ದಾವಣಗೆರೆ:
ಕೇಂದ್ರ ಸರ್ಕಾರವು ಹಿಂದಿ ಹೇರಿಕೆಯ ಮೂಲಕ, ನಮ್ಮ ನೆಲದ ಭಾಷೆಯಾಗಿರುವ ಕನ್ನಡವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಳವಡಿಸಿರುವ ಸೂಚನಾ ಹಾಗೂ ನಾಮಫಲಕಗಳಲ್ಲಿರುವ ಹಿಂದಿ ಅಕ್ಷರಗಳಿಗೆ ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಅವರ ನೇತೃತ್ವದಲ್ಲಿ ನಗರದ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಳವಡಿಸಿರುವ ಸೂಚನ ಮತ್ತು ನಾಮಫಲಕಗಳಲ್ಲಿರುವ ಹಿಂದಿ ಭಾಷೆಯ ಅಕ್ಷರಗಳಿಗೆ ಮಸಿ ಬಳಿದ ಕರವೇ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಭಾರತದ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರ ಆಡಳಿತ ನುಡಿ ಅನ್ನುವ ಹಿಂಬಾಗಿಲಿನ ಮೂಲಕ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಜನರ ಮೇಲೆ ಹೇರುವ ನಿರಂತರ ಪ್ರಯತ್ನ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳನ್ನು ಬೆಳೆಸಲು ಅಲ್ಲಿಯ ಸ್ಥಳೀಯ ಸರ್ಕಾರಗಳಿಗೆ ನೆರವು ನೀಡಬೇಕಾಗಿದ್ದ ಕೇಂದ್ರ ಸರ್ಕಾರವು, ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿ ಭಾರತೀಯರ ತೆರಿಗೆ ಹಣದಲ್ಲಿ ಕೇವಲ ಹಿಂದಿ ಭಾಷೆಗೆ ಪ್ರೋತ್ಸಾಹ, ಮನ್ನಣೆ ನೀಡುತ್ತಾ ಬಂದಿದೆ. ಕೇಂದ್ರ ಸರ್ಕಾರದ ಆಡಳಿತ ಭಾಷಾ ಕಾಯ್ದೆಯ ಕ್ರಮದಿಂದಾಗಿ ಭಾರತದ ಹಲವು ಶ್ರೀಮಂತ ಭಾಷೆಗಳು ತಮ್ಮ ತವರು ನೆಲದಲ್ಲೇ ಆಡಳಿತ, ಉದ್ಯೋಗ, ಕಲಿಕೆ, ಮನರಂಜನೆ, ಗ್ರಾಹಕ ಸೇವೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸುವ ಮೂಲಕ ತಮ್ಮ ಸಾರ್ವಭೌಮತ್ವ ಕಳೆದುಕೊಂಡು ತಬ್ಬಲಿ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಅಂಚೆ, ವಿಮೆ, ಬ್ಯಾಂಕು, ರೈಲು, ವಿಮಾನ ಸೇವೆ, ಪಿಂಚಣಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹತ್ತಾರು ಇಲಾಖೆಗಳಲ್ಲಿ ರಾಜ್ಯಗಳ ಪ್ರಾದೇಶಿಕ ಭಾಷೆಗಳ ಕುತ್ತಿಗೆ ಇಸುಕಿ, ಆಡಳಿತ ಭಾಷೆಯ ಹೆಸರಿನಲ್ಲಿ ಇಂಗ್ಲಿಷ್ ಜೊತೆ, ಜೊತೆಯಾಗಿ ಹಿಂದಿಯನ್ನು ಸ್ಥಾಪಿಸುವ ಕೇಂದ್ರ ಸಕಾರದ ಭಾಷಾ ತಾರತಮ್ಯ ನೀತಿಯಿಂದಾಗಿ, ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಕನ್ನಡಿಗರ ವಿರೋಧದ ಮಧ್ಯೆಯೂ ಹಿಂದಿ ಸಪ್ತಾಹ, ಹಿಂದಿ ಪಕ್ವಾಡದ ನೆಪದಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆಗೆ ನಡೆಸಿರುವ ಪ್ರಯತ್ನವನ್ನು ತಕ್ಷಣವೇ ನಿಲ್ಲಿಸಬೇಕು. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೂ ಕೇಂದ್ರದ ಅಧಿಕೃತ ಸ್ಥಾನಮಾನ ಸಿಗುವಂತೆ ಕೇಂದ್ರದ ಭಾಷಾ ನೀತಿಗೆ ತಿದ್ದುಪಡಿ ತರಬೇಕು. ಆಯಾ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆಗಳ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಮೂಲಕ ಭಾರತದ ಭಾಷಾ ವೈವಿಧ್ಯತೆಯನ್ನು ಕೇಂದ್ರ ಸರ್ಕಾರ ಗೌರವಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಕುಮಾರ್, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಂ ಬಿ ಎ ಲೋಕೇಶ್, ಎಸ್.ಆಂಜನೇಯ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ