ಸಾವಯವ ಕೃಷಿ ಪದ್ಧತಿಯಿಂದ ಭೂಮಿಯ ಫಲವತ್ತತೆ ದ್ವಿಗುಣಗೊಳ್ಳುತ್ತದೆ

ಹೊನ್ನಾಳಿ:
              ಸಾವಯವ ಕೃಷಿ ಪದ್ಧತಿಯಿಂದ ಭೂಮಿಯ ಫಲವತ್ತತೆ ದ್ವಿಗುಣಗೊಳ್ಳುತ್ತದೆ. ಆದ್ದರಿಂದ, ಎಲ್ಲಾ ರೈತರೂ ಈ ಪದ್ಧತಿಯನ್ನು  ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸರಕಾರದ ಸಾವಯವ ಕೃಷಿ ತರಬೇತುದಾರ ಎಂ.ಆರ್. ರಂಗನಾಥ್ ಹೇಳಿದರು.
ಇಲ್ಲಿನ ಸರಕಾರಿ ನೌಕರರ ಭವನದಲ್ಲಿ ಶನಿವಾರ ಕಾರ್ಬೋಶಾಪ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ಹಮ್ಮಿಕೊಂಡ “ಸಾವಯವ ಕೃಷಿ ಕುರಿತು ರೈತರೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
                  ಸಾವಯವ ಕೃಷಿ ಪದ್ಧತಿಯಿಂದ ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು. ಅಚ್ಚುಕಟ್ಟಾಗಿ ಬೇಸಾಯ ಕ್ರಮಗಳನ್ನು ಕೈಗೊಂಡರೆ ರೈತರು ಯಾರ ಬಳಿಯೂ ಬೇಡುವ ಅಗತ್ಯತೆ ಬರುವುದಿಲ್ಲ. ಸರಕಾರಗಳ ಸಾಲ ಮನ್ನಾ, ಸಹಾಯಧನ ನೀಡಿಕೆ ಸೇರಿದಂತೆ ಯಾವುದಕ್ಕೂ ರೈತರು ಕೈಚಾಚುವ ಅಗತ್ಯ ಬೀಳುವುದಿಲ್ಲ. ಆದ್ದರಿಂದ, ರೈತರು ಲಾಭದಾಯಕ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
                ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬೇಕಾಬಿಟ್ಟಿ ಬಳಕೆಯಿಂದಾಗಿ ಇಂದು ಭೂಮಿ ಸತ್ವಹೀನವಾಗಿದೆ. ಭೂಮಿ ಆರೋಗ್ಯಯುತವಾಗಬೇಕಾದರೆ ಸಾವಯವ ಗೊಬ್ಬರಗಳನ್ನು ಬಳಸಬೇಕು. ಆದ್ದರಿಂದ, ಎಲ್ಲಾ ರೈತರೂ ಸಾವಯವ ಕೃಷಿ ಪದ್ಧತಿಯ ಮೂಲಕ ಬೆಳೆಗಳನ್ನು ಬೆಳೆಯಬೇಕು ಎಂದು ಹೇಳಿದರು.
              ಸಾಯಿ ಗುರುಕುಲ ಸಿಬಿಎಸ್‍ಇ ವಸತಿಯುತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮತ್ತು ಪ್ರಗತಿಪರ ರೈತ ಜಿ. ಮರಿಗೌಡ ಮಾತನಾಡಿ, ಕಾರ್ಬೋಶಾಪ್ ಇಂಡಸ್ಟ್ರೀಸ್ ಅತ್ಯುತ್ತಮ ಸಾವಯವ ಉತ್ಪನ್ನಗಳನ್ನು ತಯಾರಿಸುತ್ತಿದೆ. ಅವುಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸುವುದರಿಂದ ಅಧಿಕ ಇಳುವರಿ ಲಭಿಸುತ್ತದೆ. ಆದ್ದರಿಂದ, ರೈತರು ಈ ಉತ್ಪನ್ನಗಳ ಬಳಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
               ದಿನನಿತ್ಯದ ಆಹಾರ ಕ್ರಮದಲ್ಲಿ ಸಾವಯವ ಉತ್ಪನ್ನಗಳನ್ನು ಬಳಸುವುದರಿಂದ ನಮ್ಮ ಆರೋಗ್ಯ ವರ್ಧಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಯುಷ್ಯ ಹೆಚ್ಚಾಗುತ್ತದೆ. ಹಾಗಾಗಿ, ಎಲ್ಲರೂ ಸಾವಯವ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
               ಬೆಂಗಳೂರಿನ ಸಹ್ಯಾದ್ರಿ ಜಲಜನಸಿರಿಯ ನಿರ್ದೇಶಕ ಹೊನ್ನಾಳಿ ನಾರಾಯಣ್, ಕಾರ್ಬೋಶಾಪ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಅಭಯ್‍ಕುಮಾರ್ ಕಾಗಲೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್, ಉತ್ಪಾದನಾ ವಿಭಾಗದ ಮುಖ್ಯಸ್ಥ ಮನೋಜ್, ಅಧಿಕಾರಿಗಳಾದ ನಾಗರಾಜ್, ತೀರ್ಥಪ್ಪ, ಎಪಿಎಂಸಿ ನಿರ್ದೇಶಕ ದಿಡಗೂರು ಎ.ಜಿ. ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಗ್ರಾಮಗಳ 200ಕ್ಕೂ ಅಧಿಕ ರೈತರು ಸಾವಯವ ಕೃಷಿ ಸಂವಾದದಲ್ಲಿ ಪಾಲ್ಗೊಂಡಿದ್ದರು. ವಿವಿಧ ಬೆಳೆಗಳಿಗೆ ಸಾವಯವ ಗೊಬ್ಬರಗಳನ್ನು ಬಳಸುವುದರ ಕುರಿತು ತಮಗಿದ್ದ ಸಂದೇಹಗಳನ್ನು ಪರಿಹರಿಸಿಕೊಂಡರು.

Recent Articles

spot_img

Related Stories

Share via
Copy link