ಹುಳಿಯಾರು:
ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಹೋಗುವಂತೆ ತಯಾರು ಮಾಡುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರವನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ತರಬೇತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗವಾಗುವ ಅಂಶಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಮಾಡಿಸಲಾಗುತ್ತದೆ ಎಂದು ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ ಹೇಳಿದರು.
ಹುಳಿಯಾರಿನ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಸುಲಭವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉಪಯೋಗವಾಗುವ ಮೆಂಟಲ್ ಎಬಿಲಿಟಿ, ಸಾಮಾನ್ಯಜ್ಞಾನ, ಭೂಗೋಳ, ಸಾಮಾನ್ಯ ಕನ್ನಡ, ಸಾಮಾನ್ಯ ಹಿಂದಿ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ಇತ್ತೀಚಿನ ವಿದ್ಯಮಾನಗಳು ಸೇರಿದಂತೆ ಸುಮಾರು 23 ವಿವಿಧ ವಿಷಯಗಳನ್ನು ಗುರುತಿಸಿದ್ದು ಪ್ರತಿ ದಿನ ಒಂದು ವಿಷಯದಂತೆ ಅದಕ್ಕೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೋಧನೆ ಮಾಡಿಸಲಾಗುವುದು ಎಂದರು.
ಕಾಲೇಜಿನಿಂದ ಕನಿಷ್ಠ ಮೂವತ್ತರಿಂದ ಐವತ್ತು ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಕಳುಹಿಸಬೇಕೆಂಬುದು ನಮ್ಮ ಉದ್ದೇಶವಾಗಿದ್ದು ನಿತ್ಯ 120 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ಗ್ರಾಮೀಣ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದು ಕೊಳ್ಳುವಂತೆ ಕಿವಿಮಾತು ಹೇಳಿದರು.
ಗ್ರಂಥಪಾಲಕ ಹಾಗೂ ಪ್ಲೇಸ್ಮೆಂಟ್ ಸೆಲ್ ಸಂಯೋಜಕರಾದ ಡಾ.ಲೋಕೇಶ್ ನಾಯ್ಕ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸುತ್ತಾ ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪೊಲೀಸ್ ಪೇದೆ ಉದ್ಯೋಗಕ್ಕೆ ತರಬೇತಿ, ಎಫ್‍ಡಿಎ, ಎಸ್‍ಡಿಎ ಉದ್ಯೋಗಕ್ಕೆ ಉಪಯೋಗವಾಗುವ ತರಬೇತಿ, ಕೆಎಎಸ್ ಹಾಗೂ ಐಎಎಸ್ ಮತ್ತಿತರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ತರಬೇತಿ ನೀಡಲಾಗುವುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಚಿಕ್ಕನಾಯಕನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರಸಾದ್ ಪ್ರಪಂಚದ ಎಲ್ಲಾ ದೇಶಗಳ ಬಗ್ಗೆ ವಿವರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಪ್ರೊ.ಶಿವಯ್ಯ, ಪ್ರೊ.ಫರ್ಹಾನಾಜ್, ಪ್ರೊ.ಮೋಹನ್ ಕುಮಾರ್, ಡಾ.ಸುಷ್ಮಾ ಬಿರಾದಾರ್ ಇದ್ದರು