ಸ್ಮಾರ್ಟ್‍ಸಿಟಿ ಕಾಮಗಾರಿ ವಿಳಂಬಕ್ಕೆ ಖಂಡನೆ : ಬೀದಿಗಿಳಿದ ಸ್ಥಳೀಯರು, ವರ್ತಕರು

  ದಾವಣಗೆರೆ:

     ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬದಿಂದಾಗಿ ನಾಗರೀಕರಿಗೆ ಹಾಗೂ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿರುವುದನ್ನು ಖಂಡಿಸಿ ಇಲ್ಲಿನ ಮಂಡಿಪೇಟೆ ನಿವಾಸಿಗಳು ಮತ್ತು ವ್ಯಾಪಾರಿಗಳ ಬಳಗದ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

      ನಗರದ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯರು ಹಾಗೂ ವಾಪ್ಯಾರಸ್ಥರು ಕಾಮಗರಿ ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ದಾವಣಗೆರೆ ಮಹಾನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ 3 ವರ್ಷವೇ ಕಳೆದಿವೆ. ಈ ಯೋಜನೆಯಡಿ ತಡವಾಗಿ ಕಾಮಗಾರಿ ಆರಂಭವಾಗಿದ್ದರೂ, ರಸ್ತೆ ಅಭಿವೃದ್ಧಿ ಕಾಮಗಾರಿಯು ವಿಳಂಬವಾಗಿ ನಡೆಯುತ್ತಿರುವುದರಿಂದ ಸಾರ್ವಜನಿರಕು ಹಾಗೂ ಈ ಭಾಗದಲ್ಲಿರುವ ವರ್ತಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

      ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿ ಗೊಳಿಸಲು ಎಂ.ಜಿ. ರಸ್ತೆಯಲ್ಲಿ 3 ತಿಂಗಳ ಹಿಂದೆಯೇ ಜೆಸಿಬಿಯಿಂದ ರಸ್ತೆಯನ್ನು ಸಂಪೂರ್ಣವಾಗಿ ಅಗೆಯಲಾಗಿದೆ. ಆದರೆ, ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ಪ್ರಾರಂಭವಾಗಿ 3 ತಿಂಗಳಾದರೂ ಇನ್ನೂ ಶೇ.30ರಷ್ಟು ಸಹ ಪ್ರಗತಿ ಕಂಡಿಲ್ಲ. ಹೀಗಾಗಿ ಮಳೆಗಾಲದಲ್ಲಿ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಳ್ಳುವುದರಿಂದ ರಸ್ತೆ, ಗುಂಡಿ ಯಾವುದೂ ಕಾಣದೇ ಅನೇಕ ದ್ವಿಚಕ್ರ ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಅಲ್ಲದೆ, ವ್ಯಾಪಾರಸ್ಥರು ವ್ಯಾಪಾರ ಇಲ್ಲದೇ ನಷ್ಟ ಅನುಭವಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹೀಗಾಗಿ ಕೆಲಸಗಾರರಿಗೆ ವೇತನ, ಕುಟುಂಬ ನಿರ್ವಹಣೆ ಮಾಡುವುದೇ ದುಸ್ತರವಾಗಿದೆ. ಆದರೆ, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕಂಡು ಕಾಣದಂತೆ ಜಾಣ ಕುರು ಪ್ರದರ್ಶಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

      ಇಲ್ಲಿ ಕಾಮಗಾರಿ ನಡೆಸಲು ಪ್ರತಿನಿತ್ಯ ಸುಮಾರು 200 ಜನರು ಕಾರ್ಮಿಕರ ಅವಶ್ಯಕತೆ ಇದೆ. ಆದರೆ, ಇಲ್ಲಿಯ ರಸ್ತೆ ಕಾಮಗಾರಿಯಲ್ಲಿ ಕೇವಲ 25 ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಇಷ್ಟು ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದನ್ನು ನೋಡಿದರೆ ಇನ್ನೊಂದು ವರ್ಷವಾದರೂ ಕಾಮಗಾರಿ ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ನಿಯಮಾನುಸಾರ ಸಾರ್ವಜನಿಕರ ತಿಳುವಳಿಕೆಗಾಗಿ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಮಾಹಿತಿಯುಳ್ಳ ಫಲಕ ಅಳವಡಿಸಿಲ್ಲ.

      ಕಾಮಗಾರಿ ಆರಂಭಿಸಿದ ದಿನ, ಮುಗಿಸುವ ಅವಧಿ, ಗುತ್ತಿಗೆದಾರರ ವಿವರ, ಕಾಮಗಾರಿ ವೆಚ್ಚ ಹೀಗೆ ಯಾವೊಂದರ ಮಾಹಿತಿಯೂ ನಮಗೆ ಸಿಗುತ್ತಿಲ್ಲ. ನಗರದಲ್ಲಿ ಮೂರು ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮೂರೂ ರಸ್ತೆಗಳ ಕಾಮಗಾರಿ ಪ್ರಗತಿ ಕಾಣುತ್ತಿಲ್ಲ. ಆದ್ದರಿಂದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿಯಿಂದಾಗಿ ನಾಗರೀಕರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಬೇಕು. ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸಬೇಕು. ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಜನರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಸ್ಮಾರ್ಟ್ ಸಿಟಿ ಕಾಮಗಾರಿಗೆ ಸಂಬಂಧಿಸಿದ ಕಾಮಗಾರಿ ವಿವರಗಳನ್ನು ನಾಮಫಲಕದ ಮೂಲಕ ನಾಗರೀಕರಿಗೆ ಮಾಹಿತಿ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನಾನಿರತರು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ವ್ಯಾಪಾರಿಗಳ ಬಳಗದ ವಿಜಯ ಕುಮಾರ್, ಸತ್ಯನಾರಾಯಣ ಶೆಟ್ರು, ಬಿ.ಎ.ರಾಜು, ಜಯಣ್ಣ, ರಾಜು ಮೌರ್ಯ, ಬಿ.ಸುರೇಶ್, ಆತ್ಮರಾಮ್, ಮೋಹನ್ ಲಾಲ್, ನಾಗಣ್ಣ, ನಾಗರಾಜ, ಎಂ.ಎನ್.ಕಾಮತ್, ಕೆ.ಎನ್.ಅನಂತಶೆಟ್ರು, ರಾಜಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link