ಚಳ್ಳಕೆರೆ-05
ನಗರದ ಹಲವಾರು ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸರ್ವಪಲ್ಲಿ ಡಾ.ರಾಧಕೃಷ್ಣರವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಆದರೆ, ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ವಿಭಿನ್ನವೆನ್ನುವಂತೆ ತಮಗೆ ಪ್ರತಿನಿತ್ಯ ಶಿಕ್ಷಣ ನೀಡುವ ಎಲ್ಲಾ ಉಪನ್ಯಾಸಕರನ್ನು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಹೊಸ ಮೆರಗು ತಂದುಕೊಟ್ಟಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪಿ.ಎನ್.ಕೃಷ್ಣಪ್ರಸಾದ್ ಮಾತನಾಡಿ, ಇಂದು ಶಿಕ್ಷಕರಾದ ನಾವೆಲ್ಲರೂ ಸಂತಸ ಪಡುವ ದಿನವಾಗಿದೆ. ಕಾರಣ, ಶಿಕ್ಷಕರನ್ನು ಗೌರವಿಸಬೇಕು ಎನ್ನುವ ಜಾಗೃತಿ ವಿದ್ಯಾರ್ಥಿಗಳಲ್ಲಿ ಮೂಡಿದೆ. ಕೇವಲ ಕಲಿಕೆಯೊಂದೆ ಜೀವನಕ್ಕೆ ನಾಂದಿಯಾಗದು. ಲೌಕಿಕ ಜ್ಞಾನವೂ ಸಹ ಜೀವನದ ತಳಹದಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎಲ್ಲಾ ಉಪನ್ಯಾಸಕರನ್ನು ಸೇರಿಸಿ ಅವರಿಗೆ ಸಿಹಿ ನೀಡಿ ಶಿಕ್ಷಕರ ದಿನಾಚರಣೆಯ ಶುಭ ಕೋರಿರುವ ಈ ಕಾರ್ಯಕ್ರಮ ಅರ್ಥಗರ್ಭಿತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರುಗಳಾದ ಎಸ್.ಲಕ್ಷ್ಮಣ್, ವಸಂತಕುಮಾರ್, ರಮೇಶ್, ಲೋಹಿತ್, ನಾಗರಾಜು, ಮಂಜುನಾಥ, ಜಗದೀಶ್, ಶಿವಪ್ಪ, ಶಾಂತಕುಮಾರಿ, ವೀರಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶಿಷ್ಯ ವರ್ಗ ನೀಡಿದ ಅಭಿನಂದನೆಯನ್ನು ಸಂತಸದಿಂದಲೇ ಸ್ವೀಕರಿಸಿದರು.