ತುಮಕೂರು

ಹಿಂದಿ ದಿವಸ್ ರದ್ದು ಮಾಡಲು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು, ಬರಹಗಾರರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಮಂಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ. ಹ. ರಮಾಕುಮಾರಿ ಮಾತನಾಡಿ, ಸಂವಿಧಾನದ ಪ್ರಕಾರ ಎಲ್ಲ ಭಾಷೆಗಳಿಗೂ ಸಮಾನ ಘನತೆ-ಗೌರವ ಇದೆ. ಭಾರತೀಯ 22 ಭಾಷೆಗಳನ್ನೂ ಸಂವಿಧಾನವು ಆಡಳಿತಾತ್ಮಕವಾಗಿ ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ. ಹಿಂದಿಯೂ ಸೇರಿದಂತೆ, ಯಾವುದೇ ಒಂದು ಭಾಷೆ ರಾಷ್ಟ್ರ ಭಾಷೆಯಾಗಿಲ್ಲ. 22 ಭಾಷೆಗಳೂ ರಾಷ್ಟ್ರ ಭಾಷೆಯೆ. ಹೀಗಿರುವಾಗ ಒಂದು ಭಾಷೆಯನ್ನು ಇಡೀ ದೇಶದ ಸಂಪರ್ಕ ಭಾಷೆಯಾಗಿ ಬಿಂಬಿಸುವುದು ಪ್ರಜಾಸತ್ತಾತ್ಮಕ ಅಲ್ಲ. ಇದು ಇತರ ಭಾಷೆಗಳ ಮೇಲೆ ಆಕ್ರಮಣಕಾರಿ ನಡೆಯಾಗುತ್ತದೆ ಎಂದು ಹೇಳಿದರು.
ಈಗಾಗಲೇ ಫೆಬ್ರ್ರುವರಿ 21 ನ್ನು ಮಾತೃಭಾಷಾ ದಿವಸವನ್ನಾಗಿ ಆಚರಿಸಲಾಗುತ್ತಿದೆ. ಮತ್ತೆ ಸೆ. 14 ರಂದು ಹಿಂದಿ ದಿವಸದ ಅವಶ್ಯಕತೆ ಇಲ್ಲ. ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಹಿಂದಿ ಅಸ್ತಿತ್ವವೇ ಇಲ್ಲ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಸಂಪರ್ಕ ಭಾಷೆಯಾಗಿ ಉಪಭಾಷೆಗಳು ಬಳಕೆಯಲ್ಲಿದ್ದರೂ ಹಿಂದಿ ರಾಜ್ಯ ಎಂದು ಹೇಳಲಾಗುತ್ತಿದೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ಈ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಸಂವಿಧಾನದಲ್ಲಿಯೂ ಕೂಡ ಈ ಪ್ರಸ್ತಾಪವಿಲ್ಲ.
ಅಂಗೀಕೃತ 22 ಭಾಷೆಗಳಲ್ಲಿ ಇದೂ ಒಂದಾಗಿದ್ದು ಅಧಿಕೃತ ಭಾಷೆಯೇ ಹೊರತು ರಾಷ್ಟ್ರಭಾಷೆ ಅಲ್ಲ. ಕರ್ನಾಟಕದಲ್ಲಿಯೂ ಕೂಡ ದಬ್ಬಾಳಿಕೆಗೆ ಒಳಗಾಗಿ ಅನೇಕ ಶಾಲಾ ಕಾಲೇಜು ಸಂಸ್ಥೆಗಳಲ್ಲಿ ಹಿಂದಿ ದಿವಸ ಆಚರಿಸಲಾಗುತ್ತಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ರಮಾಕುಮಾರಿ ಹೇಳಿದರು.
ಸಂಪರ್ಕ ಭಾಷೆ, ಮಾತೃಭಾಷೆ, ಪ್ರಾದೇಶಿಕ ಭಾಷೆ, ರಾಜ್ಯಭಾಷೆ, ರಾಷ್ಟ್ರಭಾಷೆ ಮುಂತಾಗಿ ವಿಭಜಿಸುತ್ತಾ ಭಾಷಾ ಬಾಂಧವ್ಯವನ್ನು ಹಾಳು ಮಾಡುವ ವ್ಯವಸ್ಥೆಯನ್ನು ಬಿಟ್ಟು ಒಟ್ಟಾರೆಯಾಗಿ ಭಾಷಾ ದಿವಸ ಎಂದು ಆಚರಿಸುವುದಾದಲ್ಲಿ ಯಾವ ಯಾವ ರಾಜ್ಯದ ಭಾಷೆ ಯಾವುದಾಗಿರುತ್ತದೆಯೋ ಅದನ್ನು ಅವರು ಆಚರಿಸಿಕೊಳ್ಳಲು ಬಿಡಬೇಕು. ಯಾವುದೇ ರೀತಿಯಲ್ಲಿ ಹಿಂದಿಯನ್ನು ಹೇರುವುದನ್ನು ಕನ್ನಡಿಗರಾದ ನಾವು ಖಂಡಿಸಬೇಕಾಗಿದೆ ಎಂದರು.
ಸಾಹಿತಿ ಡಾ. ಕವಿತಾಕೃಷ್ಣ ಮಾತನಾಡಿ, ಕನ್ನಡ ಓದಿ ಬರೆಯುವವರಿಗೆ ನೌಕರಿ ದೊರೆಯಬೇಕು, ಕನ್ನಡಿಗರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಿ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಪ್ರಯತ್ನ ಖಂಡನೀಯ ಎಂದರು.
ದೇಶದ 22 ಭಾಷೆಗಳನ್ನು ಆಡಳಿತಾತ್ಮಕವಾಗಿ ಅಧಿಕೃತ ಭಾಷೆಯಾಗಿ ಸಂವಿಧಾನ ಅಂಗೀಕರಿಸಿದೆ. ಹಿಂದಿಯೂ ಸೇರಿದಂತೆ, ಯಾವುದೇ ಒಂದು ಭಾಷೆ ಈ ದೇಶದ ರಾಷ್ಟ್ರ ಭಾಷೆಯಾಗಿಲ್ಲ. ಎಲ್ಲಾ 22 ಭಾಷೆಗಳೂ ರಾಷ್ಟ್ರಭಾಷೆಯೇ. ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರ ಭಾಷೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ. ಮರುಳಯ್ಯ, ಲೇಖಕರಾದ ಅನ್ನಪೂರ್ಣ ವೆಂಕಟನಂಜಪ್ಪ, ಮಣ್ಣೆ ರಾಜು, ಸಿ. ಎ. ಇಂದಿರಾ, ಜಿಲ್ಲಾ ಚುಟುಕ ಸಾಹಿತ್ಯ ಪರಿಷತ್ತಿನ ಲಕ್ಷ್ಮೀಕಾಂತರಾಜೇ ಅರಸು, ಗುಬ್ಬಿ ಸಂಘದ ಪ್ರಕಾಶ್ ಕೆ. ನಾಡಿಗ್, ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ, ಕೆಎಸ್‍ಆರ್‍ಟಿಸಿ ಕನ್ನಡ ಬಳಗದ ಹನುಮಂತರಾಯ, ಅಭ್ಯುದಯ ಸೇವಾ ಸಂಘದ ಲಲಿತಾ ಮಲ್ಲಪ್ಪ, ಮಮತಾ ರವಿಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
