ಹತ್ರಾಸ್‌ ದುರಂತದ ಬಗ್ಗೆ ಮೌನ ಮುರಿದ ” ಭೋಲೆ ಬಾಬಾ “

ಮೈನ್‌ಪುರಿ:

    ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 121 ಜನರ ಸಾವಿಗೆ ಕಾರಣವಾದ ಹತ್ರಾಸ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದ, ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ಸೂರಜ್ ಪಾಲ್ ಸಿಂಗ್ ಅಥವಾ “ಭೋಲೆ ಬಾಬಾ”, “ಅವ್ಯವಸ್ಥೆ ಸೃಷ್ಟಿಸಿದವರನ್ನು ಕ್ಷಮಿಸುವುದಿಲ್ಲ” ಎಂದು ಶನಿವಾರ ಹೇಳಿದ್ದಾರೆ.

    ಮೊದಲ ಬಾರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಾರಾಯಣ್ ಸಕರ್ ಹರಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ‘ಭೋಲೆ ಬಾಬಾ’, ಈ ವಾರದ ಆರಂಭದಲ್ಲಿ ಹತ್ರಾಸ್ ಜಿಲ್ಲೆಯ ಫುಲಾರಿ ಗ್ರಾಮದಲ್ಲಿ ನಡೆದ ‘ಸತ್ಸಂಗ’ದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಸಾವಿಗೆ ಸಂತಾಪ ಸೂಚಿಸಿದ್ದಾರೆ.

   ಜುಲೈ 2ರ ಘಟನೆಯಿಂದ ನನಗೆ ಅತೀವ ದುಃಖವಾಗಿದೆ. ದೇವರು ನಮಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ದಯವಿಟ್ಟು ಸರ್ಕಾರ ಮತ್ತು ಆಡಳಿತದ ಮೇಲೆ ನಂಬಿಕೆ ಇಡಿ. ಅವ್ಯವಸ್ಥೆ ಸೃಷ್ಟಿಸಿದವರನ್ನು ಕ್ಷಮಿಸುವುದಿಲ್ಲ ಎಂಬ ನಂಬಿಕೆ ನನಗಿದೆ. ಸಮಿತಿಯ ಸದಸ್ಯರಿಗೆ ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳೊಂದಿಗೆ ನಿಲ್ಲುವಂತೆ ಮತ್ತು ಅವರ ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡುವಂತೆ ನನ್ನ ವಕೀಲ ಎಪಿ ಸಿಂಗ್ ಮೂಲಕ ವಿನಂತಿಸಿದ್ದೇನೆ” ಎಂದು ‘ಬಾಬಾ’ ಹೇಳಿದ್ದಾರೆ. ಪೊಲೀಸ್ ಎಫ್‌ಐಆರ್ ಪ್ರಕಾರ, ಸತ್ಸಂಗ ಕಾರ್ಯಕ್ರಮದಲ್ಲಿ ಕೇವಲ 80,000 ಜನಕ್ಕೆ ಅನುಮತಿ ನೀಡಿದ್ದರೂ ಸುಮಾರು 250,000 ಜನ ಜಮಾಯಿಸಿದ್ದರು.

    ಸಂಘಟಕ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಎಂದು ಗುರುತಿಸಲಾಗಿದ್ದು, ವಿಶೇಷ ತನಿಖಾ ತಂಡ(ಎಸ್‌ಐಟಿ), ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ಮತ್ತು ಉತ್ತರ ಪ್ರದೇಶ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅವರ ವಕೀಲ ಎಪಿ ಸಿಂಗ್ ಶುಕ್ರವಾರ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ವಕೀಲ ಎಪಿ ಸಿಂಗ್, “ಹತ್ರಾಸ್ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ಹೆಸರಿಸಲಾದ ದೇವಪ್ರಕಾಶ್ ಮಧುಕರ್ ಮುಖ್ಯ ಸಂಘಟಕ ಎಂದು ಹೇಳಲಾಗಿದ್ದು, ಎಸ್‌ಐಟಿ, ಎಸ್‌ಟಿಎಫ್ ಮತ್ತು ಪೊಲೀಸರ ಮುಂದೆ ಶರಣಾಗಿದ್ದಾರೆ. ನಾವು ಅವರನ್ನು ಎಸ್‌ಐಟಿ ಒಪ್ಪಿಸಿದ್ದೇವೆ. ಉತ್ತರ ಪ್ರದೇಶ ಪೋಲೀಸರು ಈಗ ಕೂಲಂಕುಷವಾಗಿ ತನಿಖೆ ನಡೆಸಬಹುದು…ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅವರು ಹೃದ್ರೋಗಿಯಾಗಿದ್ದು, ಅವರಿಗೆ ಯಾವುದೇ ತೊಂದರೆ ಆಗಬಾರದು…”

    “ನಾವು ಯಾವುದೇ ನಿರೀಕ್ಷಣಾ ಜಾಮೀನು ಕೋರುವುದಿಲ್ಲ. ಯಾವುದೇ ಅರ್ಜಿಯನ್ನು ಸಲ್ಲಿಸುವುದಿಲ್ಲ ಮತ್ತು ಯಾವುದೇ ನ್ಯಾಯಾಲಯಕ್ಕೆ ಹೋಗುವುದಿಲ್ಲ. ಏಕೆಂದರೆ ನಾವು ಏನು ಮಾಡಿದ್ದೇವೆ? ನಮ್ಮ ಅಪರಾಧವೇನು? ನಾವು ದೇವಪ್ರಕಾಶ್ ಮಧುಕರ್ ಅವರನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದೇವೆ. ಅದರಂತೆ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ವಕೀಲರು ಹೇಳಿದ್ದಾರೆ.ಆದರೆ, ಈ ಬಗ್ಗೆ ಪೊಲೀಸರಿಂದ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ.

 

Recent Articles

spot_img

Related Stories

Share via
Copy link
Powered by Social Snap