ಜಗಳೂರು :
ತಾಲ್ಲೂಕಿನ ಮೂಲಭೂತ ಸಮಸ್ಯೆಗಳು, ಶಾಶ್ವತ ಯೋಜನೆಗಳ ಜಾರಿಗಾಗಿ ಮತ್ತು ರೈತರ ಸಮಸ್ಯೆಗಳನ್ನು ಕುರಿತು ಕರ್ನಾಟಕ ಸರಕಾರದ ರಾಜ್ಯಪಾಲರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು ಇದೇ 10 ರಂದು ವಿಡಿಯೋ ಸಂವಾದ ನಡೆಸಲಿದ್ದಾರೆಂದು ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ತಾಲ್ಲೂಕು ಅಧ್ಯಕ್ಷ ಅಣಬೂರು ಮಠದ ಕೊಟ್ರೇಶ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ರೈತ ಸಂಘದ ವತಿಯಿಂದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬರಪೀಡಿತ ತಾಲ್ಲೂಕಿನ ರೈತರಜ್ವಲಂತ ಸಮಸ್ಯೆಗಳ ಬಗ್ಗೆ ಅವಲೋಕಿಸಿ ಶಾಶ್ವತ ಪರಿಹಾರಕ್ಕಾಗಿ ರಾಜ್ಯಪಾಲರಿಗೆ ಪತ್ರ ವ್ಯವಹಾರವನ್ನು ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಿಲ್ಲಾಧಿಕಾರಿಗಳ ಮುಖಾಂತರ ಖುದ್ದು ಕರೆ ನೀಡಿ ನಮ್ಮ ಮನವಿಗೆ ಸ್ಪಂಧಿಸಿ ಇದೇ 10 ರಂದು ದಾವಣಗೆರೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ವಿಡಿಯೋ ಸಂವಾದವನ್ನು ನಡೆಸಲಿದ್ದಾರೆ. ಅಂದು ನಡೆಯುವ ಸಂವಾದದಲ್ಲಿ ತಾಲ್ಲೂಕಿಗೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ, ರೈತರ ಸಂಪೂರ್ಣ ಸಾಲಮನ್ನ, ಬೆಳೆವಿಮೆ ಹಾಗೂ ಸೈನಿಕ ಹುಳುಭಾದೆಯಿಂದ ನಷ್ಟಹೊಂದಿದ ಮೆಕ್ಕೆಜೋಳದ ರೈತರಿಗೆ ಬೆಳೆಪರಿಹಾರ ಮುಂಗಾರು ಮತ್ತು ಹಿಂಗಾರು ಬೆಳೆಗಳು ಕೈ ಕೊಟ್ಟಿದ್ದು ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು ಈ ಹಿನ್ನೆಲೆಯಲ್ಲಿ ಶೇಂಗಾ, ರಾಗಿ, ಈರುಳ್ಳಿ, ಸಜ್ಜೆ ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆಗಳ ನಷ್ಟವನ್ನು ಕುರಿತು ಬೆಳೆಪರಿಹಾರಕ್ಕಾಗಿ ಸೂಕ್ತ ಕ್ರಮಕೈಗೊಂಡು ಬರಪೀಡಿತ ಪ್ರದೇಶಕ್ಕೆ ಉತ್ತಮ ಅನುದಾನವನ್ನು ನೀಡಿ ರೈತರ ಸಂಕಷ್ಟವನ್ನು ಈಡೇರಿಸುವಂತೆ ಮನವಿಯನ್ನು ಮಾಡಲಾಗುವುದು ಎಂದರು.
ತಾಲ್ಲೂಕು ಉಪಾಧ್ಯಕ್ಷ ತಮಲೇಹಳ್ಳಿ ಪಟೇಲ್ ಮಾರಪ್ಪ ಮಾತನಾಡಿ ತಾಲ್ಲೂಕಿನಾದ್ಯಂತ ವಾಡಿಕೆಯಂತೆ ಮಳೆಯಾದರು ಕೆರೆಕಟ್ಟೆಗಳು ತುಂಬಿಲ್ಲ ಜನ-ಜಾನುವಾರಿಗಳಿಗೆ ಕುಡಿಯುವ ನೀರಿನ ಅಹಾಕಾರವಾಗಿದೆ ನೆರೆಯ ಜಿಲ್ಲೆಯಲ್ಲಿ ನದಿ ಮತ್ತು ಡ್ಯಾಂಗಳು ತುಂಬಿ ಹರಿಯುತ್ತಿವೆ ಬರಪೀಡಿತ ನಮ್ಮ ತಾಲ್ಲೂಕಿಗೆ ಜಲ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ 52 ಕೆರೆಗಳ ನೀರು ತುಂಬಿಸುವ ಯೋಜನೆಯನ್ನು ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ರೈತರ ಪರವಾಗಿ ಹೋರಾಡುವಂತಹ ರೈತ ಮುಖಂಡರಿಗೆ ಇಲ್ಲಿನ ಅಧಿಕಾರಿಗಳು ಕೆಲ ಕಾನೂನುಗಳನ್ನು ನೆಪಹೊಡ್ಡಿ ದೂರು ದಾಖಲಿಸುತ್ತಿದ್ದಾರೆ ಇದನ್ನು ಸಹ ಮುಖ್ಯಮಂತ್ರಿಗಳ ಗಮನಕ್ಕೆ ತಂದು ರೈತರ ವಿರುದ್ಧ ವಿನಾಕಾರಣ ದೂರುಗಳನ್ನು ದಾಖಲು ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ತಾಲೂಕು ಅಧ್ಯಕ್ಷ ಅಣಬೂರು ಕೊಟ್ರೇಶ್ ಮುಖಾಂತರ ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ಅಜ್ಜಪ್ಪ, ಖಜಾಂಚಿ ಗೋಗುದ್ದು ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ