ಸರ್ಕಾರದ ಸೌಲಭ್ಯ ಅರ್ಹರಿಗೆ ದೊರಕಿಸಲು ಎಲ್ಲರೂ ಶ್ರಮಿಸಬೇಕು : ಡಿ ಸಿ ರಾಕೇಶ್ ಕುಮಾರ್

ತುಮಕೂರು
 
      ತುಮಕೂರು ನಗರವು ಸ್ಮಾರ್ಟ್ ಸಿಟಿ ಯೋಜನೆಯಡಿ ರಿಂಗ್ ರಸ್ತೆ ಅಭಿವೃದ್ಧಿ, ಸ್ಮಾರ್ಟ್ ರಸ್ತೆ ಸೇರಿದಂತೆ  ವಿವಿಧ ಸ್ಮಾರ್ಟ್ ಯೋಜನೆಗಳನ್ನು  ಕೈಗೆತ್ತಿಕೊಳ್ಳಲಾಗಿದೆ.  ಈಗಾಗಲೇ 23,11 ಕೋಟಿ ರೂ ವೆಚ್ಚದ 24 ಸಣ್ಣ ಕಾಮಗಾರಿಗಳು  ಪೂರ್ಣಗೊಂಡಿದ್ದು 612 ಕೋಟಿ ರೂ. ಮೊತ್ತದ 52 ಯೋಜನೆಗಳು ಅನುಷ್ಠಾನ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.
      ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ತುಮಕೂರು ನಗರವು ಸ್ಮಾರ್ಟ್ ಆಗುತ್ತಿದೆ. ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಹತ್ತು ಹಲವು ಅಭಿವೃದ್ದಿ ಯೋಜನೆಗಳನ್ನು ಕೈಗೊಂಡಿದೆ. ಸರ್ಕಾರದ ಉತ್ತಮ ಕಾರ್ಯಗಳಿಗೆ ಸಾರ್ವಜನಿಕರು ಒತ್ತಾಸೆಯಾಗಿ ನಿಲ್ಲಬೇಕು ಮತ್ತು ಅವುಗಳ ಸಂಪೂರ್ಣ ಲಾಭವು  ಬಡವರು ಮತ್ತು ಅರ್ಹರಿಗೆ ತಲುಪುವಂತೆ ಮಾಡುವಲ್ಲಿ ಸರ್ಕಾರಕ್ಕೆ ನೆರವಾಗಬೇಕಾಗಿದೆ ಎಂದು ತಿಳಿಸಿದರು.
     ಭಾರತದ ಸ್ವಾತಂತ್ರ್ಯ ಹೋರಾಟದ ನೆರಳಿನಲ್ಲಿಯೇ ಕರ್ನಾಟಕ ರಾಜ್ಯದಲ್ಲಿಯೂ ಶಿವಪುರ ಧ್ವಜ ಸತ್ಯಾಗ್ರಹ, ಬ್ರಿಟೀಷ್ ಕಾನೂನುಗಳಿಗೆ ಅಸಹಕಾರ ಹೀಗೆ ನೂರಾರು ಸ್ವಾತಂತ್ರ್ಯ ಚಳುವಳಿಗಳು ನಡೆದವು.    ಈ ಚಳುವಳಿಗಳಿಂದ ಪ್ರೇರೇಪಿತಗೊಂಡ ಹೋರಾಟದ ಕಿಚ್ಚು ತುಮಕೂರು ಜಿಲ್ಲೆಗೂ ವ್ಯಾಪಿಸಿ ಜಿಲ್ಲೆಯ  ತಾಳೆಕೆರೆ ಸುಬ್ರಮಣ್ಯ, ಮಾಲಿಮರಿಯಪ್ಪ, ಎಂ.ವಿ.ರಾಮರಾವ್, ಆರ್.ಎಸ್.ಆರಾಧ್ಯ,  ಹೆಂಜಾರಪ್ಪ, ಎಸ್.ಸಿದ್ದಪ್ಪ,  ಚೆನ್ನಿಗರಾಮಯ್ಯ ಮತ್ತಿತರ ನಾಯಕರುಗಳು ಸ್ವಾತಂತ್ರ್ಯ  ಚಳುವಳಿಯಲ್ಲಿ ಭಾಗವಹಿಸಿದ್ದರು. ಈ ಮಹಾನ್ ನಾಯಕರುಗಳ ಹೋರಾಟವು ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಸಹಕಾರಿಯಾಯಿತು ಎಂದು ತಿಳಿಸಿದರು.
     
     ಕಲ್ಪತರು ನಾಡಾದ ತುಮಕೂರು ಜಿಲ್ಲೆಯ ಕೈಗಾರಿಕಾ ಬೆಳವಣಿಗೆಯಲ್ಲಿ ರಾಜ್ಯದ ಎರಡನೇ ಸ್ಥಾನದಲ್ಲಿದೆ. ರಾಜಧಾನಿ ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವುದರಿಂದ ತುಮಕೂರು ಜಿಲ್ಲೆಯು ಕೈಗಾರಿಕಾ ಹಬ್‍ಆಗಿ ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆ ಹಳ್ಳ ಕಾವಲ್‍ನ ಸುಮಾರು 626 ಎಕರೆ ಪ್ರದೇಶದಲ್ಲಿ ಎಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ನಿರ್ಮಿಸಲಾಗುತ್ತಿದೆ. ತುಮಕೂರು ನಗರದಲ್ಲಿ ಇಸ್ರೋ ಸಂಸ್ಥೆಯು 120 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಘಟಕವನ್ನು ಪ್ರಾರಂಭ ಮಾಡುತ್ತಿದ್ದು, ಇದರಿಂದ ಜಿಲ್ಲೆಯ  ಸಾವಿರಾರು  ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಎಂದರು.
     
     ಜಿಲ್ಲೆಯಲ್ಲಿರುವ ವಸಂತನರಸಾಪುರ  ಕೈಗಾರಿಕಾ ಪ್ರದೇಶ 1ರಿಂದ 6ನೇ ಹಂತದವರೆಗೆ  ಇರುವ ಪ್ರದೇಶವನ್ನು ಕೇಂದ್ರ  ಸರ್ಕಾರದಿಂದ ನ್ಯಾಷನಲ್  ಇನ್ವೆಷ್ಟ್‍ಮೆಂಟ್ ಅಂಡ್ ಮ್ಯಾನುಫ್ಯಾಕ್ಟರಿಂಗ್ ಜೋನ್  ಎಂದು ಗುರುತಿಸಲಾಗಿದೆ.  ಸರ್ಕಾರವು ಈ ಕೈಗಾರಿಕಾ ಪ್ರದೇಶದಲ್ಲಿ ಪ್ರಾರಂಭ ಮಾಡುವ  ಕೈಗಾರಿಕಾ ಘಟಕಗಳ  ಉದ್ದಿಮೆದಾರರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಿದೆ ಎಂದರು.
    ಸಮಾರಂಭದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರಾದ ವಿ.ಎಸ್.ರಾಮಚಂದ್ರನ್, ಟಿ.ಆರ್.ರೇವಣ್ಣ, ಡಿ.ಎನ್.ಸಂಪತ್, ಶಂಕರಪ್ಪ, ಟಿ.ಎಚ್.ತಿಮ್ಮಯ್ಯರವರನ್ನು ಸನ್ಮಾನಿಸಲಾಯಿತು. ಜೊತೆಗೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಥ ಸಂಚಲನದಲ್ಲಿ ವಿವಿಧ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 
      ಸಮಾರಂಭದಲ್ಲಿ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ,  ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಜಿ.ಪಂ ಅಧ್ಯಕ್ಷೆ ಲತಾರವಿಕುಮಾರ್, ಉಪಾಧ್ಯಕ್ಷೆ ಶಾರದಾನರಸಿಂಹಮೂರ್ತಿ, ಮಹಾನಗರ ಪಾಲಿಕೆ ಮಹಾಪೌರರಾದ ಲಲಿತಾರವೀಶ್, ಉಪಮೇಯರ್ ರೂಪಶ್ರೀಶೆಟ್ಟಾಳಯ್ಯ ಡಿಎಚ್‍ಒ ಚಂದ್ರಿಕಾ, ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಸೇರಿದಂತೆ ಇನ್ನಿತರ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap