ದಾವಣಗೆರೆ:
ಸಮೀಪದ ಬಾಡಾ ಕ್ರಾಸ್‍ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಲಿಂ.ಪಂಡಿತ ಪಂಚಾಕ್ಷರಿ ಗವಾಯಿ ಹಾಗೂ ಲಿಂ.ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಿಲಾಮಂಟಪ ಧನ ಸಹಾಯಾರ್ಥವಾಗಿ 20ಕ್ಕೂ ಹೆಚ್ಚು ದಾನಿಗಳು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀಕಲ್ಲಯ್ಯಜ್ಜರ ತುಲಾಭಾರ ಸೇವೆ ನಡೆಸಿದರು.
ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ.ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಪುಟ್ಟರಾಜ ಕವಿ ಗವಾಯಿಗಳು ಜಗತ್ತಿನ ಅದ್ಭುತಗಳಲ್ಲಿ ಒಂದಾಗಿದ್ದಾರೆ. ಜ್ಞಾನದ ಭಂಡಾರ, ಸಂಗೀತದ ಶಿರೋಮಣಿ, ಸಕಲ ವಾದ್ಯ ನುಡಿಸಬಲ್ಲ ಪರಿಣಿತರಾಗಿ, ತ್ರಿಭಾಷಾ ಪಂಡಿತರಾಗಿದ್ದ ಅವರೊಬ್ಬ ಅಸಾಮಾನ್ಯ ಪ್ರತಿಭೆಯಾಗಿದ್ದರು ಎಂದು ಸ್ಮರಿಸಿದರು.
ಪುಟ್ಟರಾಜ ಗವಾಯಿಗಳು ಲೋಕದಲ್ಲಿ ಕಣ್ಣಿದ್ದೂ ಕುರುಡರಾಗಿರುವವರ ಕಣ್ಣನ್ನು ತೆರೆಸಿದರು. ಪಂಚಾಕ್ಷರಿ ಗವಾಯಿಗಳು ಮನೆ ಮನೆಗೆ ಭಿಕ್ಷೆ ಬೇಡಿ ಕಷ್ಟದಿಂದ ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿದರು. ಅವರಿಗೆ ಸಂಗೀತ ವಿದ್ಯೆ ನೀಡಿ ತಯಾರು ಮಾಡಿದ ಹಾನಗಲ್ ಕುಮಾರಸ್ವಾಮಿಗಳು ಪುಟ್ಟರಾಜ ಗವಾಯಿಗಳಿಗೂ ಮಾರ್ಗದರ್ಶನ ನೀಡಿದರು. ಅಂಧರು, ಅನಾಥರು, ಕಲಾವಿದರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟರು. ಈ ಮೂವರು ದಿಗ್ಗಜರ ಪರಂಪರೆ ಪವಿತ್ರವಾದುದು ಎಂದು ಹೇಳಿದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮ ಸಂಗೀತದ ಗದ್ದುಗೆಯಾಗಿದ್ದು, ದಾವಣಗೆರೆ ಭಕ್ತರ ಭಕ್ತಿಯ ನಿದರ್ಶನವಾಗಿ ಎರಡನೇ ಶಾಖೆ ಇಲ್ಲಿದೆ. ಪುಟ್ಟರಾಜ ಗವಾಯಿಗಳು ಶಿವಮೊಗ್ಗದಲ್ಲಿ ಪ್ರವಚನ, ಸಂಗೀತ, ಭಕ್ತರ ಮನೆಗಳಲ್ಲಿ ಪೂಜೆ ನಡೆಸಿ ಆಷಾಢ ತಿಂಗಳಿಗೆ ಪುಣ್ಯ ಮಾಸದ ಕಲ್ಪನೆ ಮೂಡಿಸಿದ್ದರ ಪರಿಣಾಮ ಅಲ್ಲಿ ಮೂರನೇ ಶಾಖೆ ಬಂದಿದೆ. ಸುಂದರ ಪರಿಸರದಲ್ಲಿನ ದಾವಣಗೆರೆಯ ವೀರೇಶ್ವರ ಪುಣ್ಯಾಶ್ರಮ, ಸಂಗೀತ ವಿವಿ ಹಂತಕ್ಕೆ ಬೆಳೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ ಪುಟ್ಟರಾಜ ಕವಿ ಗವಾಯಿಗಳ ಕೀರ್ತಿ ಜಗತ್ತಿನಾದ್ಯಂತ ಹರಡಿದೆ. ಅತಿ ಹೆಚ್ಚು ತುಲಾಭಾರ ಮಾಡಿಸಿಕೊಂಡ ಹೆಸರು ಅವರಿಗಿದೆ. ಅವರ ಹೆಸರಿನ ಶಿಲಾಮಂಟಪ ಶೀಘ್ರವೇ ನಿರ್ಮಾಣಗೊಳ್ಳಲಿ. ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಶಿಕ್ಷಕರ ಕೊರತೆ ನೀಗಿಸುವ ಕೆಲಸವನ್ನು ಸಮಿತಿ ನಿರ್ವಹಿಸಲಿ ಎಂದರು.
ಪ್ರಾಸ್ತಾವಿಕ ಮಾತನಾಡಿ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಎಚ್.ಶಿವಮೂರ್ತಿಸ್ವಾಮಿ, 2 ಕೋಟಿ ರೂ. ವೆಚ್ಚದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಶಿಲಾಮಂಟಪ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 2 ಸಾವಿರ ತುಲಾಭಾರ ನಡೆಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಉದ್ಯಮಿ ಅಥಣಿ ವೀರಣ್ಣ, ಎ.ಸಿ. ಜಯಣ್ಣ, ಎಸ್.ಟಿ.ಕುಸುಮ ಶೆಟ್ಟಿ, ಶಿವಮೊಗ್ಗದ ಆರ್.ಬಿ.ಸಂಗಮೇಶ್ವರ ಗವಾಯಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಎ.ಎಸ್.ಸುಶೀಲಮ್ಮ ಮತ್ತಿತರರಿದ್ದರು. ಪತ್ರಕರ್ತರಾದ ವೀರಪ್ಪ ಎಂ. ಬಾವಿ, ಇ.ಎಂ.ಮಂಜುನಾಥ್, ಮಾಗನೂರು ಮಂಜಪ್ಪ, ಕರವೇ ಮುಖಂಡ ಎಂ.ಎಸ್.ರಾಮೇಗೌಡ ಮತ್ತಿತರರನ್ನು ಸನ್ಮಾನಿಸಲಾಯಿತು. ಶ್ರೀ ಗುರು ಪುಟ್ಟರಾಜ ಪ್ರಶಸ್ತಿ ಪುರಸ್ಕಾರ ಪಡೆದ ಬಾಗಲಕೋಟೆಯ ಬಿ.ಎಸ್.ಮಠ್ ದಂಪತಿ ವಯಲಿನ್ ವಾದನದೊಂದಿಗೆ ರಂಜಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








