ಚಿತ್ರದುರ್ಗ;
ಚಿತ್ರದುರ್ಗ ಸೇರಿದಂತೆ ಚಳ್ಳಕೆರೆ ನಗರಸಭೆ ಹಾಗೂ ಹೊಸದುರ್ಗ ಪುರಸಭೆಗೆ ಚುನಾವಣೆ ನಡೆಯುತ್ತಿದ್ದು ಆಗಸ್ಟ್ 31 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಿದ್ದತೆ ಕುರಿತಂತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು. ಚಿತ್ರದುರ್ಗ ನಗರಸಭೆಯ 35 ವಾರ್ಡ್, ಚಳ್ಳಕೆರೆ ನಗರಸಭೆ 31 ವಾರ್ಡ್‍ಗಳು ಇದರಲ್ಲಿ ವಾರ್ಡ್ ಸಂಖ್ಯೆ 19 ರಲ್ಲಿ ಅವಿರೋಧವಾಗಿ ಆಯ್ಕೆಯಾದ್ದಾರೆ. ಉಳಿದ 30 ವಾರ್ಡ್‍ಗಳಿಗೆ ಚುನಾವಣೆ ನಡೆಯುತ್ತಿದೆ. ಹೊಸದುರ್ಗ ಪುರಸಭೆಯ 23 ವಾರ್ಡ್‍ಗಳಿಗೆ ಚುನಾವಣೆ ನಡೆಯುತ್ತಿದೆ.
ಚಳ್ಳಕೆರೆ 99, ಚಿತ್ರದುರ್ಗ 161 ಹಾಗೂ ಹೊಸದುರ್ಗದಲ್ಲಿ 98 ಅಭ್ಯರ್ಥಿಗಳು ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಚಳ್ಳಕೆರೆ 43, ಚಿತ್ರದುರ್ಗ 133 ಹಾಗೂ ಹೊಸದುರ್ಗ 23 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು ಎಲೆಕ್ಟ್ರಾನಿಕ್ಸ್ ಮತಯಂತ್ರ ಬಳಕೆ ಮಾಡಲಾಗುತ್ತಿದೆ. ಚಳ್ಳಕೆರೆ 59, ಚಿತ್ರದುರ್ಗ 169 ಹಾಗೂ ಹೊಸದುರ್ಗದಲ್ಲಿ 32 ಸೇರಿದಂತೆ ಒಟ್ಟು 260 ಎಲೆಕ್ಟ್ರಾನಿಕ್ಸ್ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಚಳ್ಳಕೆರೆ 200, ಚಿತ್ರದುರ್ಗ 584, ಹೊಸದುರ್ಗ 104 ಸೇರಿ 888 ಮತದಾನ ಸಿಬ್ಬಂದಿ ಹಾಗೂ 33 ಬಸ್ಸುಗಳು ಸೇರಿದಂತೆ 17 ಜೀಪುಗಳನ್ನು ಚುನಾವಣೆಗಾಗಿ ಬಳಕೆ ಮಾಡಲಾಗುತ್ತಿದೆ ಎಂದರು.
ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚಿತ್ರದುರ್ಗದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಚಳ್ಳಕೆರೆ ಮತ್ತು ಹೊಸದುರ್ಗದಲ್ಲಿ ತಾಲ್ಲೂಕು ಕಚೇರಿಯನ್ನು ಮಸ್ಟರಿಂಗ್, ಡಿ.ಮಸ್ಟರಿಂಗ್ ಕೇಂದ್ರಗಳನ್ನಾಗಿ ಮಾಡಲಾಗಿದೆ.
ಮತ್ತು ಸೆಪ್ಟೆಂಬರ್ 3 ರಂದು ಬೆಳಗ್ಗೆ 8 ಗಂಟೆಯಿಂದ ಇಲ್ಲಿಯೇ ಮತ ಎಣಿಕೆ ನಡೆಯಲಿದೆ. ಚಳ್ಳಕೆರೆ 5, ಚಿತ್ರದುರ್ಗ 13 ಹಾಗೂ ಹೊಸದುರ್ಗದಲ್ಲಿ 3 ಎಣಿಕೆ ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ಒಟ್ಟು 24 ಎಣಿಕೆ ಮೇಲ್ವಿಚಾರಕರು, 24 ಎಣಿಕೆ ಸಹಾಯಕರು ಹಾಗೂ 24 ಗ್ರೂಪ್ ಡಿ. ಸಿಬ್ಬಂದಿಯ ಸೇವೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಮತದಾನ ಮಾಡುವಾಗ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿದೆ. ಚುನಾವಣಾ ಆಯೋಗ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ ಜೊತೆಗೆ ಇತರೆ 22 ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.
ಹಾಜರುಪಡಿಸಬಹುದಾದ ಇತರೆ ದಾಖಲೆಗಳು; ಪಾಸ್‍ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ, ರಾಜ್ಯ ಹಾಗೂ ಸಾರ್ವಜನಿಕ ವಲಯದ ನಿಗಮ ಮಂಡಳಿ, ಲಿಮಿಟೆಡ್ ಕಂಪನಿಗಳಿಂದ ಸಿಬ್ಬಂದಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕ, ಪಾನ್ ಕಾರ್ಡ್, ಉದ್ಯೋಗ ಖಾತರಿ ಗುರುತಿನ ಚೀಟಿ, ಕಾರ್ಮಿಕ ಮಂತ್ರಾಲಯದಿಂದ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಅಧಿಕೃತ ಪೋಟೋ ವೋಟರ್ ಸ್ಲಿಪ್, ಭಾವಚಿತ್ರವಿರುವ ಪಡಿತರ ಚೀಟಿಗಳು (ರೇಷನ್‍ಕಾರ್ಡ್), ಭಾವಚಿತ್ರವಿರುವ ನೊಂದಾಯಿತ ಡೀಡ್‍ಗಳು/ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಮಾನ್ಯತೆ ಪಡೆದ ನೊಂದಾಯಿತ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ
ಗುರುತಿನಚೀಟಿ, ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ. ಕ್ಯಾಂಟೀನ್‍ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್, ಮಹಾನಗರಪಾಲಿಕೆ,ನಗರಸಭೆ, ಪುರಸಭೆ, ಗ್ರಾಮಪಂಚಾಯಿತಿ ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸಂಬಂಧ ಒಳಗೊಂಡ ಭಾವಚಿತ್ರವಿರುವ ತಾತ್ಕಾಲಿಕ/ಮೂಲ ಪಡಿತರಚೀಟಿ, ಆಧಾರ್ ಕಾರ್ಡ್ ಇವುಗಳಲ್ಲಿ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಷಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಚುನಾವಣಾ ತಹಶೀಲ್ದಾರ್ ಪ್ರತಿಭಾ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ