ತುಮಕೂರು:
ಬರಗಾಲದ ದವಡೆಗೆ ಸಿಲುಕಿ ಸಾಲದ ಭಾಧೆಯಿಂದ ಆತ್ಮಹತ್ಯೆಗೆ ಒಳಗಾಗುತ್ತಿರುವ ರೈತರ ನೆರವಿಗೆ ಬರುವ ಉದ್ದೇಶದಿಂದ ರಾಷ್ಟ್ರಿಕೃತ ಬ್ಯಾಂಕುಗಳ ಸುಮಾರು 31 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದ್ದು, ಇದಕ್ಕೆ ವಾಣಿಜ್ಯ ಬ್ಯಾಂಕುಗಳು ಒಪ್ಪಿಗೆ ಸೂಚಿಸಲು ಮೀನಾ ಮೇಷ ಎಣಿಸುತ್ತಿವೆ. ಬ್ಯಾಂಕುಗಳ ಈ ಧೋರಣೆ ವಿರುದ್ದ ಅನಿವಾರ್ಯವಾಗಿ ರೈತರು ಬೀದಿಗಿಳಿಯಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ತಿಳಿಸಿದರು.
ನಗರದ ಕೆ.ಅರ್.ಬಡಾವಣೆಯ ಮೂರನೇ ಕ್ರಾಸ್‍ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡುತಿದ್ದ ಅವರು ರಾಜ್ಯದ ರೈತರ ಸುಮಾರು 31 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಂದಿನ ಐದು ವರ್ಷಗಳಲ್ಲಿ 4 ಕಂತುಗಳಲ್ಲಿ ಬ್ಯಾಂಕಿಗೆ ಹಣ ಮರುಪಾವತಿಸುವ ಭರವಸೆಯನ್ನು ನೀಡಿದೆ. ಆದರೆ ಬ್ಯಾಂಕುಗಳು ಮೊದಲಿಗೆ ಒಪ್ಪಿಗೆ ನೀಡಿ, ಈಗ ಮೀನಾ ಮೇಷ ಎಣಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ಸರಕಾರದ ಪ್ರಸ್ತಾವನೆಯನ್ನು ಒಪ್ಪಿಕೊಳ್ಳದಿದ್ದಲ್ಲಿ, ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೈಗಾರಿಕೋದ್ಯಮಿಗಳಿಗೆ, ಉದ್ಯಮಿದಾರರಿಗೆ ಕೊಟ್ಟ ಸಾಲವನ್ನು ಎನ್.ಪಿ.ಎ ಎಂದು ತೋರಿಸಿ, ಸಾರ್ವಜನಿಕ ಬ್ಯಾಂಕುಗಳು ನಷ್ಟ ಹೊಂದುವಂತೆ ಮಾಡಿರುವ ಆಡಳಿತ ಮಂಡಳಿಗಳು, ರೈತರ ವಿಚಾರದಲ್ಲಿ ಮಾತ್ರ ಕಟ್ಟುನಿಟ್ಟಿನ ವಸೂಲಿಗೆ ಇಳಿದಿವೆ. ರಾಜ್ಯ ಸರಕಾರ ಸಾಲಮನ್ನಾ ಘೋಷಣೆ ಮಾಡಿದ್ದರೂ, ಸಾಲ ಪಡೆದ ರೈತರ ಮೇಲೆ ಪ್ರಕರಣ ದಾಖಲಿಸುವುದು, ನೋಟಿಸ್ ನೀಡುವುದು ನಡೆಯುತ್ತಲೇ ಇದೆ ಎಂದರು.
ರಾಜ್ಯದಲ್ಲಿ ಒಂದೆಡೆ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿ, ಜನರು ಮನೆ, ಮಠ, ಭೂಮಿಯನ್ನು ಕಳೆದುಕೊಂಡಿದ್ದಾರೆ. ಇದರ ಜೊತೆಗೆ ರಾಜ್ಯದ ಬಯಲು ಸೀಮೆಯ ಸುಮಾರು 13 ಜಿಲ್ಲೆಗಳಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿದೆ. ಭೂಮಿಗೆ ಬಿತ್ತಿದ್ದ ಕಾಳು, ಕಡ್ಡಿ, ಗೊಬ್ಬರ ಸಂಪೂರ್ಣ ನಷ್ಟ ಹೊಂದಿದೆ. ಕೂಡಲೇ ಸರಕಾರ ಇವರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರಕಾರ ಸಹಕಾರಿ ಬ್ಯಾಂಕು ಹಾಗೂ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳ ಸುಮಾರು 48ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದೆ. ಅಂಕಿ ಅಂಶಗಳ ಪ್ರಕಾರ ಸುಮಾರು 1.20 ಲಕ್ಷ ಕೋಟಿ ರೂ ರೈತರ ವಿವಿಧ ರೀತಿಯ ಸಾಲಗಳಿದ್ದು, ರಾಜ್ಯ ಸರಕಾರ ಘೋಷಿಸಿ, ಉಳಿದಿರುವ ಸುಮಾರು 58 ಸಾವಿರ ಕೋಟಿ ರೂ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರಕಾರ ರೈತರ ನೆರವಿಗೆ ಬರುವಂತೆ ಒತ್ತಾಯಿಸಿದ ರೈತರ ಸಂಘದ ಮುಖಂಡರು, ಇದಕ್ಕೆ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ತರುವಂತೆ ಆಗ್ರಹಿಸಿದರು.
ನವೆಂಬರ್ 30ಕ್ಕೆ ದೆಹಲಿ ಚಲೋ: ದೇಶದ ರೈತರ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವಂತೆ ಒತ್ತಾಯಿಸಿ, ದೇಶದ 170ಕ್ಕೂ ಹೆಚ್ಚು ರೈತ ಸಂಘಟನೆಗಳು ಒಗ್ಗೂಡಿ 2018ರ ನವೆಂಬರ್ 30 ರಂದು ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಅಂದು ಪಾರ್ಲಿಮೆಂಟ್‍ಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಕೆ.ಟಿ.ಗಂಗಾಧರ್ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ದಿ ಹೆಸರಿನಲ್ಲಿ ನಡೆಯುತ್ತಿರುವ ಭೂ ಸ್ವಾಧೀನ ಪ್ರಕ್ರಿಯೆಗಳು ಬಹಳ ದೌರ್ಜನ್ಯದಿಂದ ಕೂಡಿದ್ದು, ಪಿಜಿಸಿಎಲ್, ರಾಷ್ಟ್ರೀಯ ಹೆದ್ದಾರಿ 206ಕ್ಕೆ ಪೊಲೀಸ್ ಸರ್ಪಗಾವಲಿನಲ್ಲಿ ಜನರನ್ನು ಹೆದರಿಸಿ, ಸರಿಯಾದ ಪರಿಹಾರವನ್ನು ನೀಡದೆ ಭೂಮಿ ವಶಪಡಿಸಿಕೊಳ್ಳುತ್ತಿದ್ದು, ಭೂಮಿಗೆ ವೈಜ್ಞಾನಿಕ ಬೆಲೆ ನೀಡದೆ, ಕೆಲಸ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಹೇಮಾವತಿ ನೀರು ಹರಿಸಲು ಒತ್ತಾಯ:ಜಿಲ್ಲೆಗೆ 25 ಟಿ.ಎಂ.ಸಿ. ನೀರು ನಿಗಧಿಯಾಗಿದ್ದರೂ ಇದುವರೆಗೂ ಹರಿದಿಲ್ಲ. ಡ್ಯಾಂನಲ್ಲಿ ಸಾಕಷ್ಟು ನೀರು ಇದ್ದರೂ ಜಿಲ್ಲೆಗೆ ಸಮರ್ಪಕ ನೀರು ಹರಿಸುತ್ತಿಲ್ಲ. ಕೂಡಲೇ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ನಿಗಧಿಯಾಗಿರುವ ನೀರು ಹರಿಸಲು ಮುಂದಾಗಬೇಕು.0-72ವರೆಗೆ ನಾಲೆ ಅಧುನಿಕರಣ ಗೊಂಡಂತೆ, 72-182ವರೆಗೆ ನಾಲ ಅಧುನೀಕರಣಕ್ಕೆ ಸರಕಾರ ಮುಂದಾಗಬೇಕೆಂದು ಗೋವಿಂದರಾಜು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರವೀಶ್,ವೆಂಕಟೇಗೌಡ, ಲಕ್ಷ್ಮಣಗೌಡ, ಸಣ್ಣರಂಗಪ್ಪ, ಪೂಜಾರಪ್ಪ, ಶ್ರೀನಿವಾಸ್,ರಂಗಹನುಮಯ್ಯ, ಶಬ್ಬೀರ್, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
