ತುಮಕೂರು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಜನತಾ ನ್ಯಾಯಾಲಯಗಳ ವತಿಯಿಂದ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಲ್ಲಿ ಸೆ.11ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಗೀತಾ ಕೆ.ಬಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಜಿ.ನರೇಂದರ್ ಅವರ ನಿರ್ದೇಶನಂತೆ ಲೋಕ್ ಅದಾಲತ್ ಅ£ನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಲ್ಲಿ ಆಯೋಜಿಸುತ್ತಿದ್ದು, ಪ್ರತೀ ವರ್ಷ 4 ಅದಾಲತ್‌ಗಳು ನಡೆದು ಲಕ್ಷಾಂತರ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುತ್ತಿವೆ.
ಸೆಪ್ಟೆಂಬರ್ 11 ರಂದು ನಡೆಯುವ ಲೋಕಅದಾಲತ್ ಮೂಲಕ ಕಕ್ಷಿದಾರರು ರಾಜಿ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಇತ್ಟರ್ಥ ಪಡಿಸಿಕೊಳ್ಳಬಹುದಾಗಿದೆ. ಲೋಕ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ. ವಿಶೇಷ ಅನುಮತಿ ಹೊರತುಪಡಿಸಿ ಒಮ್ಮೆ ಅದಾಲತ್‌ನಲ್ಲಿ ಪ್ರಕರಣವು ಇತ್ಯರ್ಥವಾದ ಬಳಿಕ ಮೇಲ್ಮನವಿಗೆ ಅವಕಾಶ ಇರುವುದಿಲ್ಲ, ಸ್ವಪ್ರೇರಣೆಯಿಂದ ಮುಂದೆ ಬಂದು ತಮ್ಮ ವಿವಾದಗಳನ್ನು ಬಗೆಹರಿಸಿಕೊಂಡಲ್ಲಿ ಸೌಹಾರ್ದಯುತವಾಗಿ ಜೀವನ ನಡೆಸಬಹುದಾಗಿದೆ .
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಳಾದ ನ್ಯಾ. ನೂರುನ್ನೀಸ ಮಾತನಾಡಿ ರಾಜ್ಯ ಸರ್ಕಾರ ಆದೇಶದ ರೀತ್ಯ ಪೊಲೀಸ್ ಇಲಾಖೆ ಇ-ಚಲನ್ ಗಳ ಮೂಲಕ ಹಾಕಿರುವ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಸೆ.9ರೊಳಗೆ ಸ್ವಯಂಪ್ರೇರಿತವಾಗಿ ಪಾವತಿಸಿದಲ್ಲಿ ಶೇ. 50% ವಿನಾಯಿತಿ ನೀಡಲಾಗಿದ್ದು, ಇದರ ಸದೋಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು,
ಲೋಕ ಆದಾಲತ್ ಸಾಧನೆ: ಜುಲ್ಯೆ9 ರಂದು ಆಯೋಜಿಸಲಾಗಿದ್ದ ಲೋಕ ಅದಾಲತ್‌ನಲ್ಲಿ ಜೆಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 92,178 ಪ್ರಕರಣಗಳಲ್ಲಿ 11,790 ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 1,59,265 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 1,71,055 ಪ್ರಕರಣ ಇತ್ಯರ್ಥವಾಗಿದೆ ಎಂದು ನ್ಯಾಯಾಧೀಶರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನರಸಿಂಹಮೂರ್ತಿ, ಲತಾ ಇತರರು ಉಪಸ್ಥಿತರಿದ್ದರು.
11 ಆಗಸ್ಟ್ 2020 ರಂದು ಸರ್ವೋಚ್ಚ ನ್ಯಾಯಾಲಯವು ವಿನಿತಾಶರ್ಮ ಪ್ರಕರಣದಲ್ಲಿ ಐತಿಹಾಸಿಕ ತೀರ್ಪನ್ನು ನೀಡಿದ್ದು ಹಿಂದೂ ಅವಿಭಕ್ತ ಕುಟುಂಬದಲ್ಲಿ ದಾಯಾದಿಯ ಮಗಳು, ಒಬ್ಬ ಮಗನ ರೀತಿಯಲ್ಲಿಯೇ ಹುಟ್ಟಿನಿಂದಲೇ ದಾಯಾದಿ ಆಸ್ತಿಯಲ್ಲಿ ಸಮಾನ ಹಕ್ಕು ಮತ್ತು ಹೊಣೆಗಾರಿಕೆ ಹೊಂದುತ್ತಾಳೆಂದು ಆದೇಶವಾಗಿರುತ್ತದೆ. ಆದ್ದರಿಂದ ನ್ಯಾಯಾಲಯಲ್ಲಿ ಬಾಕಿ ಇರುವ ವಿಭಾಗ ದಾವೆಗಳನ್ನು ಜನತಾ ನ್ಯಾಯಾಲಯದಲ್ಲಿ ಶೀಘ್ರದಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸದಾವಕಾಶ.
ತುಮಕೂರು ತಾಲ್ಲೂಕು ಮಲ್ಲೇನಹಳ್ಳಿಯಲ್ಲಿ ಬಾಣಂತಿ ಮತ್ತು ಹಸುಗೂಸನ್ನು ಊರ ಹೊರಗಿನ ಗುಡಿಸಲಿನಲ್ಲಿಟ್ಟು, ಹಸುಗೂಸು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಾನವೀಯ ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಭೇಟಿಕೊಟ್ಟು, ಸಂಪ್ರದಾಯವೇ ದೊಡ್ಡದೆನ್ನುತ್ತಿದ್ದ ಅಲ್ಲಿನ ಜನರ ಮನವೊಲಿಸಿ ಬಾಣಂತಿಯನ್ನು ಮರಳಿ ಮನೆಗೆ ಸೇರಿಸಲಾಗಿದೆ.
ಇಂತಹ ಪ್ರಕರಣಗಳು ಬೇರೆ ಗೊಲ್ಲರಹಟ್ಟಿಗಳಲ್ಲೂ ಸಂಭವಿಸುತ್ತಿದೆಯೆಂಬುದನ್ನು ಅರಿತು ಹಟ್ಟಿಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ಘಟನೆಯಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ನೂರುನ್ನೀಸಾ ಸದಸ್ಯಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ.
ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನ:
ಸಾರ್ವಜನಿಕರು ಮುಂಚಿತವಾಗಿ ಹತ್ತಿರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಗೆ ಭೇಟಿ ನೀಡಿ, ತಮ್ಮ ಸಿವಿಲ್ ಪ್ರಕರಣ ಇತ್ಯರ್ಥಪಡಿಸಕೊಳ್ಳ ಬಹುದು, ಪ್ರಕರಣ ಇತ್ಯರ್ಥವಾದಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣ ಮರುಪಾವತಿಸಲಾಗುವುದು ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇಂದೊದು ವಿಶೇಷ ಅವಕಾಶವಾಗಿದೆ ಎಂದು ಸದಸ್ಯೆ ಗೀತಾ ಕೆ.ಬಿ. ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ