ತುಮಕೂರು
ರಾಜ್ಯದಲ್ಲಿ ಪ್ರವಾಹ ಉಂಟಾಗಿ 22 ಜಿಲ್ಲೆಗಳ ಜನತೆ ಸಂಕಷ್ಟಕ್ಕೆ ತುತ್ತಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆ ಕಾರಣ. ಕೂಡಲೆ ನೆರೆ ಮತ್ತು ಬರ ಪರಿಸ್ಥಿತಿ ನಿವಾರಣೆಗೆ ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘದ ಜಿಲ್ಲಾಧ್ಯಕ್ಷ ಆನಂದ್‍ಪಟೇಲ್ ಮಾತನಾಡಿ, ಈ ತಿಂಗಳ ಮೊದಲ ವಾರದಿಂದ ಸುಮಾರು 2 ವಾರಗಳು ಸುರಿದ ಮಳೆಯಿಂದ ಮತ್ತು ಮಹಾರಾಷ್ಟ್ರಜ ಕೊಯ್ನಾ ಜಲಾಶಯ ಒಳಗೊಂಡಂತೆ ರಾಜ್ಯದ ಅನೇಕ ಜಲಾಶಯಗಳ ನಿರ್ವಹಣೆಯ ಹೊಣೆ ಹೊತ್ತ ಸಿಬ್ಬಂದಿ ಬೇಜವಾಬ್ದಾರಿಯಿಂದ ಏಕಾಏಕಿ ಹೊರಬಿಟ್ಟ ಅಪಾರ ಪ್ರಮಾಣದ ನೀರು ಸುಮಾರು ನಾಲ್ಕೂವರೆ ಸಾವಿರ ಹಳ್ಳಿಗಳು ಜಲಾಘಾತಕ್ಕೆ ಒಳಗಾಗುವಂತೆ ಮಾಡಿತು.
ಸುಮಾರು 14.82 ಲಕ್ಷ ಎಕರೆ ಪ್ರದೇಶದ ಕೃಷಿ ಬೆಳೆಯನ್ನು ಈ ಮಹಾ ಪ್ರವಾಹ ನುಂಗಿ ಹಾಕಿತ್ತು. ಈ ಪ್ರವಾಹದ ಹೊಣೆಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಹೊರಬೇಕಾಗಿರುವುದರಿಂದ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಈ ಎರಡೂ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲಾ ಜಲಾಶಯಗಳಲ್ಲೂ ಕುಡಿಯುವ ನೀರಿನ ಹೆಸರಿನಲ್ಲಿ ಅತಿ ಹೆಚ್ಚಿನ ನೀರನ್ನು ಶೇಖರಣೆ ಮಾಡಲಾಗುತ್ತಿದೆ. ಅಗತ್ಯಕ್ಕಿಂತ ಶೇ. 25 ರಷ್ಟು ಹೆಚ್ಚು ನೀರು ಶೇಖರಣೆ ಮಾಡಿ ಮಳೆ ಬಂದ ಸಂದರ್ಭದಲ್ಲಿ ಏಕಕಾಲದಲ್ಲಿ ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುವ ನಿಯಮದಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲ ಕಾಲಕ್ಕೆ ನೀರಾವರಿ ತಜ್ಞರ ಅಭಿಪ್ರಾಯ ಪಡೆದು ರೈತರ ಜಮೀನುಗಳಿಗೆ ನಾಲೆ ಮೂಲಕ ನೀರು ಹರಿಸಿದರೆ ಅನಾಹುತ ಆಗುತ್ತಿರಲಿಲ್ಲ. ಅವಶ್ಯಕತೆ ಇದ್ದಾಗ ನೀರು ಬಿಡುವುದಿಲ್ಲ. ಹೆಚ್ಚಿನ ಮಟ್ಟದಲ್ಲಿ ನೀರು ಬಂದಾಗ ಒಂದೇ ಬಾರಿಗೆ ನೀರು ಬಿಡುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದೇವೆ. ಆದರೂ ನೆರೆ ಪರಿಹಾರ ಕಾಮಗಾರಿಗಳಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಈಗಲಾದರೂ ವೈಜ್ಞಾನಿಕವಾಗಿ, ನ್ಯಾಯಬದ್ದವಾಗಿ ರೈತರ ಕೃಷಿ ಬೆಳೆಯ ಲೆಕ್ಕಾಚಾರ ಹಾಕಿ ಹಣ ಬಿಡುಗಡೆ ಮಾಡಬೇಕು. ನೆಲೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಬೇಕು ಎಂದರು.
ತುಮಕೂರು ಸೇರಿದಂತೆ ಬಯಲು ಸೀಮೆಯ 8 ಜಿಲ್ಲೆಗಳು ತೀವ್ರ ಬರಗಾಲಕ್ಕೆ ತುತ್ತಾಗಿವೆ. ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾವೇರಿ ಮೂಲಕ ಹೇಮಾವತಿ ನೀರು ಸಮುದ್ರದ ಪಾಲಾಗುತ್ತಿದೆ. ನಾಲೆಗಳ ಮೂಲಕ ಜಿಲ್ಲೆಯ ಎಲ್ಲ ಕೆರೆಕಟ್ಟೆ ತುಂಬಿಸುವ ಕೆಲಸ ಆಗುತ್ತಿಲ್ಲ. ಜಿಲ್ಲೆಗೆ ನಿಗದಿಯಾಗಿರುವ 24 ಟಿ.ಎಂ.ಸಿ ನೀರನ್ನು ಹರಿಸಿಕೊಳ್ಳುವ ಮೂಲಕ ಎಲ್ಲ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ರಾಜ್ಯದ 16 ಜಿಲ್ಲೆಗಳಲ್ಲಿನ ಜನತೆ ಭಾರಿ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಮಾತ್ರ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕಾರ್ಯದಲ್ಲೆ ಮಗ್ನವಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕೂಡಲೇ ಕೇಂದ್ರ ಸರ್ಕಾರ 53 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತ ಹಳ್ಳಿಗಳ ರೈತರ ಎಲ್ಲಾ ಸಾಲಗಳು ರದ್ದಾಗಬೇಕು. ದೂರಗಾಮಿತ್ವದಲ್ಲಿ ಶಾಶ್ವತ ನೆರೆ ಮತ್ತು ಬರ ನಿರ್ವಹಣೆಗೆ ರಾಜ್ಯಾದ್ಯಂತ ಕ್ರಮ ಕೈಗೊಳ್ಳಬೇಕು. ನೆರೆ ಸಂತ್ರಸ್ತರ ಪರಿಹಾರ ಮೊತ್ತವನ್ನು ವಸ್ತುನಿಷ್ಠವಾಗಿ ಪರಿಗಣಿಸಿ ವಿತರಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಧನಂಜಯ್ಯ ಆರಾಧ್ಯ, ಕೋಡ್ಲ್ಲಹಳ್ಳಿ ಸಿದ್ದರಾಜು, ಲೋಕೇಶ್, ಹಳೆ ಸಂಪಿಗೆ ಕೀರ್ತಿ, ದ್ಯಾಮೇಗೌಡರು, ಅನಿಲ್‍ಕುಮಾರ್ ಸೇರಿದಂತೆ ನೂರಾರು ಮಂದಿ ರೈತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ