ಮೂಡಬಿದಿರೆ:
ನಾಗರಿಕತೆಯು ಶತಮಾನಕ್ಕೆ ತಕ್ಕಂತೆ ಬದಲಾವಣೆ ಹೊಂದುವುದರಿಂದ, ಅದಕ್ಕನುಗುಣವಾಗಿ ಆಹಾರ ಪದ್ಧತಿಯಲ್ಲಿ ಏರು ಪೇರುಗಳಾಗುವುದು ಸಹಜ ಎಂದು ಪುತ್ತಿಗೆ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಭಾರತಿ ಶಿವಾನಂದ್ ನಾಯಕ್ ಹೇಳಿದರು.
ಆಳ್ವಾಸ್ ವಿದ್ಯಾರ್ಥಿಸಿರಿಯಲ್ಲಿ `ಅಡುಗೆ-ಉಡುಗೆ-ತೊಡುಗೆ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಹಳೆಯ ಕಾಲದ ಉಡುಗೆ ತೊಡುಗೆ ಆಹಾರ ಪದ್ಧತಿಗಳು ಋತುಗಳಿಗೆ ತಕ್ಕಂತೆ ಬದಲಾಗುತ್ತಿದ್ದವು. ಆದರೆ ಪ್ರಸ್ತುತ ದಿನಗಳಲ್ಲಿ ಯಾವುದೇ ಕಾಲಗಳನ್ನು ಪರಿಗಣಿಸದೆ ಮನಬಂದಂತೆ ತಿಂಡಿ ತಿನುಸುಗಳನ್ನು ಸೇವಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಆಧುನಿಕ ತಿನಿಸುಗಳು ಸಾಂಪ್ರಾದಾಯಿಕ ಆಹಾರ ಪದ್ಧತಿಗಳ ಮೇಲೆ ಲಗ್ಗೆ ಇರಿಸಿದೆ. ಗದ್ದೆ ಪ್ರದೇಶಗಳಲ್ಲಿ ಬೆಳೆಯುವಂತಹ ಧಾನ್ಯಗಳ ಉತ್ಪಾದನೆಯು ಕುಂಠಿತವಾಗಿದ್ದು, ತಿನ್ನುವ ಪ್ರಮಾಣವು ಕಡಿಮೆಯಾಗಿದೆ. ಇದೆಲ್ಲವೂ ಕೇವಲ ಆಹಾರ ಪದ್ಧತಿಗಳಲ್ಲಿ ಸೀಮಿತವಾಗದೇ ಉಡುಗೆ ತೊಡುಗೆಗಳವರೆಗೂ ವಿಸ್ತರಿಸಿದೆ ಎಂದರು.
ಆಧುನಿಕತೆಯು ಸಂಪ್ರದಾಯಗಳನ್ನು ಆವರಿಸಿಕೊಳ್ಳುತ್ತಿದ್ದು, ನಮ್ಮ ಸ್ವಂತಿಕೆಗಳು ಜಾಗ ಕಳೆದುಕೊಳ್ಳುತ್ತಿದೆ. ಬಹುತ್ವದ ಪರಿಕಲ್ಪನೆ ಸ್ವಾಗತಾರ್ಹ ಆದರೆ ಅದು ನಮ್ಮ ಸಂಸ್ಕøತಿಯ ಮೇಲೆ ದಾಳಿ ಮಾಡುವಂತಿರಬಾರದು. ಹೊಸತನವನ್ನು ಪಡೆಯುವ ಭರದಲ್ಲಿ ನಮ್ಮ ಮೂಲಭುತ ಪದ್ಧತಿಗಳನ್ನು ಮರೆಯಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಆಳ್ವಾಸ್ ವಿದ್ಯಾರ್ಥಿಸಿರಿ ಸಮ್ಮೇಳನಾಧ್ಯಕ್ಷೆ ಸನ್ನಿಧಿ ಟಿ.ರೈ ಪೆರ್ಲ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೂಡಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪ್ರೌಢಶಾಲೆ ವಿದ್ಯಾರ್ಥಿನಿ ಪ್ರಕೃತಿ ನಿರೂಪಿಸಿದರು.
ಆಳ್ವಾಸ್ ವಿದ್ಯಾರ್ಥಿಸಿರಿಯ ಅಂಗವಾಗಿ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ `ನಾವು ಮತ್ತು ನಮ್ಮ ಪರಿಸರ’ ಎಂಬ ವಿಷಯದ ಕುರಿತು ಸಂವಾದ ಗೋಷ್ಠಿ ನಡೆಯಿತು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಗುಣೇಶ್ ಭಾರತೀಯ, ತೋಕೂರಿನ ಡಾ. ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿಘ್ನೇಶ್ ಮಲ್ಯ, ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರದ್ಯುಮ್ನ ಮೂರ್ತಿ ಕಡಂದಲೆ ಹಾಗೂ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಭಕ್ತಿಶ್ರೀ ಸಂವಾದದಲ್ಲಿ ಪಾಲ್ಗೊಂಡು, ತಮ್ಮ ವಿಚಾರ ಮಂಡಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ..ಎಮ್ ಪದವಿಪೂರ್ವ ಕಾಲೇಜಿನ ಶ್ಯಾಮ್ ಪ್ರಸಾದ್ ಸಮಾಪನ ಮಾತುಗಳನ್ನಾಡಿ “ಪ್ರಕೃತಿಯನ್ನು ನಾವು ಅದರ ದೃಷ್ಟಿಯಲ್ಲಿ ನೋಡಬೇಕೇ ಹೊರತು ನಮ್ಮ ರೀತಿಯಲ್ಲಲ್ಲ. ಇದರಿಂದಲೇ ಪ್ರಕೃತಿ ವಿಕೋಪಗಳು ಹೆಚ್ಚಾಗಿ ಜರುಗುತ್ತಿವೆ. ಪರಿಸರಕ್ಕೆ ನಾವು ಅವಶ್ಯಕವಲ್ಲ, ಬದಲಿಗೆ ನಮಗೆ ಅದು ಅನಿವಾರ್ಯ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು” ಎಂದು ತಿಳಿಸಿದರು.
“ನಾವೆಲ್ಲಾ ಇಂದು ಅಭಿವೃದ್ಧಿ ಎಂಬ ಮಾರಕಾಸ್ತ್ರದಿಂದ ಪ್ರಕೃತಿಯ ಮೇಲೆ ದಾಳಿ ಮಾಡುತ್ತಿದ್ದೇವೆ. ಪರಿಸರ ಇರುವುದು ನಮ್ಮ ವೈಯಕ್ತಿಕ ನೆಮ್ಮದಿಗೆ ಎಂಬ ಭಾವನೆ ನಮ್ಮಲ್ಲಿದೆ. ಪ್ರಾಣಿ ದಾಳಿಯಿಂದ ಮಾನವನ ಸಾವು ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಇಷ್ಟು ವರ್ಷದಿಂದ ನಾವು ನಮ್ಮ ಪರಿಸದ ಮೇಲೆ ನಡೆಸಿಕೊಂಡು ಬಂದಿರುವ ಹಲ್ಲೆಗೆ ಪರಿಹಾರ ನೀಡುವವರಾರು?” ಎಂದು ಪ್ರಶ್ನಿಸಿದರು.
“ಅಭಿವೃದ್ಧಿ ಎಂಬ ಪರಿಕಲ್ಪನೆಯ ಅರ್ಥವೇ ಗೊತ್ತಿಲ್ಲದೇ ನಾವು ವಿಪರೀತ ರೀತಿಯಲ್ಲಿ ವರ್ತಿಸುತ್ತಿದ್ದೇವೆ. ಇದಕ್ಕೆ ಉತ್ತಮ ಉದಾಹರಣೆ ನದಿ ತಿರುವು. ಇದರಿಂದ ದೇಶದ ನೀರಿನ ಸಮಸ್ಯೆ ಇಲ್ಲವಾಗುತ್ತದೆ ಎಂದು ಸಾಕಷ್ಟು ನದಿ ತಿರುವುನ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಚೀನಾದಲ್ಲಿ ಕೇವಲ ಒಂದು ನದಿ ತಿರುವಿನಿಂದ ಏಳು ನದಿಗಳು ಬತ್ತಿ ಹೋಗಿವೆ. ಹಾಗಾಗಿ ಯಾವುದು ನಮ್ಮ ನಾಳೆಗಳನ್ನು ಕಾಪಾಡುತ್ತದೆಂದರೆ ಅದು ಪ್ರಕೃತಿಯೇ ಆಗಿದೆ. ಅದನ್ನು ಜತನದಿಂದ ಕಾಪಾಡಿ, ಉಳಿಸಿ ಬೆಳೆಸುವ ಕಾರ್ಯ ನಮ್ಮದಾಗಬೇಕು” ಎಂದು ತಿಳಿಸಿದರು. ಸಂವಾದ ಗೋಷ್ಠಿಯಲ್ಲಿ ವಿದ್ಯಾರ್ಥಿಸಿರಿಯ ಸರ್ವಾಧ್ಯಕ್ಷೆ ಸನ್ನಿಧಿ ಟಿ. ರೈ ಪೆರ್ಲ ಉಪಸ್ಥಿತರಿದ್ದರು.
ಧನದಾಹಿತ್ವ ತೊರೆದು ಗುಣಗ್ರಾಹಿತ್ವ ಬೆಳೆಸಿಕೊಳ್ಳಬೇಕು: ಪ್ರಜ್ಞಾ ಪ್ರಭು
ವಿದ್ಯಾಗಿರಿ:
ಆಧುನಿಕ ಜಗತ್ತಿನಲ್ಲಿ ಮಾನವನ ದಿನಚರಿಯು ಅನಾರೋಗ್ಯ ಸ್ವರೂಪವನ್ನ ಪಡೆಯುತ್ತಿದ್ದು ಇದನ್ನು ಬದಲಿಸಿಕೊಳ್ಳಬೇಕಾದ್ದು ತುಂಬಾನೇ ಮುಖ್ಯ ಎಂದು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಪ್ರಭು ಹೇಳಿದರು.
ಆಳ್ವಾಸ್ ವಿದ್ಯಾರ್ಥಿಸಿರಿಯಲ್ಲಿ `ದಿನಚರಿ: ಹಿಂದು-ಮುಂದು’ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು. `ಹುಟ್ಟು, ಜೀವನ ಹಾಗೂ ಮರಣ ನಮ್ಮ ಬದುಕಿನ ದಿನಚರಿಯಾದರೆ ಇದಕ್ಕೆ ಪೂರಕವಾಗಿ ನಮ್ಮ ನಿತ್ಯ ಚಟುವಟಿಕೆಗಳು ನಡೆಯಬೇಕು. ಅದರೆ ಇಂದು ಮಾನವನು ಸಂಪತ್ತಿನ ಜೀವನದೆಡೆಗೆ ಮುಖಮಾಡಿ ನಿಂತಿದ್ದಾನೆ. ತನ್ನ ಸುತ್ತ ನಡೆಯುವಂತಹ ಯಾವುದೇ ಘಟನೆಗಳ ಬಗ್ಗೆ ಅರಿತುಕೊಳ್ಳದಾಗದಷ್ಟು ಮಾನವ ಬದಲಾಗಿದ್ದು, ಆತನ ನಿತ್ಯದ ಜೀವನ ಶೈಲಿಯು ಮಾರ್ಪಡಾಗುತ್ತಲೇ ಹೋಗುತ್ತಿದೆ’ ಎಂದರು.
ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ವಿಶ್ಲೇಷಿಸಿದ ಪ್ರಜ್ಞಾ ಪ್ರಭು, ಇಂದಿನ ಕೈಗಾರಿಕಾ ಕ್ರಾಂತಿ, ಯಾಂತ್ರೀಕೃತ ಬದುಕು ಮನುಷ್ಯ ಅನಾರೋಗ್ಯಕರ ಜೀವನ ವಿಧಾನವನ್ನು ಹೊಂದುವಂತೆ ಮಾಡುತ್ತಿವೆ ಎಂದು ತಿಳಿಸಿದರು. ಇಂತಹ ದಿನಚರಿಗಳು ಬದಲಾಗಬೇಕಿದ್ದು, ಓದು, ಬರಹ, ಸಾಹಿತ್ಯದೆಡೆಗೆ ಇಂದಿನ ಯುವಜನತೆ ಮುಖ ಮಾಡಬೇಕಿದೆ. ಜೀವನದ ಯಾನ ಅನ್ನುವಂತದ್ದು ಅರ್ಥಪೂರ್ಣವಾಗಿರಬೇಕೆಂದರೆ, ಬೇರೆಯವರು ನೆನಪಿಟ್ಟುಕೊಳ್ಳುಬೇಕಂತಿದ್ದರೆ ನಮ್ಮ ಚಟುವಟಿಕೆಗಳು ಬಹಳ ಪರಿಶುದ್ದವಾಗಿ, ಅಚ್ಚುಕಟ್ಟಾಗಿ ಇರಬೇಕಾದದ್ದು ಬಹಳ ಮುಖ್ಯವಾಗಿರುತ್ತದೆ. ನಮ್ಮ ದಿನಚರಿಯು ಪರಿಶುದ್ಧ ಹಾಗೂ ಅರ್ಥಗರ್ಭಿತವಾಗಿದ್ದಲ್ಲಿ ಮಾತ್ರ ಏಳಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಸಿರಿಯ ಸಮ್ಮೇಳನಾಧ್ಯಕ್ಷೆ ಸನ್ನಿಧಿ ಟಿ.ರೈ ಪೆರ್ಲ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
