ಸೆ.20ಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ

ತುಮಕೂರು:

                  ಕೇಂದ್ರದ ಎನ್.ಡಿ.ಎ ಸರಕಾರದ ಇಂಧನ ಬೆಲೆಗಳ ನಿರಂತರ ಹೆಚ್ಚಳದಿಂದ ಜನಸಾಮಾನ್ಯರ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸೆಪ್ಟಂಬರ್ 20 ರ ಗುರುವಾರದಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.

                 ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂಧನ ಬೆಲೆಗಳ ಹೆಚ್ಚಳದಿಂದ ಜನಸಾಮಾನ್ಯರ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಿಳಿಸುವುದು ಮತ್ತು ರೇಪಲ್ ಯುದ್ದ ವಿಮಾನ ಖರೀದಿಯಲ್ಲಾಗಿರುವ ಅವ್ಯವಹಾರವನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮತ್ತು ಕೆ.ಪಿ.ಸಿ.ಸಿ.ಅಧ್ಯಕ್ಷ ದಿನೇಶ ಗುಂಡೂರಾವ್,ಗೌರವಾಧ್ಯಕ್ಷ ಈಶ್ವರ್ ಖಂಡ್ರೆ ಅವರುಗಳ ಸೂಚನೆಯಂತೆ ಸೆಪ್ಟಂಬರ್ 20 ರಂದು ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

                ಕೇಂದ್ರದಲ್ಲಿ ಯುಪಿಎ ಸರಕಾರವಿದ್ದ 2014ರಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 110 ಡಾಲರ್ ಇದ್ದಾಗ ಡಿಸೇಲ್ ಬೆಲೆ 70,ಪೆಟ್ರೋಲ್ ಬೆಲೆ 80 ರೂ ತಲುಪಿತ್ತು. ಇದನ್ನೇ ಅಂದಿನ ಚುನಾವಣಾ ವಿಷಯವಾಗಿಸಿಕೊಂಡ ಬಿಜೆಪಿ, ತಾವು ಅಧಿಕಾರಕ್ಕೆ ಬಂದರೆ ಇಂಧನ ಬೆಲೆ ಇಳಿಸುವ ಭರವಸೆ ನೀಡಿತ್ತು.ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 67 ಡಾಲರ್ ಇದ್ದರೂ ಡಿಸೇಲ್ ಬೆಲೆ 79 ರೂ, ಪೆಟ್ರೋಲ್ ಬೆಲೆ 90 ರೂ ದಾಟಿದೆ.ಇದರಿಂದ ಜನಸಾಮಾನ್ಯ ಜೇಬಿಗೆ ಕತ್ತರಿ ಬಿಳುತ್ತಿದ್ದು, ಇದರ ಫಲವಾಗಿ ಅಗತ್ಯವಸ್ತುಗಳ ಬೆಲೆಯೂ ಹೆಚ್ಚುವುದರಿಂದ ಬಡವರು,ಮಧ್ಯಮವರ್ಗದ ಜನರು ಬದುಕುವುದು ಕಷ್ಟವಾಗಲಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಈ ಪ್ರತಿಭಟನೆಯ ಮೂಲಕ ಮಾಡಲಾಗುತ್ತಿದೆ ಎಂದು ಕೆಂಚಮಾರಯ್ಯ ನುಡಿದರು.

                 ಯುಪಿಎ ಸರಕಾರವಿದ್ದಾಗ ಪ್ರಧಾನಿ ಮನಮೋಹನ್‍ಸಿಂಗ್ ರೇಪಲ್ ಯುದ್ದ ವಿಮಾನವೊಂದಕ್ಕೆ 560 ಕೋಟಿ ನೀಡಿ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು.ಎನ್.ಡಿ.ಎ ಸರಕಾರದಲ್ಲಿ ಅದು 667 ಕೋಟಿ ರೂಗೆ ಹೆಚ್ಚಳ ಮಾಡಿದ್ದರು. ಆದರೆ ಇಂದು ಪ್ರಧಾನಿ ಮೋದಿ ಅವರು ತಮ್ಮ ಗೆಳೆಯ ಅಂಬಾನಿ ಕಂಪನಿಗೆ ಒಂದು ರೇಫಲ್ ಯುದ್ದ ವಿಮಾನಕ್ಕೆ 1660 ಕೋಟಿ ರೂ ಕೊಟ್ಟ ಖರೀದಿಸಲು ಹೊರಟಿದ್ದಾರೆ.ಈ ವ್ಯವಹಾರದಿಂದ ಬಿಜೆಪಿಗೆ ಎಷ್ಟು ಕೋಟಿ ಕಿಕ್‍ಬ್ಯಾಕ್ ಹರಿದು ಬಂದಿದೆ ಎಂಬುದನ್ನು ಜನತೆಯ ಮುಂದಿಡುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ.ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಬೃಹತ್ ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸೆಪ್ಟಂಬರ್ 20 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯ ಬಳಿ ಸೇರಿ,ಬೈಕ್ ರ್ಯಾಲಿ ಹಾಗೂ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು.ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರತಿಭಟನೆ ಯಶಸ್ವಿಗೊಳಿಸುವಂತೆ ಕೆಂಚಮಾರಯ್ಯ ಮನವಿ ಮಾಡಿದರು.

                 ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ,ಅಚ್ಚೆ ದಿನ್ ಹೆಸರಿನಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ,ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ.ಅಲ್ಲದೆ ಹಲವು ಹಗರಣಗಳು ಬೆಳಕಿಗೆ ಬರುತ್ತಿದ್ದು, ಲೋಕಸಭಾ ಚುನಾವಣೆಯ ಹತ್ತಿರದಲ್ಲಿರುವ ಸಂದರ್ಭದಲ್ಲಿ ಕಾರ್ಯಕರ್ತರು ಮನೆ ಮನೆಗೆ ಪ್ರಧಾನಿ ಮೋದಿ ಅವರ ಮೋಸವನ್ನು ತಿಳಿಸಿ,ಕಾಂಗ್ರೆಸ್ ಪಕ್ಷದತ್ತ ಜನರನ್ನು ಸೆಳೆಯಬೇಕಾಗಿದ್ದು,ಈ ಪ್ರತಿಭಟನೆ ಅದಕ್ಕೆ ಪೂರಕವಾಗಿದೆ. ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರ ಇಂದನದ ಮೇಲೆ ವಿಧಿಸಿದ್ದ ತೆರಿಗೆ ಕಡಿಮೆ ಮಾಡಿ,ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ 2 ರೂ ಕಡಿಮೆಯಾಗುವಂತೆ ಮಾಡಿದೆ.ಇದಕ್ಕಾಗಿ ನಾವು ಸರಕಾರಕ್ಕೆ ಅಭಿನಂದನೆ ಸಲ್ಲಿಸಬೇಕಾಗಿದೆ. ಪ್ರತಿಭಟನೆಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸುವಂತೆ ತಿಳಿಸಿದರು.

                ಕೆ.ಪಿ.ಸಿ.ಸಿ.ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ,ಎನ್.ಡಿ.ಎ ಸರಕಾರದಲ್ಲಿ ಇಂಧನ ಬೆಲೆಗಳ ಹೆಚ್ಚಳವನ್ನು ಗಮನಿಸಿದರೆ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು 3 ಅಂಕಿ ದಾಟಿ, ಇತಿಹಾಸ ನಿರ್ಮಿಸಲಿದೆ.ಅಲ್ಲದೆ ರಾಜ್ಯದಲ್ಲಿ ಸಿಐಎಸ್‍ಎಫ್‍ನ್ನು ಸ್ಥಳಾಂತರಿಸುವ ಮೂಲಕ ಕೇಂದ್ರ ರಾಜ್ಯಕ್ಕೆ ಮೋಸ ಮಾಡಿದೆ.ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್ ಷೋ ವನ್ನು ಬೇರೆಡೆಗೆ ಸ್ಥಳಾಂತರಿಸಲು ವಿಫಲ ಯತ್ನ ನಡೆಸಿ,ಕೊನೆಗೆ ಕರ್ನಾಟಕಕ್ಕೆ ಮರಳಿದ್ದಾರೆ.ಇಂತಹ ರಾಜ್ಯವಿರೋಧಿ ನೀತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಗುರುತರ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.

                ಸಭೆಯಲ್ಲಿ ಮಾಜಿ ಶಾಸಕ ಎಸ್.ಷಪಿಅಹಮದ್,ನಗರಪಾಲಿಕೆ ಸದಸ್ಯರಾದ ನಯಾಜ್,ಕುಮಾರ್,ಮಹೇಶ್,ಇನಾಯತ್, ಷಕೀಲ್ ಅಹಮದ್,ಮುಜೀದಾಖಾನಂ, ಫರೀದಾ ಬೇಗಂ, ನಾಸಿರಾಬೇಗಂ, ರೂಪಾಶ್ರೀ, ಪ್ರಭಾವತಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋರಾಜು,ಮೆಹಬೂಬ್ ಪಾಷ,ನರಸೀಯಪ್ಪ,ಹೆಚ್.ಸಿ.ಹನುಮಂತಯ್ಯ,ಜಿ.ಎಸ್.ಸೋಮಣ್ಣ, ಸಿ.ಶಿವಮೂರ್ತಿ, ಟಿ.ಬಿ.ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link