ಸ್ಮಾರ್ಟ್‍ಸಿಟಿ ಎಂ.ಡಿ.ಗೆ ತರಾಟೆ ತಗೊಂಡ ಸಂಸದ-ಶಾಸಕ

ದಾವಣಗೆರೆ:

           ಈ ವರೆಗೂ ಕೇವಲ 2 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‍ಸಿಟಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಸ್ಮಾರ್ಟ್‍ಸಿಟಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್.ಅರ್ಶದ್ ಶರೀಫ್ ಅವರನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತೀವ್ರ ತರಾಟೆಗೆ ತಗೆದುಕೊಂಡಿರುವ ಘಟನೆ ಸೋಮವಾರ ನಡೆಯಿತು.

          ನಗರದ ಶಾಮನೂರು ರಸ್ತೆಯ ಸ್ಮಾರ್ಟ್ ಸಿಟಿ ನಿಗಮದ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದ ಸ್ಮಾರ್ಟ್ ಸಿಟಿ ಯೋಜನೆ ಸಲಹಾ ಸಮಿತಿ ಸಭೆಯಲ್ಲಿ ಸಂಸದರು ಹಾಗೂ ಶಾಸಕರು ಸ್ಮಾರ್ಟ್ ಸಿಟಿ ಯೋಜನೆಯಡಿ 394 ಕೋಟಿ ರೂ. ಅನುದಾನ ಬಂದಿದ್ದರೂ ವೇತನ, ಡಿಪಿಆರ್, ಭತ್ಯೆಗೆಂದೇ 17 ಕೋಟಿ ಖರ್ಚು ಮಾಡಲಾಗಿದೆ. ಇದರಲ್ಲಿ ಕೇವಲ 2 ಕೋಟಿ ವೆಚ್ಚದಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ದಾವಣಗೆರೆಯನ್ನು ಸ್ಮಾರ್ಟ್ ಮಾಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 394 ಕೋಟಿ ಅನುದಾನ ಬಿಡುಗಡೆ ಮಾಡಿವೆ. ಇಡೀ ಊರಿನಲ್ಲಿ ಹುಡುಕಿದರೂ ಕನಿಷ್ಠ 2 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಯನ್ನೂ ಕೈಗೊಂಡಿಲ್ಲ. ನಿಮ್ಮ ಸಂಬಳ, ಭತ್ಯೆಗೆಂದೇ ಯೋಜನೆ ಹಣ ಬಳಸಲು ಒತ್ತು ನೀಡುತ್ತಿರುವ ನೀವು, ಅಭಿವೃದ್ಧಿ ಕಾರ್ಯಕ್ಕೆ ಯಾಕಿಷ್ಟು ಅಸಡ್ಡೆ ತೋರುತ್ತಿದ್ದೀರಿ ಎಂದು ಪ್ರಶ್ನಿಸಿದರು.

          ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕ ಷರೀಫ್, ಸ್ಮಾರ್ಟ್‍ಸಿಟಿ ಯೋಜನೆಯಡಿ ಭೌತಿಕ ಕಾಮಗಾರಿಯೆಂದರೆ ಈವರೆಗೆ 1 ಅಥವಾ 2 ಕೋಟಿ ಮಾತ್ರ ಖರ್ಚಾಗಿದೆ. ಬೇರೆ ರಾಜ್ಯಗಳಲ್ಲಿ ವಿಶೇಷ ಉದ್ದೇಶ ವಾಹಕ(ಎಸ್‍ಪಿವಿ-ಸ್ಪೆಷಲ್ ಪರ್ಪಸ್ ವೆಹಿಕಲ್) ಮಾಡಿದ್ದಾರೆ. ಅದರ ಮೂಲಕವೇ ಕಾಮಗಾರಿಗೆ ಅನುಮೋದನೆ ನೀಡಲು, ಕೆಲಸ ಕೈಗೊಳ್ಳಲು ಅಧಿಕಾರ ನೀಡಿವೆ. ಆದರೆ, ಇಲ್ಲಿನ ರಾಜ್ಯ ಸರ್ಕಾರವು ಮಾತ್ರ 10 ಕೋಟಿ ರು.ವರೆಗೆ ಮಾತ್ರ ನಮಗೆ ಬಳಸಲು ಅವಕಾಶ ನೀಡಿದೆ. ಆದ್ದರಿಂದ ಸ್ಮಾರ್ಟ್ ಸಿಟಿಯಡಿ 10 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಇಂತಹದ್ದೊಂದು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ನಾವು ಇಲ್ಲಿಂದ ವಿವಿಧ ಕಾಮಗಾರಿ, ಯೋಜನೆಗಳ ಅನುಮೋದನೆಗೆ ಕಡತ ಕಳಿಸಿದರೆ ಇಲಾಖೆಯಿಂದ 2-3 ತಿಂಗಳಾದರೂ ಕಡತಕ್ಕೆ ಅನುಮೋದನೆ ಸಿಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

          ಕೇಂದ್ರ ಸರ್ಕಾರವು ಎಸ್‍ಪಿವಿಗೆ ಅನುಮೋದನೆ ನೀಡುವ ಅಧಿಕಾರ ನೀಡಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ತಿದ್ದುಪಡಿ ಮಾಡಿ, ನಗರಾಡಳಿತ ಇಲಾಖೆಗೆ ಅನುಮೋದನೆ ಪಡೆಯುವಂತೆ ಮಾಡಿದೆ. ಇದರಿಂದಾಗಿಯೂ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳುವುದಕ್ಕೆ ವಿಳಂಬವಾಗುತ್ತಿದೆಯೇ ಹೊರತು, ತಮ್ಮಿಂದ ಯಾವುದೇ ರೀತಿ ವಿಳಂಬವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ, ಎಸ್‍ವಿಪಿಗೆ ಅಧಿಕಾರ ನೀಡುವ ಕುರಿತಂತೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಜೊತೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಎಸ್‍ಪಿವಿಗೆ ಅದಿಕಾರ ಇಲ್ಲದಿದ್ದರೆ ಕೆಲಸ ಮಾಡುವುದು ಹೇಗೆಂದು ಪ್ರಶ್ನಿಸೋಣ. ಶಾಸಕರೂ ಈ ಬಗ್ಗೆ ಸಭೆ ನಡೆಸುವ ಬಗ್ಗೆ ತಮ್ಮ ಪಕ್ಷದ ಸಚಿವರೊಂದಿಗೆ ಚರ್ಚಿಸಲಿ ಎಂದರು. ಇದಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಬೆಂಗಳೂರಿನಲ್ಲಿ ಈ ಬಗ್ಗೆ ಸಭೆ ನಡೆಸಲು ಸಚಿವ ಯು.ಟಿ.ಖಾದರ್‍ಗೆ ಒತ್ತಾಯಿಸಲಾಗುವುದು ಎಂದರು.

         ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸ್ಮಾರ್ಟ್‍ಸಿಟಿ ಯೋಜನೆಯ ಗುತ್ತಿಗೆದಾರ ಮೂರು ತಿಂಗಳು ಆಗುವ ಕೆಲಸವನ್ನು ಆರು ತಿಂಗಳು ಮಾಡುತ್ತಿದ್ದಾರೆ. ಸ್ಮಾರ್ಟ್‍ಸಿಟಿ 2015ರಲ್ಲಿ ಘೋಷಣೆಯಾಗಿದ್ದು, ಈಗ ಮೂರು ವರ್ಷ ಕಳೆದಿದೆ. ಕೇಂದ್ರದಿಂದ 200, ರಾಜ್ಯ ಸರಕಾರದಿಂದ 194 ಕೋಟಿ ಸೇರಿ ಒಟ್ಟು 394 ಕೋಟಿ ಅನುದಾನ ಬಂದಿದೆ. ಈ ಹಣಕ್ಕೆ 30 ಕೋಟಿ ಬಡ್ಡಿ ಬಂದಿದೆ. ಆದರೆ, ಕೇವಲ 17 ಕೋಟಿ ಮಾತ್ರ ಖರ್ಚಾಗಿದೆ. 44 ಪ್ರಾಜೆಕ್ಟ್‍ನಲ್ಲಿ ಕೇವಲ 14 ಪ್ರಾಜೆಕ್ಟ್‍ಗಳು ನಡೆಯುತ್ತಿದೆ. ಚೌಕಿಪೇಟೆ, ಮಂಡಿಪೇಟೆ, ಎಂ.ಜಿ. ರಸ್ತೆ ಹೀಗೆ ಎಲ್ಲಾ ರಸ್ತೆಗಳನ್ನು ಒಮ್ಮೇಲೆ ಕಿತ್ತ ಪರಿಣಾಮ ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆಯಾಗಿದೆ. ಕಾಮಗಾರಿಗೆ ಚಾಲನೆ ನೀಡಿ ಸುಮಾರು ತಿಂಗಳು ಕಳೆದಿದ್ದು, ಯಾವುದೇ ಕೆಲಸ ಆಗಿಲ್ಲ. ಅಲ್ಲಿಗೆ ಹೋದರೆ ವ್ಯಾಪಾರಸ್ಥರು ನಮ್ಮನ್ನ ಪ್ರಶ್ನಿಸುತ್ತಾರೆ. ಆದ್ದರಿಂದ ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರನಿಗೆ ಪೆನಾಲ್ಟಿ ಹಾಕಿ ಎಂದು ತಾಕೀತು ಮಾಡಿದರು.

          ಇನ್ನೂ ತಾಂತ್ರಿಕ ಸಮಸ್ಯೆಗಳೇನೇ ಇದ್ದರೂ ನಮ್ಮ ಗಮನಕ್ಕೆ ತನ್ನಿ ಬಗೆಹರಿಸುತ್ತೇನೆ. ಗುತ್ತಿಗೆದಾರನಿಗೆ ಹೆಚ್ಚು ಕಾಲಾವಕಾಶ ನೀಡಬೇಡಿ, ಶಕ್ತಿ ಇರುವ ಗುತ್ತಿಗೆದಾರನಿಗೆ ಗುತ್ತಿಗೆ ನೀಡಿ ಎಂದು ಸೂಚಿಸಿದರು.ಸ್ಮಾರ್ಟ್ ಸಿಟಿ ಎಂ.ಡಿ ಶರೀಫ್ ಮಾತನಾಡಿ, ದುಗ್ಗಮ್ಮ ಜಾತ್ರೆ, ಮಳೆ ಬಂದ ಕಾರಣ ಆ ಭಾಗದಲ್ಲಿ ಕಾಮಗಾರಿ ವಿಳಂಬವಾಯಿತು. ಇನ್ನು ಗುತ್ತಿಗೆದಾರನಿಗೆ ಮಾಹಿತಿ ಸರಿಯಾಗಿ ಇಲ್ಲದ ಕಾರಣ ಒಮ್ಮೇಲೆ ಎಲ್ಲ ರಸ್ತೆಗಳನ್ನು ಅಗೆದರು. ಮಂಡಿಪೇಟೆಯಲ್ಲಿ ಛೇಂಬರ್ ಆಫ್ ಕಾಮರ್ಸ್ ತನಕ ಬೆಡ್ಡಿಂಗ್ ಹಾಕಲಾಗಿದೆ. ಚೌಕಿಪೇಟೆಯಲ್ಲಿ ಇನ್ನೂ 10 ದಿನದಲ್ಲಿ ಮುಗಿಯಲಿದ್ದು, ಇನ್ನೂ ಮೂರು ತಿಂಗಳಲ್ಲಿ ಈಗ ಕೈಗೊಂಡಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

            ಸಭೆಯಲ್ಲಿ ಮೇಯರ್ ಶೋಭ ಪಲ್ಲಾಗಟ್ಟೆ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜೆ.ಮುರುಘರಾಜೇಂದ್ರ ಚಿಗಟೇರಿ, ಕೆ.ದಿನೇಶ್ ಶೆಟ್ಟಿ, ಡಾ.ಹೆಚ್.ಈರಮ್ಮ, ಅಥಣಿ ವೀರಣ್ಣ, ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಡಾ.ಶಾಂತಾಭಟ್, ಮಂಜುಳ ಬಸವಲಿಂಗಪ್ಪ, ವಿ.ಎಸ್.ರಾಜು, ನಳಿನಿ ಶೇಖರ್, ಪ್ರಭಾವತಿ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap