ದಾವಣಗೆರೆ:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಸ್ಮರಣಶಕ್ತಿ ಅತ್ಯವಶ್ಯವಾಗಿದೆ ಎಂದು ಬಾಪೂಜಿ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಹರೀಶ್ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಯುವ ರೆಡ್‍ಕ್ರಾಸ್ ಘಟಕ ಮತ್ತು ವಿದ್ಯಾರ್ಥಿ ಆಪ್ತ ಸಲಹಾ ಕೋಶ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಲವು ವಿಷಯಗಳ ಮೇಲೆ ಏಕಕಾಲದಲ್ಲಿ ವಿದ್ಯಾರ್ಥಿಗಳು ಗಮನಹರಿಸುವುದರಿಂದ ಮಾನಿಸಕ ಚಂಚಲತೆ ಉಂಟಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಏಕಕಾಲದಲ್ಲಿ ಹಲವಾರು ವಿಷಯಗಳತ್ತ ಗಮನಹರಿಸದೇ ಒಂದುಬಾರಿಗೆ ಒಂದೇ ಕಾರ್ಯ, ವಿಷಯದತ್ತ ಗಮನಹರಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳು ಹಗಲುಗನಸು ಕಾಣುವಿಕೆ, ಬೇಡವಾದ ವಿಚಾರಗಳ ಬಗ್ಗೆ ಆಲೋಚನೆ, ಬಾಹ್ಯವಾಗಿ ಕಾಣುವ, ಕೇಳಿಸುವ ಪ್ರಚೋದನಾ ಸಂಗತಿಗಳ ಮೇಲೆ ಗಮನ ಹರಿಸುವುದರಿಂದ ಮಾನಸಿಕ ದ್ವಂದ್ವ ಹಾಗೂ ದೈಹಿಕ ಆಯಾಸಗೊಳ್ಳುವಿಕೆ ಉಂಟಾಗಿ ಮನಸ್ಸಿನ ಏಕಾಗ್ರತೆ ಮೇಲೆ ಕ್ರಮೇಣ ಹತೋಟಿ ತಪ್ಪುತ್ತದೆ. ಆದ್ದರಿಂದ ಏಕಾಗ್ರತೆ ಹೊಂದುವ ಮೂಲಕ ಸಾಧನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಪದವಿ ಹಂತದ ಶಿಕ್ಷಣ ನಮ್ಮ ಜೀವನದ ಅತೀಮುಖ್ಯ ಘಟ್ಟ. ಇದುವೇ ನಿಮ್ಮ ಜೀವನದ ಗುರಿಯನ್ನು ಸ್ಪಷ್ಟಪಡಿಸುವ ಗಳಿಗೆಯಾದ್ದರಿಂದ ಮನಸ್ಸಿನ ಹತೋಟಿ ಕಾಪಾಡಿಕೊಂಡು ಕೇವಲ ವಿಧ್ಯಾಭ್ಯಾಸದತ್ತ ಆಸಕ್ತಿ ವಹಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಂಕರ್ ಆರ್. ಶೀಲಿ ಮಾತನಾಡಿ, ಸಮಾಜ ಬದಲಾದಂತೆ ನಾವುಗಳು ವಿಕಸನವಾಗುತ್ತಿರಬೇಕು. ಪ್ರತಿಯೊಬ್ಬರಿಗೂ ಬಾಹ್ಯ ವ್ಯಕ್ತಿತ್ವ ಹಾಗೂ ಆಂತರಿಕವೆಂಬ ಎರಡು ಬಗೆಯ ವ್ಯಕ್ತಿತ್ವವಿರುತ್ತದೆ. ನಮ್ಮ ದೇಹ, ಮಾತನಾಡುವಿಕೆ, ಕಾರ್ಯಗಳು ಬಾಹ್ಯವಾಗಿದ್ದರೂ ಇವು ನಮ್ಮ ಆಂತರಿಕ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುವ, ವಿಕಸನಗೊಳಿಸುವ ಕಾರ್ಯ ಮಾಡುತ್ತವೆ ಎಂದರು.
ಯಾರು ಆಂತರಿಕವಾಗಿ ಉತ್ತಮ ಮನೋಭಾವನೆ, ಆಲೋಚನೆ ಹೊಂದಿರುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಂತರಿಕ ಹಾಗೂ ಬಾಹ್ಯ ವ್ಯಕ್ತಿತ್ ವಿಕಸನಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಐಕ್ಯೂಎಸಿ ಸಂಚಾಲಕ ಪ್ರೊ.ವೀರೇಶ್ ಮಾತನಾಡಿ, ಪ್ರೌಢಾವಸ್ಥೆಯಲ್ಲಿ ಮನೋವಿಕಸನಗೊಳ್ಳುವ ಪ್ರಕ್ರಿಯೆ ನಡೆಯಲಿದೆ. ಆದರೆ, ಇಂದಿನ ವಿದ್ಯಾರ್ಥಿ ಸಮುದಾಯದಲ್ಲಿ ಏಕಾಗ್ರತೆ, ಜವಾಬ್ದಾರಿ, ಸಮಯಪ್ರಜ್ಞೆ ಕೊರತೆ ಎದ್ದುಕಾಣುತ್ತಿದೆ. ವ್ಯರ್ಥ ಸಮಯ ಪೋಲು, ಜವಾಬ್ದಾರಿಯಿಂದ ಹಿಂದೆ ಸರಿಯುವ, ಯಾವುದರಲ್ಲೂ ಆಸಕ್ತಿವಹಿಸದಿರುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವುದು ಸರಿಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್. ಭಜಂತ್ರಿ, ಐಕ್ಯೂಎಸಿ ಸಂಚಾಲಕ ಡಾ. ದಿನೇಶ್ ಜಿ.ಎಂ., ವೀರೇಶ್, ಪ್ರಕಾಶ್, ಧನಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ರೆಡ್‍ಕ್ರಾಸ್ ಘಟಕ-2ರ ಸಂಚಾಲಕಿ ಪ್ರೊ.ಎಸ್.ಎಂ. ಲತಾ ಪ್ರಾಸ್ಥಾವಿಕ ಮಾತನಾಡಿದರು. ರೆಡ್‍ಕ್ರಾಸ್ ಘಟಕ-1ರ ಸಂಚಾಲಕ ಡಾ.ಸಿ.ಎಸ್.ಸೋಮಶೇಖರ್ ಸ್ವಾಗತಿಸಿದರು. ಚನ್ನನಗೌಡ, ಕಿರಣ್‍ಕುಮಾರ್ ಪ್ರಾರ್ಥಿಸಿದರು. ವಿದ್ಯಾರ್ಥಿ ಆಪ್ತ ಸಲಹಾಕೋಶದ ಸಂಚಾಲಕ ಪ್ರೊ. ರಂಗಸ್ವಾಮಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಎಸ್.ಎಂ. ಗೌರಮ್ಮ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ