯಕ್ಷೆ ಶ್ರೀಮತಿ ಹಂಸವೇಣಿ ಶ್ರೀನಿವಾಸ್, ನಗರಸಭಾ ಸದಸ್ಯ ಆರ್.ಉಗ್ರೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಜಿ.ಪಂ. ಸದಸ್ಯ ಎಸ್.ರಾಮಕೃಷ್ಣ, ಜೆ.ಡಿ.ಎಸ್. ಮುಖಂಡರಾದ ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ಅಧ್ಯಕ್ಷ ಶಿರಾ ರವಿ, ಕೋಟೆ ರವಿ, ತಾ.ಪಂ. ಮಾಜಿ ಸದಸ್ಯ ಎಂ.ಸಿ.ರಾಘವೇಂದ್ರ, ಶ್ರೀರಂಗ, ಅರೇಹಳ್ಳಿ ಬಾಬು, ಕಳ್ಳಂಬೆಳ್ಳ ರಾಜಣ್ಣ, ಪುಟ್ಟರಾಜು ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.