ಮೈಸೂರು
ಪಠ್ಯ ಪುಸ್ತಕರ ರಚನೆ ಬಗ್ಗೆ ಸರ್ಕಾರ ಬದಲಾದಾಗಲೆಲ್ಲ ಈ ವಿಷಯ ವಿವಾದವಾಗುತ್ತಿರುವುದರಿಂದ ಸರ್ಕಾರ ಸ್ವಾಯತ್ತ ಸಮಿತಿ ರಚನೆ ಮಾಡಬೇಕು ಎಂದು ಲೇಖಕ ದೇವನೂರು ಮಹಾದೇವ ಹೇಳಿದ್ದಾರೆ. ಮಾಧ್ಯಮ ದವರೊಂದಿಗೆ ಮಾತನಾಡಿದ ದೇವನೂರು ಮಹದೇವ, ಸ್ವಾಯತ್ತ ಸಮಿತಿಯಲ್ಲಿ ಯಾರ ಹಸ್ತಕ್ಷೇಪವೂ ಆಗಬಾರದು. ಕಳೆದ ಸಮಿತಿಯಲ್ಲಿ ಶಿಕ್ಷಣ ತಜ್ಞರೇ ಇರಲಿಲ್ಲ. ಆದರೆ, ಅದು ಸಿದ್ಧಪಡಿಸಿದ ಪುಸ್ತಕಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದರು.
ಹಿಂದಿನ ಪರಿಷ್ಕರಣೆಯಲ್ಲಿ ಹಿಂದುತ್ವದ ಕಾರ್ಯಸೂಚಿಯ ಮೇಲೆ ಹೆಚ್ಚಿನ ಒತ್ತಡವಿತ್ತು. ಪಠ್ಯಪುಸ್ತಕಗಳ ಕೊರತೆಯಾಗದಂತೆ ಹಿಂದಿನ ಸಮಿತಿಯ ತಪ್ಪುಗಳನ್ನು ಸರಿಪಡಿಸಲು ಪಾಠಗಳನ್ನು ಪರಿಷ್ಕರಿಸಲು ಸರ್ಕಾರ ಆರು ತಿಂಗಳಲ್ಲಿ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಮರಳಿರುವುದರಿಂದ, ಪಠ್ಯಪುಸ್ತಕಗಳನ್ನು ಪರಿಶೀಲಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಲು ಕೆಲವು ಶಿಕ್ಷಣ ತಜ್ಞರು ಮತ್ತು ಸಾಹಿತಿಗಳು ಈಗಾಗಲೇ ಅವರನ್ನು ಒಂದೆರಡು ಬಾರಿ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಹೇಳಿ ಅಧಿಕಾರಕ್ಕೆ ಬಂದಿದ್ದು, ಈ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಗಂಭೀರವಾಗಿ ಚಿಂತನೆ ಮಾಡುತ್ತಿದೆ. ಇದನ್ನು ಎಲ್ಲರೂ ಗಮನಿಸುತ್ತಿದ್ದಾರೆ.
ಗ್ಯಾರಂಟಿ ಜಾರಿ ಮಾಡಲು ಸ್ವಲ್ಪ ಸಮಯಾವಕಾಶ ಕೊಡಬೇಕು ಎಂದರು. ಕಳೆದ ಸರ್ಕಾರದಲ್ಲಿ ಸಾಹಿತಿಗಳು ಹಾಗೂ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ಸರ್ಕಾರ ಪರಿಶೀಲನೆ ನಡೆಸಿ, ನಿಜವಾಗಿದ್ದರೆ ವಾಪಸ್ ತೆಗೆದುಕೊಳ್ಳಲಿ. ಈ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡುವುದು ಅಗತ್ಯ. ಕೇಂದ್ರ ಸರ್ಕಾರ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಜೊತೆ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಕರುಳು ಕಿವುಚಿದ ಹಾಗೆ ಆಗುತ್ತದೆ.
ಶೇಮ್ ಲೆಸ್, ಇವತ್ತಿನ ನಾಯಕರುಗಳನ್ನು ನೋಡಿದರೆ ನಾಚಿಕೆಯಾಗುತ್ತದೆ. ಇವರಿಗೆ ಮನುಷ್ಯತ್ವವೂ ಇಲ್ಲ, ನಾಚಿಕೆಯೂ ಇಲ್ಲ ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಈ ರೀತಿ ನಡೆದಿರುವುದು ಎಲ್ಲರೂ ತಲೆ ತಗ್ಗಿಸುವಂಥದ್ದು ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ