ಸ್ವಂತ ಗ್ಯಾರೇಜ್ ಗೆ ಹಣ ಹೊಂದಿಸಲು ಕಳವು ಮಾಡಿದ ಇಬ್ಬರ ಬಂಧನ..!

ಬೆಂಗಳೂರು

  ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಾಲೀಕರ ಜೊತೆಗಿನ ಜಗಳದಿಂದ ಸ್ವಂತ ಗ್ಯಾರೇಜ್ ಆರಂಭಿಸಲು ಹೋಗಿ ಹಣ ಹೊಂದಿಸಲು ವಾಹನ ಕಳವು ಮಾಡಿ ಬ್ಯಾಟರಾಯನಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಬಂಧಿತರಿಂದ ೪೦ ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

   ಕೆಂಗೇರಿಯ ಚೆಟ್ಟುಪಾಳ್ಯದ ತೌಸಿಕ್ ಪಾಷ ಹಾಗೂ ಗುಡ್ಡು (೨೮), ನರೇಂದ್ರ ಕುಮಾರ್ (೩೦) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ೪ ಜನರೇಟರ್ ವಾಹನಗಳು, ೧ ಸ್ಕಾರ್ಪಿಯೋ ಕಾರು ಸೇರಿ ೪೦ ಲಕ್ಷ ಮೌಲ್ಯದ ೫ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ರಮೇಶ್ ತಿಳಿಸಿದ್ದಾರೆ.

    ಆರೋಪಿ ತೌಸಿಕ್ ಪಾಷ ಮೊದಲು ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ವಾಚ್‌ಮೆನ್ ಆಗಿದ್ದ ಸುರೇಂದ್ರಕುಮಾರ್ ಪರಿಚಯವಾಗಿತ್ತು. ಮಾಲೀಕರ ಜತೆ ಜಗಳ ಮಾಡಿಕೊಂಡು ಇವರಿಬ್ಬರು ಕೆಲಸ ಬಿಟ್ಟು ಸ್ವಂತ ಗ್ಯಾರೇಜ್ ಆರಂಭಿಸಲು ಮುಂದಾಗಿದ್ದರು.

    ಸ್ವಂತ ಗ್ಯಾರೇಜ್‌ಗೆ ಹಣ ಒದಗಿಸಲು ವಾಹನ ಕಳುವಿಗೆ ಇಳಿದಿದ್ದ ಇವರಿಬ್ಬರು ಗ್ಯಾರೇಜ್‌ನಲ್ಲಿ ಕಲಿತಿದ್ದ ತಂತ್ರಜ್ಞಾನ ಆಧರಿಸಿ ವಾಹನಗಳ ಬೀಗ ತೆಗೆದು ಕಳವು ಮಾಡಿ ಬಿಡಿ ಭಾಗಗಳನ್ನು ಬಿಚ್ಚಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಂಚು ರೂಪಿಸಿದ್ದರು.ಖಚಿತ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಬ್ಯಾಟರಾಯನಪುರ ಪೊಲೀಸ್ ಇನ್ಸ್‌ಪೆಕ್ಟರ್ ವೀರೇಂದ್ರ ಪ್ರಸಾದ್ ಮತ್ತವರ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಆರೋಪಿಗಳ ಬಂಧನದಿಂದ ಶಿವರಾಂಪುರ, ಸಂಜಯ್‌ನಗರ, ವಿಲ್ಸನ್‌ಗಾರ್ಡನ್, ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ನಡೆದಿದ್ದ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಇವರಿಬ್ಬರು ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link