ಬ್ಯಾಡಗಿ:
ಮೋಬೈಲ್‍ಗಳಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ, ಅದಲ್ಲದೇ ಹಣದಾಸೆಗೆ ಟಂಟಂ(ಕಟಮಾ) ವಾಹನಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತು ವೇಗದ ಚಾಲನೆ ಮಾಡುತ್ತಿದ್ದು ಬಹಳಷ್ಟು ಅಪಘಾತ ಪ್ರಕರಣಗಳು ಕಂಡು ಬಂದಿದೆ, ಇದರಿಂದ ತಾಲೂಕಿನಲ್ಲಿ ಹಲವಾರು ಜನರು ಜೀವ ಕಳೆದುಕೊಂಡಿದ್ದು, ಸುರಕ್ಷಿತವಲ್ಲದ ಚಾಲನೆಗೆ ಪೊಲೀಸ್ ಇಲಾಖೆ ಅವಕಾಶ ನೀಡುವುದಿಲ್ಲ, ಅಂತಹ ಪ್ರಕರಣ ಕಂಡುಬಂದಲ್ಲಿ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದ್ದಾರೆ ಎಂದು ಪಿಎಸ್‍ಐ ಎಂ.ಎಂ.ಮಹಾಂತೇಶ ಎಚ್ಚರಿಸಿದರು.
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪಟ್ಟಣದ ಎಸ್‍ಎಸ್‍ಪಿಎನ್ ಪ್ರೌಢಶಾಲೆಯಲ್ಲಿ ಬ್ಯಾಡಗಿ ಪೊಲೀಸ್ ಠಾಣೆ ಇವರು ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಚಾಲಕರು ರಸ್ತೆ ನಿಯಗಳನ್ನು ಪಾಲಿಸುತ್ತಿಲ್ಲ ರಸ್ತೆಗಳಲ್ಲಿ ತಮಗಿಷ್ಟ ಬಂದಂತೆ ಚಾಲನೆ ಮಾಡುತ್ತಿದ್ದಾರೆ, ಯುವಕರಂತೂ ಹೆಲ್ಮೆಟ್ ಧರಿಸದೇ ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ, ಹೆಲ್ಮೆಟ್ ಕಡ್ಡಾಯ ಮಾಡಿ ಆದೇಶ ಹೋರಡಿಸಿದ್ದರೂ ಕೂಡಾ ಇದಕ್ಕೆ ಕಿವಿಗೊಡದೆ ವಾಹನ ಚಾಲನೆ ಮಾಡುತ್ತಿದ್ದು ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮೊಬೈಲ್‍ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುವುದು ಕೂಡಾ ಶಿಕ್ಷಾರ್ಹ ಅಪರಾಧವಾಗಿದೆ ಈ ನಿಟ್ಟಿನಲ್ಲಿ ಸ್ವಯಂ ಜಾಗೃತರಾಗಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.
ಹೆಚ್ಚುತ್ತಿರುವ ಅಪರಾಧ ಸಂಖ್ಯೆಗಳಲ್ಲಿ ಬಹುಪಾಲು ಯುವ ಜನಾಂಗವೇ ಪ್ರಮುಖ ಪಾತ್ರ ವಹಿಸುತ್ತಿರುವುದು ದುರಂತದ ಸಂಗತಿ, ದೇಶದ ಯುವಶಕ್ತಿ ಅಪರಾಧ ಜಗತ್ತಿನ ಭಾಗವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ದೇಶದಲ್ಲಿ ಅಪರಾಧ ಸಂಖ್ಯೆಗಳಿಗೆ ಕಡಿವಾಣ ಹಾಕುವಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದ್ದರೂ ಕಾನೂನಿನ ಅರಿವಿಲ್ಲದೇ ಯುವ ಜನಾಂಗ ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದಾರೆ ಈ ಕುರಿತಂತೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ಪ್ರೋಫೈಲ್ ಅಥವಾ ಡಿಪಿಗಳಲ್ಲಿ ನಿಮ್ಮ ಫೋಟೋ ಬಳಸದಿರಿ: ಸಾಮಾಜಿಕ ಜಾಲತಾಣಗಳು (ಸೋಶಿಯಲ್ ಮೀಡಿಯಾ) ಇತ್ತೀಚಿನ ದಿನಗಳಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತಿವೆ, ಇದರಿಂದ ಫೇಸ್‍ಬುಕ್ ವಾಟ್ಸ್‍ಪ್‍ಗಳ ಪ್ರೋಫೈಲ್ ಅಥವಾ ಡಿಪಿಗಳಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಫೋಟೋ ಬಳಸದಂತೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಫೋಟೋಗಳನ್ನು ಹಾಕದಂತೆ ಎಚ್ಚರಿಕೆ ನೀಡಿದ ಅವರು, ಸುಲಭವಾಗಿ ಡೌನಲೋಡ್ ಮಾಡಿಕೊಳ್ಳಲು ಅವಕಾಶವಿರುವ ಇಲ್ಲಿ ವಿಕೃತ ಮನಸ್ಸಿನ ಯುವಕರು ಅವುಗಳನ್ನು ಎಡಿಟ್ ಮಾಡುವ ಮೂಲಕ ಅಶ್ಲೀಲ ವೆಬ್‍ಸೈಟ್‍ಗಳಿಗೆ ರವಾನಿಸುವ ಸಾಧ್ಯತೆಗಳಿವೆಯಲ್ಲದೇ, ಅದನ್ನೇ ನೆಪವಾಗಿಟ್ಟುಕೊಂಡು ನಿಮ್ಮನ್ನು ಬ್ಲಾಕ್ ಮೇಲ್ ಕೂಡ ಮಾಡುವ ಸಾಧ್ಯತೆಗಳಿವೆ ಎಂದರು.
ಎ.ಎಸ್.ಐ.ಗಳಾದ ತಳವಾರ, ಖಾಜಿ, ಸಿಬ್ಬಂದಿಗಳಾದ ಬೀರಪ್ಪ ಹೂಲಿಹಳ್ಳಿ, ಎಸ್.ಎಂ.ಅಗಡಿ, ಮಂಜುನಾಥ, ಎಚ್.ಎಲ್.ಸುಂಕದ, ಬಸವರಾಜ ಅಂಜುಟಗಿ ಸೇರಿದಂತೆ ಮುಖ್ಯಶಿಕ್ಷಕ ಎಂ.ಎಂ.ಹೊಸ್ಮನಿ, ಶಿಕ್ಷಕರಾದ ಬಿ.ಎಫ್.ದೊಡ್ಮನಿ, ಎಂ.ವಿ.ನೆಲವಿಗಿ, ಮುಖಂಡರಾದ ಪರುಶರಾಮ ಉಜಿನಿಕೊಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.