ಸಿಎಂಗೆ ನಾಗಮೋಹನ್ ದಾಸ್ ಆಯೋಗದ ವರದಿ ಸಲ್ಲಿಕೆ..!

ಬೆಂಗಳೂರು

    ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಪರಿಷ್ಕರಣೆ ಸಂಬಂಧ ಸರ್ಕಾರ ರಚಿಸಿದ್ದ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಇಂದು ಮುಖ್ಯಮಂತ್ರಿಗೆ ವರದಿ ಸಲ್ಲಿಕೆ ಮಾಡಿದೆ.

   ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನ್ಯಾ.ನಾಗಮೋಹನ್ ದಾಸ್ ಅವರು ವರದಿ ಸಲ್ಲಿಸಲಿದ್ದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯಾ ಆಧಾರವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.ಮೀಸಲಾತಿಗಾಗಿ ನಡೆಸಿದ್ದ ಹೋರಾಟಕದ ಹಿನ್ನೆಲೆ: ಪರಿಶಿಷ್ಟ ಜಾತಿಗೆ ಹಾಲಿ ಶೇ 15 ರಷ್ಟು ಮೀಸಲಾತಿ ಇದ್ದು ಜನಸಂಖ್ಯೆಗೆ ಹೋಲಿಸಿದರೆ ಶೇ 2% ರಷ್ಟು ಮೀಸಲಾತಿ ಕಡಿಮೆ ಇದೆ. ಅಂತೆಯೇ ಪರಿಶಿಷ್ಟ ಪಂಗಡಕ್ಕೆ ಹಾಲಿ ಶೇ 3 ರಷ್ಟು ಮೀಸಲಾತಿ ಇದ್ದು, ಜನಸಂಖ್ಯೆಗೆ ಅನುಗುಣವಾಗಿ ಶೇ 3ಷ್ಟು ರಷ್ಟು ಹೆಚ್ಚುವರಿ ಮೀಸಲಾತಿ ನೀಡಬೇಕೆಂದು ವಿವಿಧ ಸಂಘಟನೆಗಳು ಹಾಗೂ ವಾಲ್ಮೀಕಿ ಗುರುಪೀಠದ ಶ್ರೀಗಳು ಹೋರಾಟ ನಡೆಸಿದ್ದವು.

  ಮೈತ್ರಿ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಗುರಪೀಠದ ಪ್ರಸನ್ನಾನಂದ ಪುರಿ ಶ್ರೀಗಳು, ವಿವಿಧ ಸಂಘಟನೆ ಗಳು ಪಾದಯಾತ್ರೆ ಮೂಲಕ ಬೆಂಗಳೂರಿಗೆ ಅಗಮಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿ ಸಿದ್ದವು. ಅಲ್ಲದೆ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದವು.

  ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 7.5 ಮೀಸಲಾತಿ ನೀಡಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದು ಮೈಸೂರು ಸಂಸ್ಥಾನದ ಅವಧಿಯಿಂದ ಆರಂಭವಾದ ಮೀಸಲಾತಿ ಹೋರಾಟಕ್ಕೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ದೊರಕಿಲ್ಲ ಎಂಬ ಆರೋಪಗಳಿವೆ.

ಮೀಸಲಾತಿ ಹೋರಾಟ-ಮೀಸಲಾತಿ ನಿಗದಿಗೆ ಶತಮಾನಗಳ ಇತಿಹಾಸ :

    ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಮುಖ್ಯ ನ್ಯಾಯಾಧೀಶರಾಗಿದ್ದ ಲೆಸ್ಲಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಸಾಮಾ ಜಿಕ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ಅವರ ಏಳಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವಂತೆ ಸೂಚಿಸಿ ಸಮಿತಿ ರಚಿಸಿದ್ದರು.1918ರಲ್ಲಿ ರಚಿತವಾದ ಈ ಸಮಿತಿ 1919ರಲ್ಲಿ ಅಧ್ಯಯನ ಪೂರ್ಣಗೊಳಿಸಿ ಮಹಾರಾಜರಿಗೆ ವರದಿ ಸಲ್ಲಿಸಿತು. ಲೆಸ್ಲಿ ಮಿಲ್ಲರ್ ಸಮಿತಿ ನೀಡಿದ ವರದಿ ಯಲ್ಲಿ ಮುಂದಿನ 7 ವರ್ಷಗಳಲ್ಲಿ ಸರ್ಕಾರದ ಶೇಕಡ 50 ರಷ್ಟು ಉನ್ನತ ಹುದ್ದೆಗಳು ಮತ್ತು ಮೂರನೆಯ ಎರಡು ಭಾಗ ಕೆಳದರ್ಜೆ ಯ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ಪ್ರಾಪ್ತವಾಗಬೇಕೆಂಬ ಅಂಶ ಅಡಕವಾಗಿತ್ತು. ಶಿಕ್ಷಣದಲ್ಲಿ ಪ್ರವೇಶ ಮೀಸಲಾತಿ ಮತ್ತು ವಿಶೇಷ ವಿದ್ಯಾರ್ಥಿವೇತನಗಳು ಈ ವರ್ಗಕ್ಕೆ ಲಭ್ಯವಾಗಬೇಕೆಂಬ ಸಲಹೆಗಳಿದ್ದವು. ಈ ವರದಿಯ ಕೆಲವು ಶಿಫಾರಸುಗಳು 1921ರಲ್ಲಿ ಸರ್ಕಾರಿ ಆದೇಶದ ಮೂಲಕ ಅನುಷ್ಠಾನಕ್ಕೆ ಬಂದವು. ಅಂದಿನಿಂದ ಇಂದಿನ ನ್ಯಾ.ನಾಗಮೋಹನ್ ದಾಸ್ ಆಯೋಗದ ವರೆಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅನೇಕ ಆಯೋಗಗಳು ರಚನೆಯಾಗುತ್ತಲೇ ಬಂದಿವೆ.

   ಸ್ವಾತಂತ್ರ್ಯ ನಂತರ ಮೀಸಲಾತಿ ಹೋರಾಟದ ಹಿನ್ನಲೆಯಲ್ಲಿ ಅಂದಿನ ಸರ್ಕಾರ 1960ರಲ್ಲಿ ಡಾ.ನಾಗನಗೌಡರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಅದಕ್ಕೆ ಹಿಂದುಳಿದ ವರ್ಗಗಳ ವಿಂಗಡಣೆ ಮತ್ತು ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ವರದಿ ಸಲ್ಲಿಸುವಂತೆ ಕೋರಿತ್ತು. ಈ ಸಮಿತಿ ಅಧ್ಯಯನ ಕೈಗೊಂಡು ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ವರದಿಯಲ್ಲಿ ಒಟ್ಟು 399 ಜಾತಿಗಳನ್ನು ಮೀಸಲಾತಿಗೆ ಅರ್ಹವೆಂದು ಪರಿಗಣಿಸಿ ಶಿಫಾರಸ್ಸು ಮಾಡಿತ್ತು.ಈ ಜಾತಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇಕಡ 45 ರಷ್ಟು ಮತ್ತು ಶಿಕ್ಷಣ ಪ್ರವೇಶದಲ್ಲಿ ಶೇಕಡಾ 50 ರಷ್ಟು ಮೀಸಲಾತಿ ನೀಡಬೇಕೆಂದು ಸಲಹೆ ಮಾಡಿತ್ತು.

  ನಾಗನಗೌಡರು ಸಲ್ಲಿಸಿದ ವರದಿಯಲ್ಲಿ ಸರ್ಕಾರ ಕೆಲವೊಂದು ಮಾರ್ಪಾಡುಗಳನ್ನು ಮಾಡಿ 1962 ರಲ್ಲಿ ಮೀಸಲಾತಿ ಆದೇಶ ಹೊರಡಿಸಿತ್ತು. ಅದರಲ್ಲಿ ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳು ಎಂಬ ಎರಡು ಗುಂಪುಗಳನ್ನು ಮಾಡಿ ಹಿಂದುಳಿದ ವರ್ಗಕ್ಕೆ 28 ರಷ್ಟು ಮತ್ತು ಅತಿ ಹಿಂದುಳಿದ ವರ್ಗಕ್ಕೆ ಶೇಕಡ 22 ರಷ್ಟು ಮೀಸಲಾತಿ ನೀಡಲಾಗಿತ್ತು. ಈ ಆದೇಶ ವನ್ನು ಸರ್ವೋಚ್ಚ ನ್ಯಾಯಾಲಯ ಅನೂರ್ಜಿತಗೊಳಿಸಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ 1963ರಲ್ಲಿ ಹಾಗೂ 1968 ರಲ್ಲಿ ಮಾರ್ಪಡಿಸಿದ ಸರ್ಕಾರಿ ಆದೇಶಗಳು ಹೊರಬಿದ್ದವು. ಎಲ್ಲ ಹಿಂದುಳಿದ ವರ್ಗಗಳು ಸೇರಿ ಶೇಕಡ 30ರಷ್ಟು ಮೀಸಲಾತಿ ನೀಡಲಾಯಿತು. ಆದಾಯ ಮಿತಿಯನ್ನು 2400 ರೂಪಾಯಿಗಳೆಂದು ನಿಗದಿಗೊಳಿಸಲಾಯಿತು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು ಶೇಕಡ 18 ರಷ್ಟು ಮೀಸಲಾತಿ ಪ್ರತ್ಯೇಕವಾಗಿ ಮುಂದುವರಿಯಿತು.

   ದೇವರಾಜ್ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳ ಮೀಸಲಾತಿ ಮತ್ತಿತರ ವಿಚಾರಗಳನ್ನು ಪರಿಶೀಲಿಸಿ ಸಲಹೆ ಮಾಡಲು ನ್ಯಾಯವಾದಿ ಎಲ್.ಜಿ. ಹಾವನೂರ್ ಅವರ ಅಧ್ಯಕ್ಷತೆಯಲ್ಲಿ 1972ರಲ್ಲಿ ಸಮಿತಿ ರಚಿಸಲಾಯಿತು. ಈ ಸಮಿತಿ 1975ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಸರ್ಕಾರ 1977 ಫೆಬ್ರವರಿ 22 ರಂದು ಹಾವನೂರ್ ಸಮಿತಿ ವರದಿಯನ್ನು ಅಂಗೀಕರಿಸಿ ಸರ್ಕಾರಿ ಆದೇಶ ಹೊರಡಿಸಿತು.ಅದರಂತೆ ವಿವಿಧ ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಿ ಹಿಂದುಳಿದ ಸಮುದಾಯಗಳು (ಶೇ.20) ಹಿಂದುಳಿದ ಜಾತಿಗಳು (ಶೇ.10),ಹಾಗೂ ಹಿಂದುಳಿದ ಪಂಗಡಗಳು (ಶೇ.5) ಇವುಗಳ ಜೊತೆಗೆ ಮುಂದುವರಿದವೆಂದು ಪರಿಗಣಿಸಲ್ಪಟ್ಟ ವಿವಿಧ ಸಮುದಾಯಗಳ ಬಡವರನ್ನು ವಿಶೇಷ ಗುಂಪೆಂದು ಪರಿಗಣಿಸಿ ಅವುಗಳಿಗೆ ಶೇ.5ರಷ್ಟು ಮೀಸಲಾತಿಯನ್ನು ನೀಡಲಾಯಿತು.

   ಎಲ್.ಜಿ.ಹಾವನೂರು ಆಯೋಗದ ವರದಿಯನ್ನು ಆಧರಿಸಿದ ಹೊರಡಿಸಿದ ಮೀಸಲಾತಿ ಆದೇಶವೂ ನ್ಯಾಯಾಲಯದ ಮೆಟ್ಟಿಲೇರಿತು .ನ್ಯಾಯಾಲಯ ಹೊಸದಾಗಿ ಸೇರ್ಪಡೆಯಾದ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಿಂದ ಕೈಬಿಟ್ಟಿತು. 1979ರಲ್ಲಿ ಈ ಸಂಬಂಧ ಸರ್ಕಾರ ಮರು ಆದೇಶ ಹೊರಡಿಸಿತು. ಇಡೀ ಹಿಂದುಳಿದ ವರ್ಗಗಳಿಗೆ ಶೇ.50 ರಷ್ಟಕ್ಕೆ ಮೀರದಂತೆ ಮೀಸಲಾತಿಯನ್ನು ನಿಗದಿಪಡಿಸಲಾಯಿತು. ಅದರಲ್ಲಿ ಶೇ.5ರಷ್ಟು ಮೀಸಲಾತಿ ಪಡೆದಿದ್ದ ವಿಶೇಷ ಗುಂಪಿಗೆ ಮೀಸಲಾತಿಯನ್ನು ಶೇ.15ಕ್ಕೆ ಹೆಚ್ಚಿಸಲಾಯಿತು.

   ಹಾವನೂರ್ ಆಯೋಗದ ವರದಿ ಹಾಗೂ ಅದರಿಂದ ಉಂಟಾದ ಗೊಂದಲಗಳನ್ನು ಬಗೆಹರಿಸಲು 1983ರಲ್ಲಿ ರಾಮಕೃಷ್ಣಹೆಗ್ಗಡೆ ನೇತೃತ್ವದ ಜನತಾ ಸರ್ಕಾರ ವೆಂಕಟಸ್ವಾಮಿ ಅವರ ಅಧ್ಯಕ್ಷತೆಯ ಎರಡನೆಯ ಹಿಂದುಳಿದ ಆಯೋಗ ಅಸ್ತಿತ್ವಕ್ಕೆ ಬಂದಿತು. ಅದು 17 ವಿವಿಧ ಸೂಚಕಗಳನ್ನು ಪರಿಶೀಲಿಸಿ ವಿವಿಧ ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ 1986ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿ ಕೆಲವು ಸಮುದಾಯಗಳನ್ನು ಮೀಸಲಾತಿಯಿಂದ ಕೈಬಿಟ್ಟಿದ್ದರಿಂದ ಉಂಟಾದ ರಾಜಕೀಯ ಒತ್ತಡಕ್ಕೆ ಮಣಿದ ಸರ್ಕಾರ ಕೆಲವು ಕಾರಣಗಳನ್ನು ನೀಡಿ ಈ ಆಯೋಗದ ವರದಿಯನ್ನು ತಿರಸ್ಕರಿಸಿತು.

   ಈ ನಡುವೆ ಸರ್ಕಾರ 1986ರ ಅಕ್ಟೋಬರ್ ತಿಂಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಹೊರಡಿಸಿತು. ಅದರ ಪ್ರಕಾರ ಎ,ಬಿ,ಸಿ,ಡಿ ಮತ್ತು ಈ ಗುಂಪುಗಳಾಗಿ ಹಿಂದುಳಿದವರನ್ನು ವರ್ಗೀಕರಿಸಲಾಯಿತು. ಹಾವನೂರು ಆಯೋಗದಲ್ಲಿ ಅವಕಾಶ ಪಡೆಯದಿದ್ದ ಲಿಂಗಾಯತರು ಅಥವಾ ವೀರಶೈವರು ಮತ್ತಿತರರೂ ವೆಂಕಟಸ್ವಾಮಿ ಆಯೋಗದ ಶಿಫಾರಸ್ಸಿನಂತೆ ಮೀಸಲಾತಿಗೆ ಅವಕಾಶ ಪಡೆದರು. ಎ ಗುಂಪಿಗೆ ಆದಾಯ ಮಿತಿಯ ನಿರ್ಬಂಧ ತೆಗೆದು ಹಾಕಲಾಯಿತು.

   ವೆಂಕಟಸ್ವಾಮಿ ಆಯೋಗದ ವರದಿಯ ಲೋಪದೋಷಗಳನ್ನು ಸರಿಪಡಿಸಲು ಕರ್ನಾಟಕ ಸರ್ಕಾರ ಚಿನ್ನಪ್ಪರೆಡ್ಡಿ ನೇತೃತ್ವದಲ್ಲಿ ಮೂರನೆಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿತು.ಈ ಆಯೋಗ ಹಿಂದುಳಿದ ವರ್ಗಗಳನ್ನು ಕುರಿತು ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಆಯೋಗವು 1990ರ ಏಪ್ರಿಲ್ ನಲ್ಲಿ ಸಲ್ಲಿಸಲಾಯಿತು. 1992ರಲ್ಲಿ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳನ್ನು ಕುರಿತು ವರದಿ ಸಲ್ಲಿ ಸಲು ನೇಮಿಸಿದ್ದ ಮಂಡಲ್ ಆಯೋಗದ ವರದಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾ ಲಯವು ತೀರ್ಪು ನೀಡಿತು.

    ಅದರಂತೆ 1993ರಲ್ಲಿ ಕೇಂದ್ರ ಸರ್ಕಾರ ಪರಿಷ್ಕೃತ ಆದೇಶ ಹೊರಡಿ ಸಿತು.ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ನೀಡುವ ಮೀಸಲಾತಿಯೂ ಸೇರಿದಂತೆ ಯಾವುದೇ ಮೀಸಲಾತಿಯೂ ಶೇ.50ಕ್ಕೆ ಮೀರಬಾರದೆಂಬುದು ನ್ಯಾಯಾಲಯದ ನಿರ್ದೇಶನ ದಂತೆ ಮೀಸಲಾತಿ ಮರು ಜಾರಿಗೊಳಿಸಿತು. ಜೊತೆಗೆ ರಾಜ್ಯ ಸರ್ಕಾರದ ಚಿನ್ನಪ್ಪರೆಡ್ಡಿ ಆಯೋಗ ಹಿಂದುಳಿದವರ ಪಟ್ಟಿಯಿಂದ ಕೈಬಿಟ್ಟಿದ್ದ ಕೆಲವು ಸಮುದಾಯಗಳನ್ನು ಮಂಡಲ್ ಆಯೋಗ ಹಿಂದುಳಿದಿವೆ ಎಂದು ಪರಿಗಣಿಸಿತ್ತು.

    ಚಿನ್ನಪ್ಪರೆಡ್ಡಿ ಆಯೋಗದ ಅನುಷ್ಠಾನಕ್ಕೆ ಆದೇಶ ಹೊರಡಿಸಿದಾಗ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾದವು.ಇದರಿಂದ ವಿಚಲಿತವಾದ ರಾಜ್ಯಸರ್ಕಾರ ಈ ವರದಿಯ ಅನುಷ್ಠಾನವನ್ನು ಹಿಂಪಡೆಯಿತು. ಅನಂತರದಲ್ಲಿ ಮಧ್ಯಂತರ ಆದೇಶವೇ ಅಧಿಕೃತವಾಯಿತು. ಮಧ್ಯಂತರ ಆದೇಶದ ಕಲಂಗಳಿಗೆ 2ಎ, 2ಬಿ, 3ಎ, 3ಬಿ ಎಂಬ ಉಪವಿಂಗಡನೆಗಳನ್ನೂ ಮಾಡುವ ಮೂಲಕ ಕೆಲವು ಸುದಾಯಗಳಿಗೆ ನಿರ್ದಿಷ್ಟ ಪ್ರಮಾಣದ ಮೀಸಲಾತಿ ನಿಗದಿಪಡಿಸಲಾಗಿದೆ.

   ಪ್ರತೀ ಸಮುದಾಯಕ್ಕೂ ಮೀಸಲಾತಿಯ ಸೌಲಭ್ಯ ಒದಗಿಸುವುದೇ ಒಳವಿಂಗಡನೆಯ ಉದ್ದೇಶ. ಇದನ್ನನುಸರಿಸಿ ಸರ್ಕಾರ 1994ರಲ್ಲಿ ಹಿಂದುಳಿದ ವರ್ಗಗಳ ಖಾಯಂ ಆಯೋಗ ರಚನೆಗೆ ಕ್ರಮಕೈಗೊಂಡಿತು. ಹೀಗೆ ರಚಿತವಾದ ಖಾಯಂ ಆಯೋಗದ ಮೊದಲ ಅಧ್ಯಕ್ಷರು ನಿವೃತ್ತ ನ್ಯಾಯಾಧೀಶರಾಗಿದ್ದ ಕುದೂರು ನಾರಾಯಣ ಪೈಗಳು. ಅಲ್ಲಿಂದ ಶಾಶ್ವತ ಆಯೋಗ ಕಾರ್ಯನಿರ್ವಹಿಸುತ್ತಾ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap