ತುರುವೇಕೆರೆ :
ಗೌರಿ, ಗಣೇಶ ಹಬ್ಬದ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ವಿವಿದೆಡೆ ಗೌರಿಯನ್ನು ಕೂರಿಸಿ ವಿಶೇಷವಾಗಿ ಶೃಂಗರಿಸಿ ಪೂಜಿಸುವುದರೊಂದಿಗೆ ಶ್ರದ್ದಾಭಕ್ತಿಯಿಂದ ಹಬ್ಬ ಆಚರಿಸಿದರು.
ಪಟ್ಟಣದ ಸಂತೆ ಮೈದಾನದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಮಹಿಳಾ ಮಂಡಳಿ, ಶ್ರೀನಿಧಿ ಭಜನಾ ಮಂಡಳಿ ಸೇರಿದಂತೆ ವಿವಿದ ವೈಶ್ಯ ಮಹಿಳಾ ಮಂಡಳಿಗಳು ಒಗ್ಗೂಡಿ ಸಾಮೂಹಿಕವಾಗಿ ಗೌರಿಯನ್ನು ಪೂಜಿಸುವುದರೊಂದಿಗೆ ಹೆಂಗಳೆಯರು ಸಂಭ್ರಮದಿಂದ ಗೌರಿಹಬ್ಬ ಆಚರಿಸಿದರು. ಬೆಳಗಿನಿಂದಲೇ ಮಹಿಳೆಯರು ದೇವಿಯನ್ನು ವಿಶೇಷ ಅಲಂಕಾರದೊಂದಿಗೆ ಶೃಂಗರಿಸಿ ಪೂಜೆ ಸಲ್ಲಿಸಿ ನಂತರ ಮುತ್ತೈದೆಯರಿಗೆ ಬಾಗಿನ ಅರ್ಪಿಸಿದರು. ವಾಸವಿ ಮಹಿಳಾ ಮಮಡಳಿ ಅಧ್ಯಕ್ಷೆ ಶೋಭಾಗುಪ್ತಾ, ಶ್ರೀನಿಧಿ ಭಜನಾ ಮಂಡಳಿ ಅಧ್ಯಕ್ಷೆ ವಾಸವಿ ಸತೀಶ್, ಪ್ರಿಯಾ ಪ್ರದೀಪ್, ಕಾವ್ಯ ಸಾಗರ್, ಪದ್ಮಾಮೂರ್ತಿ, ಉಮಾಮಂಜುನಾಥ್, ಸುಧಾಜಯರಾಮ್ ಸೇರಿದಂತೆ ಎಲ್ಲಾ ವೈಶ್ಯಮಹಿಳೆಯರು ಪಾಲ್ಗೋಂಡು ಪೂಜೆ ಸಲ್ಲಿಸಿದರು.
ಪಟ್ಟಣದ ಗಂಗಾಧರೇಶ್ವರ ದೇವಾಲಯದ ಹಿಂಭಾಗದಲ್ಲಿನ ಶೀಧರ್ ಪಂಡಿತ್ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ ಪೂಜೆಯನ್ನು ವಿಶಿಷ್ಟವಾಗಿ ಸುಮಾರು ಎರಡು ದಶಕಗಳಿಂದ ಆಚರಿಸಿಕೊಂಡು ಬರುತ್ತಿದ್ದು ಆರು ದಿನಗಳವರೆಗೆ ಗೌರಿಯನ್ನು ಇಲ್ಲಿ ಪೂಜಿಸಲಾಗುವುದು. ಈ ವೇಳೆ ಪ್ರತಿ ದಿನ ಸುಮಾರು ನೂರಾರು ಭಕ್ತಾಧಿಗಳು ಬಂದು ಸ್ವತಃ ಅವರೇ ಗೌರಿಗೆ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಬಾಗಿನ ಸಲ್ಲಿಸಿ ಹರಕೆ ಮಾಡಿಕೊಂಡು ಹೋಗುತ್ತಾರೆ.
ಅರ್ಚಕ ಶೀಧರ್ ಪಂಡಿತ್ ಮಾತನಾಡಿ ಶಾಸ್ತ್ರೋಕ್ಷವಾಗಿ ಕೆರೆಯಿಂದ ಗೌರಿ ತಂದು ಕೂರಿಸಿ ಪೂಜಿಸಿದ ನಂತರ ಸಾರ್ವಜನಿಕರ ಪೂಜೆಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಎಲ್ಲಾ ಜಾತಿ, ಧರ್ಮಿಯರೂ ತಮ್ಮ ಮನೆಯ ಬಾಗಿನವನ್ನು ತಂದು ತಾವೇ ಗೌರಿಪೂಜೆ ಮಾಡಿಕೊಂಡು ಹೋಗುತ್ತಾರೆ. ಹೀಗೆ ಬರುವ ಎಲ್ಲಾ ಮುತ್ತೈದೆಯರು ಮತ್ತು ಹೆಣ್ಣು ಮಕ್ಕಳಿಗೆ ಗೌರಿದಾರವನ್ನು ಕಟ್ಟಲಾಗುತ್ತದೆ. ಈ ರೀತಿ ಕಟ್ಟಿಸಿಕೊಂಡ ಮದುವೆಯಾಗದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಲಭಿಸುತ್ತದೆ ಮತ್ತು ಮಕ್ಕಳಾಗದ ಹೆಂಗಸರಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆಯಿಂದ ಪೂಜೆ ಮಾಡಿಕೊಂಡು ಹೋಗುತ್ತಾರೆ. ಹಿಂದಿನಿಂದಲೂ ಇ ಸಂಪ್ರಧಾಯವನ್ನು ನಮ್ಮ ಕುಟುಂಬ ಆಚರಿಸಿಕೊಂಡು ಬರುತ್ತಿದೆ ಎಂದರು.