ಹರಪನಹಳ್ಳಿ:
ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದೆ. ಅದರಲ್ಲಿ ಪ್ರಮುಖವಾಗಿ ಹರಪನಹಳ್ಳಿ ತಾಲ್ಲೂಕಿಗೆ ಸಂವಿಧಾನದ 371ಜೆ ಸೌಲಭ್ಯ ಕಲ್ಪಿಸಿದ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲ್ಲೂಕಿನ ಮತ್ತಿಹಳ್ಳಿ, ಸಾಸ್ವಿಹಳ್ಳಿ, ಕಡಬಗೇರಿ, ನಿಚ್ಚವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರ ಪರ ಮತಯಾಚಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ಹೋರಾಟ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಚ್ಛಾಶಕ್ತಿಯ ಫಲವಾಗಿ ತಾಲ್ಲೂಕು 371ಜೆ ಸೌಲಭ್ಯಕ್ಕೆ ಒಳಪಟ್ಟಿದೆ. ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಅವರು ಹರಪನಹಳ್ಳಿಗೆ ಈ ಸೌಲಭ್ಯ ಸಿಗುವುದು ಕಷ್ಟಕರ ಎಂದು ಹೇಳಿದ್ದರು. ಈಗ ಅವರ ಬಳಿ ಉತ್ತರವಿಲ್ಲ. ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಗೆ ಮತ ನೀಡದೇ ಬಡವರ ಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಪ್ರಕಾಶ, `ಚುನಾವಣೆ ಜಾತಿ ರಹಿತವಾಗಿರಬೇಕು. ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ದೇಶದ ಸರ್ವಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕಿದೆ’ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, `ಎಂ.ಪಿ.ರವೀಂದ್ರ ಅವರು 60 ಕೆರೆಗಳಿಗೆ ನದಿ ನೀರು ತುಂಬಿಸುವುದು, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಮಂಜೂರಾತಿ, 371ಜೆ ಸೌಲಭ್ಯ ಸೇರಿದಂತೆ ತಾಲ್ಲೂಕಿಗೆ ಶಾಶ್ವತ ಕೆಲಸ ಮಾಡಿದ್ದಾರೆ. ಇಂತಹ ಚಿಂತನೆಗಳು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಮುಖಂಡರಾದ ಚಂದ್ರೇಗೌಡರು, ವಕೀಲ ವೆಂಕಟೇಶ, ಮುತ್ತಿಗೆ ಜಂಬಣ್ಣ, ಅಬ್ದುಲ್ ರಹಿಮಾನ್, ಲಾಟಿ ದಾದಾಪೀರ, ಮತ್ತೂರು ಬಸವರಾಜ, ಚಿಕ್ಕೇರಿ ಬಸಪ್ಪ, ರಾಯದುರ್ಗದ ವಾಗೀಶ, ಕನಕನ ಬಸ್ಸಾಪುರದ ಮಂಜಪ್ಪ, ತಿಮಲಾಪುರದ ಈಶಪ್ಪ, ಉದಯಶಂಕರ ಇದ್ದರು.