ಸ್ವಚ್ಛತೆ ಕಾಪಾಡಿ, ಫ್ಲೆಕ್ಸ್ ತೆಗೆಸಿ, ಹಸಿರೀಕರಣಗೊಳಿಸಿ

ತುಮಕೂರು
    ನಗರಾದ್ಯಂತ ಸ್ವಚ್ಛತೆ ಕಾಪಾಡಬೇಕು. ನಿಷೇಧಿತ ಫ್ಲೆಕ್ಸ್ ಹಾವಳಿಯನ್ನು ತಡೆಗಟ್ಟಬೇಕು ಮತ್ತು ನಗರಾದ್ಯಂತ ಗಿಡಗಳನ್ನು ನೆಟ್ಟು ಹಸಿರೀಕರಣಗೊಳಿಸಬೇಕು- ಇದು ತುಮಕೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ಅವರು ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿ-ಸಿಬ್ಬಂದಿಗೆ ನೀಡಿದ ಸಲಹೆ.
    ಹೊಸದಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಧ್ಯಕ್ಷ ನರಸಿಂಹಮೂರ್ತಿ ಶನಿವಾರ ಬೆಳಗ್ಗೆ ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಆರೋಗ್ಯ ಶಾಖೆಯ ಅಧಿಕಾರಿ-ಸಿಬ್ಬಂದಿ ಜೊತೆ ಅನೌಪಚಾರಿಕ ಸಭೆಯೊಂದನ್ನು ನಡೆಸಿ ಈ ಸಲಹೆಗಳನ್ನು ನೀಡಿದರು. ಇಡೀ ನಗರವನ್ನು ತುಂಬ ಚೊಕ್ಕಟವಾಗಿಡಬೇಕು. ಈ ನಿಟ್ಟಿನಲ್ಲಿ ನಗರಾದ್ಯಂತ ಸ್ವಚ್ಛತಾ ಕಾರ್ಯವು ಮತ್ತಷ್ಟು ಚುರುಕಾಗಿ, ದಕ್ಷತೆಯಿಂದ ಆಗಬೇಕು. ಎಲ್ಲ ವಾರ್ಡ್‍ಗಳಲ್ಲೂ ನೈರ್ಮಲ್ಯ ಸಂರಕ್ಷಣೆಗೆ ಆದ್ಯ ಗಮನ ಕೊಡಬೇಕು ಎಂದು ಸ್ವಚ್ಛತೆ ಕಾಪಾಡಲು ಸೂಚಿಸಿದರು. 
 
    ನಗರದಲ್ಲಿರುವ ನಿಷೇಧಿತ ಫ್ಲೆಕ್ಸ್ ಹಾವಳಿಯನ್ನು ನಿಯಂತ್ರಿಸಬೇಕೆಂದೂ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಎಲ್ಲೆಡೆ ಫ್ಲೆಕ್ಸ್ ಹಾವಳಿ ಇದೆ. ಆ ಪಕ್ಷ- ಈ ಪಕ್ಷಕ್ಕೆ ಸೇರಿದ ಫ್ಲೆಕ್ಸ್ ಎಂಬ ವಿಂಗಡಣೆ ಬೇಡ. ಯಾವುದೇ ಇದ್ದರೂ ನಿಯಮಾನುಸಾರ ಕ್ರಮವನ್ನು ಕೈಗೊಳ್ಳಿ ಎಂದು ಸಲಹೆಯಿತ್ತರು. 
    ನಗರಾದ್ಯಂತ ಗಿಡಗಳನ್ನು ಬೆಳೆಸಬೇಕು ಹಾಗೂ ಆ ಮೂಲಕ ಹಸಿರೀಕರಣಗೊಳಿಸಬೇಕೆಂದೂ ಮತ್ತೊಂದು ಪ್ರಮುಖ ಸಲಹೆ ನೀಡಿದರು. ನಗರದಲ್ಲಿ ಗಿಡಗಳನ್ನು ಬೆಳೆಸಿದ್ದಿದ್ದರೆ, ಈಗಿನ ಧೂಳಿನ ಸ್ಥಿತಿ ಇರುತ್ತಿರಲಿಲ್ಲ ಎಂದ ನರಸಿಂಹಮೂರ್ತಿ ಅವರು, ನಗರಾದ್ಯಂತ ಎಲ್ಲ ಉದ್ಯಾನಗಳು, ಸಾರ್ವಜನಿಕ ಸ್ಮಶಾನಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. 
    ಸಭೆಯಲ್ಲಿ ಪಾಲಿಕೆ ಸದಸ್ಯರುಗಳಾದ ಸೈಯದ್ ನಯಾಜ್, ಧರಣೇಂದ್ರ ಕುಮಾರ್, ಎಂ.ಕೆ.ಮನು ಉಪಸ್ಥಿತರಿದ್ದರು. ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್, ಎಲ್ಲ ಪರಿಸರ ಇಂಜಿನಿಯರ್‍ಗಳು, ಹೆಲ್ತ್‍ಇನ್ಸ್‍ಪೆಕ್ಟರ್‍ಗಳು, ಆರೋಗ್ಯ ಶಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link