ತಿಪಟೂರು
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಯೋಜನಾಬದ್ಧ ತಯಾರಿ ಅಗತ್ಯ ಎಂದು ಬೆಂಗಳೂರಿನ ಕೇಂದ್ರ ಕಾರ್ಮಿಕ ಇಲಾಖೆಯ ಆಯುಕ್ತರಾದ ವಿ.ಸಂದೀಪ್ ಅವರು ತಿಳಿಸಿದರು.
ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಕೋಶದ ವತಿಯಿಂದ ಸ್ನಾತಕ ಮತ್ತು ಸ್ನಾತಕೋತರ ವಿದ್ಯಾರ್ಥಿಗಳಿಗೆ ಒಂದು ದಿನ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯ ಕಾರ್ಯಕ್ರಮದಲ್ಲಿ ಶನಿವಾರ ವಿಶೇಷ ಉಪನ್ಯಾಸ ನೀಡುವ ಮೂಲಕ ಮಾತನಾಡಿದರು.
ಆಯಾ ಪರೀಕ್ಷೆಗಳ ಪಠ್ಯಕ್ರಮ, ಅಧ್ಯಯನ ಸಾಮಗ್ರಿ ಹಾಗೂ ಹಿಂದಿನ ವರ್ಷಗಳ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ವಿಶೇಷ ಮಹತ್ವವಿದ್ದು, ವಿದ್ಯಾರ್ಥಿಗಳು ಇದನ್ನು ಗಮನಿಸಬೇಕು ಎಂದು ಅವರು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಇಲಾಖೆಗಳು, ಯುಪಿಎಸ್‍ಸಿ, ಕೆಪಿಎಸ್‍ಸಿ, ಬ್ಯಾಂಕ್, ರೈಲ್ವೆ ಸೇರಿದಂತೆ ಇತರೆ ಸಂಸ್ಥೆಗಳ ವತಿಯಿಂದ ಪ್ರತಿ ವರ್ಷ ಹಲವಾರು ಹುದ್ಧೆಗಳಿಗೆ ಪರೀಕ್ಷೆಗಳು ನಡೆಯುತ್ತವೆ. ಈ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳುವು ಮೂಲಕ ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಿ ಎಂದು ಸಂದೀಪ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ರೈಲ್ವೆ ಇಲಾಖೆಯ ಸಿಬ್ಬಂದಿ ವಿಭಾಗದ ಜಂಟಿ ನಿರ್ದೇಶಕರಾದ ಎಚ್.ರಾಘವೇಂದ್ರ ಅವರು ಮಾತನಾಡಿ ಅವಿರತ ಶ್ರಮ ಮತ್ತು ಛಲದಿಂದ ಸಾಮಾನ್ಯ ವಿದ್ಯಾರ್ಥಿಯೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಗುರಿ ಸಾಧಿಸಲು ಸಾಧ್ಯ ಎಂದರು.
ಸ್ಪರ್ಧಾತ್ಮಾಕ ಪರೀಕ್ಷೆಗಳಿಗೆ ಪೂರ್ವ ತಯಾರಿ, ಓದುವ ಕ್ರಮ ಇದ್ದರೆ ಸಾಲದು ಆತ್ಮವಿಶ್ವಾಸ ಅತ್ಯಗತ್ಯ. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ರಾಘವೇಂದ್ರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಎಚ್.ಬಿ.ಕುಮಾರಸ್ವಾಮಿ ಸಮಾರಂಭವನ್ನು ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಸೌಮ್ಯ ಮತ್ತು ಜ್ಯೋತಿಕಿರಣ್ ಅವರು ಉಪಸ್ಥಿತರಿದ್ದರು. ಉದ್ಯೋಗ ಕೋಶ ಸಂಚಾಲಕ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ನಾಗರಾಜು.ಕೆ ಸ್ವಾಗತಿಸಿದರು. ಕಾಲೇಜಿನ ಐಕ್ಯೂಎಸ್‍ಸಿಯ ಸಂಚಾಲಕರಾದ ನಾಗಭೂಷಣ್ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರಾದ ರಂಗನಾಥ.ಜೆ. ನಿರೂಪಿಸಿದರು. ಪ್ರಾಧ್ಯಾಪಕರಾದ ಅನುಪ್ರಸಾದ್.ಕೆ ವಂದಿಸಿದರು.