ಹುಳಿಯಾರು:
ಶಿಕ್ಷಕರು, ಪೋಷಕರು, ಸಂಘಸಂಸ್ಥೆಗಳು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯ. ಹಾಗಾಗಿ ಎಲ್ಲರೂ ಒಂದಾಗಿ ಬದಲಾವಣೆಗಾಗಿ ದುಡಿಯಬೇಕಿದೆ ಎಂದು ಪ್ರಖ್ಯಾತ ನಟ ಪ್ರಕಾಶ್ ರೈ ಹೇಳಿದರು.
ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಿ ಅವರ ಕಲಿಕಾ ಸಾಮಥ್ರ್ಯ ಮಟ್ಟಕ್ಕೆ ಇಳಿತು ಪಠ್ಯ ಬೋದನೆ ಮಾಡುವ ಮೂಲಕ ತರಗತಿಗಳನ್ನು ಜೀವಂತವಾಗಿಟ್ಟುಕೊಂಡು ಶಾಲೆಗೆ ಮಕ್ಕಳು ಓಡೋಡಿ ಬರುವಂತೆಯೂ ಕಲಿಕೆಯಲ್ಲಿ ಲವಲವಿಕೆಯಿಂದ ತೊಡಗುವಂತೆಯೂ ಮಾಡಬೇಕಿದೆ. ಪೋಷಕರು ಶಾಲೆಗೆ ಸದಾ ಬೇಟಿ ನೀಡಿ ನ್ಯೂನತಗಳನ್ನು ಅರಿತು ತಾವೇ ಸ್ವಯಂ ಪ್ರೇರಣೆಯಿಂದ ಬಗೆಹರಿಸುವ ಜೊತೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೆನ್ನು ಬಿದ್ದು ಶಾಲಾ ಅಭಿವೃದ್ಧಿ ಮಾಡಿಸಬೇಕಿದೆ. ಸಂಘ ಸಂಸ್ಥೆಗಳೂ ಸಹ ಕನಿಷ್ಠ ತಿಂಗಳಿಗೊಂದು ಪಠ್ಯೇತರ ಚಟುವಟಿಕೆ ಸಂಘಟಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾದಾಗ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 5 ಸರ್ಕಾರಿ ಶಾಲೆಗಳನ್ನು ಪ್ರಕಾಶ್ ರಾಜ್ ಫೌಂಡೇಶನ್, ಚರಕ ಚಾರಿಟಬಲ್ ಟ್ರಸ್ಟ್ ಹಾಗೂ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಆಶ್ರಯದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 5 ಶಾಲೆಗಳಲ್ಲಿ ಹೊಯ್ಸಳಕಟ್ಟೆ ಸರ್ಕಾರಿ ಶಾಲೆಯೂ ಒಂದಾಗಿದ್ದು ಈಗಾಗಲೇ ಶಾಲೆಗೆ ರಂಗಭೂಮಿ ಶಿಕ್ಷಕರನ್ನು ನೇಮಿಸಲಾಗಿದೆ. ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗಿದೆ. ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡೆ, ಸೇರಿದಂತೆ ಇತರ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು’ ಎಂದು ಹೇಳಿದರು.
ಶಿಥಿಲಗೊಂಡಿರುವ ಕೊಠಡಿಗಳ ಅಭಿವೃದ್ಧಿ ಜತೆ ಶೌಚಾಲಯಗಳನ್ನು ಸರಿಪಡಿಸಲಾಗುವುದು. ಮಕ್ಕಳ ಇಂಗ್ಲಿಷ್ ಕಲಿಕೆಗೆ ಶಿಕ್ಷಕರು ಸೇರಿದಂತೆ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಲಾಗುವುದು. ಮಕ್ಕಳಿಗೆ ಪ್ರತಿ ತಿಂಗಳು ಮಗ್ಗಿ ಮಾಸ, ವ್ಯಾಕರಣ ಮಾಸ ಸೇರಿದಂತೆ ವಿವಿಧ ಪಠ್ಯವನ್ನು ಪರಿಚಯಿಸಲಾಗುವುದು, ಒಟ್ಟಾರೆ ಮುಂದಿನ 6 ತಿಂಗಳಲ್ಲಿ ಉತ್ತಮ ಶಾಲೆಯನ್ನಾಗಿ ಪರಿವರ್ತಿಸಿ
ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳು ಹಾಗೂ ಪೋಷಕರನ್ನು ಸೆಳೆಯುವುದು ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಸಮಾನ ಶಿಕ್ಷಣ ಹೋರಾಟಗಾರ್ತಿ ಮಲ್ಲಿಗೆ, ಪ್ರಕಾಶ್ ರಾಜ್ ಫೌಂಡೇಶನ್ನ ದಿಶಾ, ದೀಪು, ಚಂದನ್, ಶೋಭನ್, ಕಸಾಪ ಅಧ್ಯಕ್ಷೆ ಎನ್.ಇಮದಿರಮ್ಮ, ಸುವರ್ಣ ವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ಯುವರಾಜ್, ಪದಾಧಿಕಾರಿಗಳಾದ ಗುರು, ಎಲ್.ಬಿ.ಮಂಜುನಾಥ್, ಕಲ್ಲೇನಹಳ್ಳಿ ಶಿವಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಜ್ಜಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ರಘುವೀರ್, ಎಚ್.ಆರ್.ಗಿರೀಶ್, ಚಿತ್ತಪ್ಪ, ಮುಖ್ಯ ಶಿಕ್ಷಕ ಪರಶಿವಮೂರ್ತಿ ಇದ್ದರು.