ಹಿರಿಯೂರು :
ನಗರದ ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ವಾಸವಿದ್ದ ಸುಮಾರು ಮೂರು ಸಾವಿರಕ್ಕೂ ಹೆಚ್ಚುಜನ ನಿವಾಸಿಗಳು ನಗರಸಭೆಗೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕೇವಲ ಸಾವಿರದನಾಲ್ಕುನೂರು ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದ್ದು, ಉಳಿದ ಜನರಿಗೆ ನಗರಸಭೆಯಿಂದ ಹಕ್ಕುಪತ್ರಗಳನ್ನು ನೀಡದೆ ಇರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಆದ್ದರಿಂದ ಈ ಕೂಡಲೇ ನಗರಸಭೆಯಿಂದ ಅವರುಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂಬುದಾಗಿ ದಲಿತಸೇನೆ ಮುಖಂಡ ಘಾಟ್‍ರವಿ ಒತ್ತಾಯಿಸಿದರು
ನಗರದ ದಲಿತಸೇವೆ ನೇತೃತ್ವದಲ್ಲಿ ನಗರಸಭೆ ಆಯುಕ್ತರಿಗೆ ಮನವಿಪತ್ರ ಅರ್ಪಿಸಿ ಅವರು ಮಾತನಾಡಿದರು.ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿ ಬಹಳಷ್ಟು ಜನ ಬಡವರೇ ವಾಸವಾಗಿದ್ದು, ಜನಸಂಖ್ಯೆ ಹೆಚ್ಚಾಗಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.
ಆದ್ದರಿಂದ ಇನ್ನೊಂದು ಓವರ್‍ಹೆಡ್ ಟ್ಯಾಂಕನ್ನು ನಿರ್ಮಿಸಿಕೊಡಬೇಕು. ಅಲ್ಲದೆ ಬಡಾವಣೆ ಸರ್ಕಾರಿ ಜಾಗಗಳಲ್ಲಿ ಹಲವರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಬೇಕು. ನಕ್ಷೆ ಪ್ರಕಾರಮನೆಗಳು ರೋಡಿನಲ್ಲಿದ್ದರೂ ಅವುಗಳನ್ನು ನಗರಸಭೆ ವತಿಯಿಂದ ಮಂಜೂರು ಮಾಡಲಾಗಿದೆ. ಅಲ್ಲದೆ ಒಂದೇ ಕುಟುಂಬಕ್ಕೆ ಹಲವಾರು ಹಕ್ಕುಪತ್ರಗಳನ್ನು ನೀಡಲಾಗಿದ್ದು, ಇವುಗಳನ್ನು ಪತ್ತೆಹಚ್ಚಿ ರದ್ದುಪಡಿಸಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಅರ್ಪಿಸಿದರು.
ನಗರಸಭೆ ಆಯುಕ್ತರಾದ ಮಹಂತೇಶ್, ಇವರ ಮನವಿ ಪತ್ರ ಸ್ವೀಕರಿಸಿ ಈಗ ಚುನಾವಣಾ ಸಮಯವಿರುವುದರಿಂದ ಯಾವ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಚುನಾವಣೆ ನಂತರ ಈ ಬಗ್ಗೆ ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ದಲಿತಸೇನೆ ಗೌ||ಅಧ್ಯಕ್ಷ ಓಬಳೇಶ್, ಅಲ್ಪಸಂಖ್ಯಾತರ ಅಧ್ಯಕ್ಷ ಶೇಕ್‍ಬುಡೇನ್, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಸಂಚಾಲಕ ಮಂಜುನಾಥ್, ಮಹಿಳಾ ವಿಭಾಗದ ಅಧ್ಯಕ್ಷೆ ಮಂಜುಳಾ, ಅಲ್ಪಸಂಖ್ಯಾತರ ವಿಭಾಗದ ಮೆಹರ್‍ತಾಜ್, ಕರಿಯಮ್ಮ, ಪದ್ಮಾ, ಪುಷ್ಪಾ ಸೇರಿದಂತೆ ಇತರರು ಉಪಸ್ಥಿತರಿದ್ದರು.