ತುಮಕೂರು : –ರಾಕೇಶ್.ವಿ., ತುಮಕೂರು
ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹಲವು ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ನಿರ್ಧಾರ ಮಾಡಿಕೊಂಡು ಈಗಾಗಲೇ ಹಲವು ಕಾಮಗಾರಿಗಳನ್ನು ಆರಂಭಿಸಿದ್ದಾರೆ. ಅಮಾನಿಕೆರೆಯ ಅಭಿವೃದ್ಧಿ, ಜೂನಿಯರ್ ಕಾಲೇಜು ಮೈದಾನ ಹಾಗೂ ನಗರದಲ್ಲಿನ ಹಲವು ಉದ್ಯಾನವನಗಳ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಇದರಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿರುವ ಹೆಲಿಪ್ಯಾಡ್ ಪ್ರದೇಶವೂ ಒಂದಾಗಿದೆ.
ತುಮಕೂರು ವಿಶ್ವ ವಿದ್ಯಾಲಯದಲ್ಲಿರುವ ಮೈದಾನವು ಮಣ್ಣಿನಿಂದ ಕೂಡಿತ್ತು. ಹೆಲಿಕಾಪ್ಟರ್ ಬಂದರೆ ಧೂಳು ಏಳುತ್ತಿತ್ತು. ಮಳೆ ಬಂದರೆ ನೀರು ನಿಂತು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳು ನಡೆಸಲು ಆಗುತ್ತಿರಲಿಲ್ಲ. ಅದನ್ನು ಗುರುತಿಸಿದ ಸ್ಮಾರ್ಟ್ ಸಿಟಿ ಅಧಿಕಾರಿಗಳು ವಿವಿಯ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.
61 ಲಕ್ಷ ವೆಚ್ಚದಲ್ಲಿ ಕಾಮಗಾರಿ…?
ಕಳೆದ ಫೆಬ್ರವರಿ ತಿಂಗಳ ಕೊನೆಯಲ್ಲಿ ಪ್ರಾರಂಭ ಮಾಡಲಾದ ಈ ಅಭಿವೃದ್ಧಿ ಕಾರ್ಯ ಏಳು ತಿಂಗಳು ನಡೆದಿದ್ದು, ಇನ್ನು ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. 61 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ವಾಕಿಂಗ್‍ಗಾಗಿ ಫುಟ್‍ಪಾತ್ ವ್ಯವಸ್ಥೆ ಮಾಡಲಾಗಿದೆ. ಸುತ್ತಲಿನ ಪ್ರತಿ ಮರದ ಸುತ್ತಲೂ ಕೂತುಕೊಳ್ಳಲು ಅನುಕೂಲವಾಗುವಂತೆ ಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಪುಟ್‍ಪಾತ್ ಪಕ್ಕದ ಜಾಗದಲ್ಲಿ ಕೂತುಕೊಳ್ಳಲು ಬೆಂಚ್ ಸೌಲಭ್ಯ ಮಾಡಲಾಗಿದೆ.
ಗಿಡಗಳನ್ನು ನೆಡುವ ಕಾರ್ಯ :
ಹೆಲಿಪ್ಯಾಡ್ ಪ್ರದೇಶದಲ್ಲಿ ಸುತ್ತಲೂ ಇರುವ ಮರಗಳನ್ನು ರಕ್ಷಣೆ ಮಾಡುವುದರ ಜೊತೆಗೆ ಇನ್ನಷ್ಟು ಗಿಡಳನ್ನು ನೆಟ್ಟು ಅದನ್ನು ಪೋಷಿಸುವ ಕೆಲಸ ಮಾಡಲಾಗುವುದು.
14 ಉದ್ಯಾನವನಗಳ ಅಭಿವೃದ್ಧಿಗೆ ತಯಾರಿ :
ಸ್ಮಾರ್ಟ್ ಸಿಟಿ ಯೋಜನೆಗಳಡಿ ನಗರದಲ್ಲಿರುವ ಉದ್ಯಾನವನಗಳಲ್ಲಿ 14 ಉದ್ಯಾನವನಗಳನ್ನು ಆಯ್ಕೆ ಮಾಡಿಕೊಂಡು ಥೀಮ್ಡ್ ಪಾರ್ಕ್ ಕಾನ್ಸೆಪ್ಟ್ ಮೂಲಕ ಆ ಉದ್ಯಾನವನ ಹೇಗಿದೆ. ಅದಕ್ಕೆ ಪೂರಕವಾಗಿ ಮಾಡಬೇಕಾದ ಕಾರ್ಯಗಳೇನು ಎಂಬುದರ ಬಗ್ಗೆ ನೀಲಿ ನಕ್ಷೆ ತಯಾರಿಸಿಕೊಂಡು ಅದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ಉದಾಹರಣೆಗೆ : ಒಂದು ಉದ್ಯಾನವನದಲ್ಲಿ ಹೆಚ್ಚಿನ ಮರಗಳು ಇದ್ದರೆ ಅಲ್ಲಿ ಕಾಡಿನ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಮರದ ಬಳಿ ಹೋದರೆ ಪಕ್ಷಿಗಳ ಚಿಲಿಪಿಲಿ ಕೇಳಿಸುವಂತೆ, ಪ್ರಾಣಿಗಳ ಚೀರಾಟದ ಸದ್ದು, ಹೀಗೆ ಕಾಡಿನ ವಾತಾವರಣ ಅಲ್ಲಿ ಸೃಷ್ಠಿ ಮಾಡಲಾಗುವುದು.
ಮಹಿಳಾ ಸಾಧಕಿಯರಿಗೆ ಅಂಕಿತ:
14 ಉದ್ಯಾನವನಗಳಲ್ಲಿ ಒಂದು ಉದ್ಯಾನವನವನ್ನು ಮಹಿಳಾ ಸಾಧಕಿಯರಿಗೆ ಅಂಕಿತ ಮಾಡಲಾಗುವುದು. ಈ ಉದ್ಯಾನವನದಲ್ಲಿ ಸಾಧನೆ ಮಾಡಿದ ಮಹಿಳೆಯರ ಭಾವಚಿತ್ರಗಳನ್ನು ಪ್ರದರ್ಶನಕ್ಕಿಡಲಾಗುವುದು. ಅಲ್ಲದೆ ಅವರ ಬಗೆಗಿನ ಮಾಹಿತಿಯನ್ನು ತಿಳಿಸಲಾಗುವುದು.
ವಾಲ್‍ಪೇಟಿಂಗ್ :
ತುಮಕೂರು ವಿವಿಯ ಹೆಲಿಪ್ಯಾಡ್‍ನ ಹಿಂಭಾಗದಲ್ಲಿ ತುಮಕೂರ ಸ್ಮಾರ್ಟ್ ಸಿಟಿಯನ್ನು ತೋರಿಸುವ ಪೇಟಿಂಗ್ ಅನ್ನು ಮಾಡಿಸಲಾಗುತ್ತಿದೆ. ತುಮಕೂರಿನ ಸಾಂಸ್ಕತಿಯನ್ನು ಬಿಂಬಿಸುವ ಕಲೆಯನ್ನು ಚಿತ್ರದ ಮೂಲಕ ಗೋಡೆಗಳ ಮೇಲೆ ಪ್ರದರ್ಶಿಸಲಾಗುತ್ತದೆ.
ವಾಲ್ ಪೇಂಟಿಂಗ್ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳು ತುಮಕೂರಿನ ಕಲಾ ಕಾಲೇಜು ವಿದ್ಯಾರ್ಥಿಗಳು ಅದರಲ್ಲಿ ಪ್ರಮುಖವಾಗಿ ಚಿತ್ರಕಲಾ ವಿಭಾಗದ ವಿದ್ಯಾರ್ಥಿಗಳು ವಾಲ್‍ಪೇಂಟಿಂಗ್ ಮಾಡಲು ಮುಂದೆ ಬಂದಿದ್ದು, ಸ್ಮಾರ್ಟ್ ಸಿಟಿ ಕಲ್ಪನೆಯನ್ನು ತಮ್ಮ ಕುಂಚದ ಮೂಲಕ ತೋರಿಸಿದ್ದಾರೆ. ಚಿತ್ರಕಲಾ ವಿಭಾಗದ ವಿದ್ಯಾರ್ಥಿಗಳಾದ ರವಿ, ರಾಖಿ, ಕಾರ್ತಿಕ್, ಶ್ರೀನಿವಾಸ್ ಎಂಬುವವರು ಈ ಕಾರ್ಯ ಮಾಡುವುದರಲ್ಲಿ ಖುಷಿ ಪಡುತ್ತಿದ್ದಾರೆ.
ಸಣ್ಣ ಪುಟ್ಟ ಸಭೆಗಳಿಗೆ ಕುಟಿರ ನಿರ್ಮಾಣ:
ವಾಕಿಂಗ್ ಎಂದು ಬರುವವರು ಹಾಗೂ ವೃದ್ಧರು ಒಂದೆಡೆ ಸೇರಿಕೊಂಡು ಸಭೆಗಳನ್ನು ಮಾಡಿಕೊಳ್ಳಲು ಅಥವಾ ಮಾತುಕತೆ ಮಾಡುವುದಕ್ಕೆ ಚೆಸ್‍ಬೋರ್ಡ್ ಎಂಬ ಕುಟಿರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲಿ ಮಕ್ಕಳು ಸೇರಿಕೊಂಡು ತಾವೇ ರಾಜ, ಮಂತ್ರಿ, ಆನೆ, ಒಂಟೆ , ಸೈನಿಕರಾಗಿ ಚೆಸ್ ಆಟವನ್ನು ಆಡಬಹುದು.
ಲೈಟಿಂಗ್ ವ್ಯವಸ್ಥೆ:
ಉದ್ಯಾನವನದ ರೀತಿಯಲ್ಲಿ ಅಭಿವೃದ್ಧಿ ಮಾಡಲಾದ ಈ ಸ್ಥಳದಲ್ಲಿ ಸಂಜೆ ವೇಳೆ ರಂಗು ರಂಗಿನ ವಿದ್ಯುತ್ ಬಲ್ಬ್‍ಗಳು ಮನರಂಜನೆ ನೀಡುತ್ತವೆ. ಹೆಲಿಪ್ಯಾಡ್‍ನ ಒಂದು ಬದಿಯಲ್ಲಿ ಸುಮಾರು 40 ಬಲ್ಬ್‍ಗಳನ್ನು ಇಡಲಾಗಿದ್ದು, ಇವುಗಳು ವಿವಿಧ ಬಣ್ಣಗಳ ಬೆಳಕನ್ನು ಹೊರಸೂಸುತ್ತವೆ. ಸಂಜೆ ವೇಳೆ ಇದು ನೋಡುಗರಿಗೆ ಮನಸ್ಸಿಗೆ ಸಂತಸ ನೀಡುತ್ತದೆ.
ಕಳೆದ ಫೆಬ್ರವರಿ ಕೊನೆಯ ವಾರದಿಂದ ಆರಂಭವಾದ ಕೆಲಸ ಸೆಪ್ಟೆಂಬರ್ ಅಂತ್ಯಕ್ಕೆ ಮುಗಿಯಲಿದೆ. ಈ ಯೋಜನೆಯಲ್ಲಿ ಸಾರ್ವಜನಿಕರನ್ನು ಬಳಸಿಕೊಂಡು ಅವರಿಗೆ ಏನನ್ನು ನೀಡಬೇಕು ಎಂಬುದನ್ನು ತಿಳಿದುಕೊಂಡು ಅವುಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹ ಸಿಗುತ್ತಿದೆ. ಇದರಿಂದ ಮೊದಲಿಗೆ ನಗರದ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ತೀರ್ಮಾನ ಮಾಡಿದ್ದೇವೆ. ವಿವಿಯಲ್ಲಿನ ಕಾರ್ಯ ಭಾಗಶಃ ಮುಗಿದಿದ್ದು, ಇನ್ನೂ ಒಂದೇ ವಾರದೊಳಗೆ ಮುಗಿಯಲಿದೆ.
-ರಶ್ಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಚಿತ್ರಕಲಾ ವಿಭಾಗದಲ್ಲಿ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಪಾಠ ಹೇಳುತ್ತೇವೆ. ಅಲ್ಲಿ ಪ್ರಾಯೋಗಿಕ ಕಾರ್ಯಗಳನ್ನು ಮಾಡಿಸುತ್ತೇವೆ. ಆದರೆ ಪದವಿ ಮುಗಿಸಿಕೊಂಡು ಹೊರ ಬಂದ ನಂತರ ಜನರ ಮಧ್ಯೆ ಚಿತ್ರಕಲೆ ಮಾಡಲು ವಿದ್ಯಾರ್ಥಿಗಳು ಹೆದರುತ್ತಾರೆ. ಅದನ್ನು ಹೋಗಲಾಡಿಸಲು ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಜನರ ನಡುವೆ ಚಿತ್ರಕಲೆ ಮಾಡುವಂತೆ ಮಾಡುತ್ತೇವೆ. ಇದೀಗ ಸ್ಮಾರ್ಟ್ ಸಿಟಿ ಕಡೆಯಿಂದ ಚಿತ್ರಕಲೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆಯಾಗಿದೆ.
-ಅರ್ಜುನ್.ಎಸ್. ಚಿತ್ರಕಲಾ ವಿಭಾಗ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ