ಸವಾಲು ಎದುರಿಸುವ ಶಿಕ್ಷಣ ಪಡೆಯಿರಿ : ಲೆಪ್ಟಿನೆಂಟ್ ಡಾ.ವೈ.ರಮೇಶ್

ಮಿಡಿಗೇಶಿ

        ಪುಸ್ತಕ ಜ್ಞಾನದ ಜೊತೆಗೆ ಅನುಭವದ ಪಾಠವನ್ನು ಕಲಿಯಬೇಕು. ಪದವಿ ಜೊತೆಗೆ ಜ್ಞಾನಸಂಪತ್ತನ್ನು ವೃದ್ದಿಸುವ ಅನೇಕ ಕೌಶಲ್ಯಗಳನ್ನು ಕಲಿತು, ಸ್ಪರ್ಧಾತ್ಮಕ ಜಗತ್ತಿಗೆ ಅವಶ್ಯಕವಾಗಿ ಬೇಕಾದ ಜ್ಞಾನವನ್ನು ಸಂಪಾದಿಸಬೇಕು. ಈ ನಿಟ್ಟಿನಲ್ಲಿ ಸವಾಲನ್ನು ಎದುರಿಸುವ ಶಿಕ್ಷಣ ಪಡೆಯುವ ಮೂಲಕ ಸ್ಪರ್ಧಾತ್ಮಕ ಜಗತ್ತಿನ ಅವಕಾಶಗಳನ್ನು ತಮ್ಮದಾಗಿಸಿಕೊಂಡು ಬದುಕಿನ ಹೋರಾಟದಲ್ಲಿ ಜಯಶಾಲಿಯಾಗಬೇಕು ಎಂದು ಕಾಲೇಜು ಶಿಕ್ಷಣ ಪ್ರಾದೇಶಿಕ ಕಚೆರಿಯ ವಿಶೇಷಾಧಿಕಾರಿ ಲೆಪ್ಟಿನೆಂಟ್ ಡಾ.ವೈ.ರಮೇಶ್ ಕರೆ ನೀಡಿದರು.

         ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2018-19ನೇ ಸಾಲಿನ ಸಾಂಸ್ಕತಿಕ, ಕ್ರೀಡೆ, ಎನ್.ಎಸ್.ಎಸ್. ಮತ್ತಿತರ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಹಣವನ್ನು ಹೇಗಾದರೂ ಸಂಪಾದಿಸಬಹುದು, ಹಣ ಸಂಪಾದನೆಯೇ ಮುಖ್ಯವಲ್ಲ, ಉತ್ತಮ ಗುಣ, ನಡತೆ, ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು. ಜೀವನದಲ್ಲಿ ಸದಾ ಎಚ್ಚರಿಕೆಯ ನಡೆಯಿರಬೇಕು.

        ಭವಿಷ್ಯ ಕಟ್ಟಿಕೊಳ್ಳುವ, ಭವಿಷ್ಯ ನಿರ್ಧರಿಸುವ ಜೀವನ ರೂಪಿಸಿಕೊಳ್ಳುವ ಶಕ್ತಿ ವಿದ್ಯಾರ್ಥಿ ಜೀವನದಲ್ಲಿದೆ. ಜ್ಞಾನವೆಂಬುದು ಯಾರ ಸ್ವತ್ತಲ್ಲ, ಯಾರು ಬೇಕಾದರೂ ಕಠಿಣ ಪರಿಶ್ರಮ, ಏಕಾಗ್ರತೆ, ನಿರಂತರ ಅಧ್ಯಯನದಿಂದ ಎಂತಹ ಸಾಧನೆಯನ್ನಾದರೂ ಮಾಡಬಹುದು. ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಮಹಿಳೆಯರಿಗೆ ಶಿಕ್ಷಣ, ಆಸ್ತಿ, ಸಮಾನತೆ ಹಕ್ಕನ್ನು ನೀಡಿರುವುದರಿಂದ ಇಂದು ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ.

        ಯಾರು ಹೆಚ್ಚು ಸಂಕಟ, ನೋವು, ಶೋಷಣೆಗೆ ಒಳಪಟ್ಟಿರುತ್ತಾರೋ ಅವರಲ್ಲಿ ಸಾಧಿಸುವ ಛಲ ಹೆಚ್ಚಾಗಿರುತ್ತದೆ. ಸಾಧಕರೆಲ್ಲರೂ ಶ್ರಮ ಸಂಸ್ಕತಿಯಿಂದ ಬಂದವರೆ ಹೊರತು ಸುಖದ ಸುಪ್ಪತ್ತಿಗೆಯಿಂದಲ್ಲ. ಆದುದರಿಂದ ಪ್ರತಿಯೊಬ್ಬರೂ ಸಾಧಕರಾಗುವ ಹಂಬಲ ಹೊಂದಬೇಕು. ಶಿಕ್ಷಕರು ಪಾಠ ಪ್ರವಚನಗಳನ್ನು ನಿರ್ವಹಿಸುವುದರ ಜೊತೆಗೆ ಮಕ್ಕಳಲ್ಲಿನ ದೋಷ, ದುರ್ಗುಣಗಳನ್ನು ಗುರ್ತಿಸಿ, ಸರಿಪಡಿಸುವ ಮೂಲಕ ಮಕ್ಕಳನ್ನು ಸರಿದಾರಿಗೆ ತರಬೇಕು. ವಿದ್ಯಾರ್ಥಿಗಳು ಪದವಿ ನಂತರದ ಅವಕಾಶಗಳನ್ನು ತಮ್ಮದಾಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

        ಸಮಸ್ಯೆಗಳನ್ನು ಮುಂದಿಟ್ಟು ಸೋಲನ್ನು ಒಪ್ಪಿಕೊಳ್ಳಬೇಡಿ : ಮುಖ್ಯ ಅತಿಥಿಗಳಾಗಿದ್ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕರಾದ ಸುಗುಣರಮೇಶ್ ಮಾತನಾಡಿ, ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಯನ್ನು ದಿಟ್ಟತನದಿಂದ ಎದುರಿಸಿ, ತಮ್ಮ ಸೋಲಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಿ ಪರಾಮರ್ಶೆ ಮಾಡಿಕೊಳ್ಳಿ, ಆದರೆ ಸಮಸ್ಯೆಗಳನ್ನು ಮುಂದಿಟ್ಟು, ಅದನ್ನೇ ನೆಪಮಾಡಿ ಒಪ್ಪಿಕೊಳ್ಳಬೇಡಿ.

         ಗೆಲುವನ್ನು ಸ್ವೀಕರಿಸಲು ಸಕಾರಾತ್ಮಕತೆ, ಸೃಜನಶೀಲತೆ, ನಿರಂತರ ಕಠಿಣ ಪರಿಶ್ರಮ ಅವಶ್ಯಕ. ಹುಟ್ಟು ಕುರುಡು ಮಹಿಳೆ ಅಖಿಲ ಭಾರತ ಮಟ್ಟದ ಐ.ಎಫ್.ಎಸ್. ಪರೀಕ್ಷೆಯನ್ನು ಪಾಸು ಮಾಡಿ ಇಡೀ ಮಹಿಳೆಯರ ಘನತೆ ಹೆಚ್ಚಿಸಿದ್ದಾರೆ. ಗೆಲುವು ತಂದುಕೊಡುವ ಖುಷಿಯ ಮುಂದೆ ಸಾವಿರಾರು ಸೋಲುಗಳ ನೋವು ಶೂನ್ಯ.

        ಆದುದರಿಂದ ಗೆಲುವಿನತ್ತ ಗುರಿಯಿರಲಿ, ಗುರಿಯೆಡೆಗೆ ಶ್ರದ್ದೆಯ ನಡೆಯಿರಲಿ. ದೊಡ್ಡ ಕನಸುಗಳನ್ನು ಸಾಕಾರಗೊಳಿಸಿಕೊಂಡು, ಸಮಾಜಕ್ಕೆ, ಹೆತ್ತವರಿಗೆ, ಗುರುಹಿರಿಯರಿಗೆ ತಮ್ಮ ಕೈಲಾದ ಕೊಡುಗೆಯನ್ನು ನೀಡಿ ಎಂದರು.

        ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ವಿದ್ಯೆ ಕಲಿಯುವ ಮಕ್ಕಳಲ್ಲಿ ವಿದ್ಯೆಗೆ ತಕ್ಕ ವಿನಯ ಮೈಗೂಡಿಸಿಕೊಂಡರೆ ತಾನು ಪಡೆದ ವಿದ್ಯೆಗೆ ಬೆಲೆ ಬರುತ್ತದೆ. ಜ್ಞಾನದಾಹದಿಂದ ಕಲಿತ ಅಕ್ಷರ ಎಂದಿಗೂ ಫಲನೀಡದಿರದು. ಮರ ಹೇಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೆರಳು, ಹಣ್ಣು, ಮರಮುಟ್ಟು ನೀಡಿ ಮನುಷ್ಯನಿಗೆ ಉಪಕಾರಿಯಾಗಿದೆಯೋ ಹಾಗೆಯೇ ವಿದ್ಯೆ ಕಲಿತವರೆಲ್ಲರೂ ಸಮಾಜಕ್ಕೆ ಉಪಕಾರಿಯಾಗಬೇಕು.

        ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗದೇ ಅಧ್ಯಯನಕ್ಕೆ ಬಳಸಿಕೊಂಡರೆ ಉತ್ತಮ ಜ್ಞಾನಿಗಳಾಗಬಹುದು. ವಿಷಯದ ಹಲವಾರು ಮಜಲುಗಳನ್ನು ಮನನ ಮಾಡಿಕೊಳ್ಳಲು ಲಭ್ಯವಿರುವ ಕಿರುತಂತ್ರಾಂಶಗಳು, ಅಂತರ್ಜಾಲವನ್ನು ಬಳಸಿಕೊಳ್ಳುವ ಜಾಣ್ಮೆ ಕಲಿಯಬೇಕು. ಸಾಧನೆಯೆಡೆಗೆ ಸದೃಢ ಮನಸ್ಸಿನಿಂದ ಮುನ್ನಡೆಯಬೇಕು. ಹೆಚ್ಚೆಚ್ಚು ವಿದ್ಯಾವಂತರಾದಷ್ಟು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ಹೊಂದಬೇಕು. ಬಹುದೊಡ್ಡ ಸಾಧಕರೆನಿಸಿದವರು ವಿದ್ಯಾರ್ಥಿದೆಸೆಯಲ್ಲಿ ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಟ್ಟುಕೊಂಡು ಸಾಧನೆಯೆಡೆಗೆ ಮುನ್ನಡೆದಿರುವುದನ್ನು ಇಂದಿನ ಯುವಜನತೆ ಗಮನದಲ್ಲಿಟ್ಟು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

          ಇದೇ ಸಂಧರ್ಭದಲ್ಲಿ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು ನ್ಯಾಯಾಂಗ ಇಲಾಖೆಯಲ್ಲಿ ನೌಕರಿ ಪಡೆದ ಹೆಚ್.ವೆಂಕಟೇಶಬಾಬು ಮತ್ತು ಪೊಲೀಸ್ ಹುದ್ದೆ ಪಡೆದ ಶ್ರೀಧರ್‍ರವರನ್ನು ಸನ್ಮಾನಿಸಲಾಯಿತು. ಹಾಗೆಯೇ ಕಾಲೇಜಿನ ಪ್ರಥಮ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ, ಸಾಂಸ್ಕøತಿಕ, ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕರಾದ ಜಿ.ಪುಟ್ಟಲಿಂಗಯ್ಯ, ಉಪನ್ಯಾಸಕ ಶಂಭುಲಿಂಗೇಶ್ವರ್ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಎಸ್.ಎಂ.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ, ಇ.ಮುನಿರಾಜ ವಾರ್ಷಿಕ ವರದಿ ವಾಚನ ಮಾಡಿ, ಆರ್.ಲಕ್ಷ್ಮೀನಾರಾಯಣ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link