ಬೆಂಗಳೂರು
ಪ್ರಾಣಿ ರಕ್ಷಣೆಯ ಕಾರ್ಯದಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿರುವ ಬಿಬಿಎಂಪಿ ಸಾಕುಪ್ರಾಣಿಗಳಿಗೆ ರಕ್ಷಣಾ ಕೇಂದ್ರ ತೆರೆಯಲು ಮುಂದಾಗಿದೆ. ದಾಸರಹಳ್ಳಿ, ಪೂರ್ವ ವಲಯ ಹಾಗೂ ದಕ್ಷಿಣ ವಲಯದಲ್ಲಿ ಪ್ರಾಣಿಗಳ ರಕ್ಷಣಾ ಕೇಂದ್ರ ಸ್ಥಾಪಿಸಲು ಪಾಲಿಕೆ ಮುಂದಾಗಿದ್ದು, ಆ ಮೂಲಕ ಸ್ಥಳೀಯ ಸಂಸ್ಥೆಯ ಮೂಲಕ ಸ್ಥಾಪಿಸಲ್ಪಟ್ಟ ದೇಶದ ಮೊದಲ ಪ್ರಾಣಿ ಸಂರಕ್ಷಣಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಬೆಂಗಳೂರಿನಲ್ಲಿ ಅನಾಥವಾಗಿ ಅಲೆಯುವ ಸಾಕುಪ್ರಾಣಿಗಳಿಗೆ ಗಾಯಗೊಂಡಾಗ ರಕ್ಷಣೆ ನೀಡುವುದರ ಜೊತೆಗೆ ಆರೈಕೆ ನೀಡುವುದು ಪ್ರಾಣಿ ಸಂರಕ್ಷಣಾ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದೆ. ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಪರಿತ್ಯಕ್ತ ಸಾಕು ಪ್ರಾಣಿಗಳಿಗೆ ಹಾಗೂ ಬೀದಿನಾಯಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಅರಿತ ಪಾಲಿಕೆಯ ಪಶುಪಾಲನಾ ವಿಭಾಗ, ಮೂರು ವಲಯಗಳಲ್ಲಿ ಪ್ರಾಣಿಗಳ ಆರೈಕೆಗೆ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.
ಬಿಬಿಎಂಪಿ ಪ್ರತಿ ಕೇಂದ್ರದಲ್ಲಿ 200 ಪ್ರಾಣಿಗಳನ್ನು ನಿರ್ವಹಿಸುವ ಗುರಿ ಹೊಂದಿದ್ದು, ಒಟ್ಟಾರೆ, ಈ ಮೂರು ಕೇಂದ್ರಗಳಲ್ಲಿ ಪ್ರತಿ ತಿಂಗಳು 500 ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಲು ಚಿಂತನೆ ನಡೆಸಿದೆ.