ಹುಳಿಯಾರು
ಹುಳಿಯಾರಿನ ಶ್ರೀ ಕೆಂಪೇಗೌಡ ಪತ್ತಿನ ಸಹಕಾರ ಸಂಘ ಹಾಗೂ ಚಿಕ್ಕನಾಯಕನಹಳ್ಳಿ ಶ್ರೀ ನೇಗಿಲಯೋಗಿ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪ್ರಗತಿಪರ ರೈತರಿಗೆ ಕೊಡುವ ನೇಗಿಲ ಯೋಗಿ ಪ್ರಶಸ್ತಿಗೆ ಈ ವರ್ಷ ಹುಳಿಯಾರು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ಸಾವಯವ ಕೃಷಿಕ ಲಕ್ಕೇನಹಳ್ಳಿ ಎಲ್.ಎನ್.ಕುಮಾರ್ ಅವರು ಆಯ್ಕೆಯಾಗಿದ್ದು ತಿಮ್ಮನಹಳ್ಳಿಯಲ್ಲಿ ಸೆ.20 ರ ಗುರುವಾರ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಲಕ್ಕೇನಹಳ್ಳಿ ನರಸಿಂಹಮೂರ್ತಿ ಹಾಗೂ ತಿಮ್ಮಕ್ಕ ದಂಪತಿಗಳ ಜೇಷ್ಠ ಪುತ್ರ ಎಲ್.ಎನ್.ಕುಮಾರ್ ಅವರು ಶಾಲೆಯ ಪಠ್ಯದ ವಿದ್ಯೆ ತಲೆಗೆ ಹತ್ತದಿದ್ದಾಗ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಸಾಮಾಜಿಕ ಸತ್ಯ ಮನಗಂಡು ಮಣ್ಣಿನಲ್ಲಿ ಹೊನ್ನು ತೆಗೆಯುವ ಸಂಕಲ್ಪ ಮಾಡಿದರು. 8 ನೇ ತರಗತಿಗೆ ಶಾಲೆಗೆ ಗುಡ್ ಬೈ ಹೇಳಿದ ಇವರು ನೇಗಿಲು ಹಿಡಿದು ಕೃಷಿ ಕಾಯಕಕ್ಕೆ ಜೈ ಎಂದರು. ತಂದೆ ಮಾಡಿದ ಅಲ್ಪಸ್ವಲ್ಪ ಜಮೀನಿನಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು ಸೈಕಲ್‍ನಲ್ಲಿ ಪಟ್ಟಣಕ್ಕೆ ಬಂದು ಬೀದಿಬೀದಿ ತಿರುಗಿ ಸೊಪ್ಪು ಮಾರುವ ಮೂಲಕ ಮಾದರಿ ರೈತನಾಗುವ ಮೊದಲ ಹೆಜ್ಜೆ ಇಟ್ಟರು. ಸೊಪ್ಪಿನಿಂದ ಒಳ್ಳೆ ಲಾಭ ಬಂದಿದ್ದರಿಂದ ಕೃಷಿಯೆಡೆ ಉತ್ಸುಕರಾದ ಇವರು ಟೊಮೊಟೊ, ಬದನೆ ಹೀಗೆ ಸೊಪ್ಪು ತರಕಾರಿಗಳನ್ನು ಬೆಳೆದು ತಾನೇ ಮಾರುವ ಮೂಲಕ ಕೃಷಿಯನ್ನು ಲಾಭದಾಯಕವನ್ನಾಗಿ ಪರಿವರ್ತಿಸಿದರು.
ಸೊಪ್ಪು ತರಕಾರಿ ಮಾರಾಟದಿಂದ ಬಂದ ಲಾಭವನ್ನು ಐಷಾರಾಮಿ ಜೀವನದಾಸೆಗೆ ಬಲಿಕೊಡದೆ ಮತ್ತೊಷ್ಟು ಜಮೀನು ಖರೀಧಿಸಿದರು , ಕೊಳವೆ ಬಾವಿಗಳನ್ನು ಕೊರೆಸಿದರು , ಅಡಿಕೆ, ತೆಂಗು, ಹೂವು ಹೀಗೆ ದುಡುಮೆ ಬಂಡವಳಕ್ಕೆ ವಿನಿಯೋಗಿಸಿದರು .ತೆಂಗು , ಅಡಿಕೆ ಹಾಕಿದರಲ್ಲದೆ ಕೃಷಿ ಜೊತೆಗೆ ಉಪಕಸುಬು ಇದ್ದರೆ ಆರ್ಥಿಕ ಸಬಲತೆ ಸಾಧ್ಯವೆಂದು 6 ಸೀಮೆ ಹಸು, 6 ಕುರಿ ಸಾಕಾಣಿಕೆ ಇಳಿದರು. ನೋಡು ನೋಡುತ್ತಿದ್ದಂತೆ ಪ್ರಗತಿಪರ ರೈತನಾಗಿ ಬೆಳೆದುನಿಂತು ಸುತ್ತಮುತ್ತಲ ರೈತರು ಬೆರಗಾಗುವಂತೆ ಬದಲಾದರು.
ಪರಿಸರಕ್ಕೆ ಪೂರಕವಾದ ಕೃಷಯಿಂದ ಮಾತ್ರ ದೀಘಕಾಲ ಕೃಷಿಯಿಂದ ಲಾಭ ಎಂಬ ನಿಲುವಿಗೆ ಬಂದು ಸಾವಯವ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಹಸು ಮತ್ತು ಕುರಿ ಸಾಕಾಣಿಕೆಯಿಂದ ಬಂದ ಗೊಬ್ಬರ, ಗಂಜಲ, ಸೊಪ್ಪು, ತರಕಾರಿ ಹಾಗೂ ಹೂವಿಗೆ ಸಿಂಪಡಣೆ ಮಾಡುವ ಮೂಲಕ ಫಲವತ್ತಾದ ಮಣ್ಣಿಗೆ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಹಾಕದೆ ಆರೋಗ್ಯಯುತ ಫಸಲು ಬೆಳೆಯುವುದನ್ನು ಕರಗತ ಮಾಡಿಕೊಂಡರು. ಸಾವಯವ ಗೊಬ್ಬರದಿಂದಲೇ ಸಬ್ಬಾಕ್ಸಿ, ದಂಟು, ಮೆಂತ್ಯ, ಪಾಲಕ್ ಹೀಗೆ ಹತ್ತನ್ನೆರಡು ಬಗೆಯ ಸೊಪ್ಪುಗಳು, ತರಕಾರಿಗಳನ್ನು ಬೆಳೆದು ಗ್ರಾಹಕರು ಫೇವರೆಟ್ ಸೊಪ್ಪುಬೆಳೆಗಾರನಾದರು.
ಒಟ್ಟಾರೆ ವ್ಯವಸಾಯ ಮನೆಮಂದಿಯೆಲ್ಲಾ ಸಾಯ ಎಂದು ಮೂಗುಮುರಿಯುವ ರೈತರ ಸಾಲಿನಲ್ಲಿ ಮಾದರಿ ಕೃಷಿಕನಾಗಿ ಹೊರಹೊಮ್ಮಿದ್ದಾರೆ . ರಾಸಾಯನಿಕ ಬಿಟ್ಟು ಸಾವಯವ ರೂಢಿಸಿಕೊಂಡಿರುವುದರಿಂದ ನಮ್ಮ ಆರೋಗ್ಯದ ಜೊತೆಗೆ ಮಣ್ಣಿನ ಆರೋಗ್ಯವೂ ಉತ್ತಮವಾಗಿದೆ ಎನ್ನುವ ಕುಮಾರ್ ನಮ್ಮನ್ನು ನಂಬಿ ಸೊಪ್ಪು ಖರೀಧಿಸುವ ಗ್ರಾಹಕನಿಗೆ ವಿಷಾಹಾರ ಕೊಟ್ಟು ಮೋಸ ಮಾಡದೆ ಆರೋಗ್ಯ ವರ್ಧಕ ಸೊಪ್ಪು, ತರಕಾರಿ ಕೊಡುತ್ತಿರುವ ಆತ್ಮತೃಪ್ತಿ ನನಗಿದೆ. ನನ್ನ ಈ ಕಾಯಕ ಗುರುತಿಸಿ ನೇಗಿಲಯೋಗಿ ಪ್ರಶಸ್ತಿ ನೀಡುತ್ತಿರುವುದು ಓದು ಮುಂದುವರಿಸದೆ ಕೃಷಿಗೆ ಇಳಿದಿದ್ದು ಇಂದು ಸಾರ್ಥಕತೆ ಎನ್ನುಸುತ್ತದೆ ಎಂದು ಭಾವುಕರಾಗುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
