ಹಿರಿಯೂರು :
ಹಿರಿಯೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಭರವಸೆ ನೀಡಿದರು.
ಹಿರಿಯೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣಕ್ಕೆ ಭಾನುವಾರ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಿರಿಯೂರಿನ ಬಸ್ ನಿಲ್ದಾಣ 1994ರಲ್ಲಿ ನಿರ್ಮಾಣವಾಗಿದ್ದು ಅದೇ ಪರಿಸ್ಥಿತಿಯಲ್ಲಿದೆ. ನಿಲ್ದಾಣದ ಮುಂದುಗಡೆ ನಗರಸಭೆಗೆ ಸೇರಿದ ಖಾಲಿ ನಿವೇಶನವಿದ್ದು, ಇದನ್ನು ನಮ್ಮ ಸಾರಿಗೆ ಇಲಾಖೆಗೆ ಹಸ್ತಾಂತರಿಸಿದರೆ ಇದೇ ಜಾಗದಲ್ಲಿ ಹೈಟೆಕ್ ನಿಲ್ದಾಣವನ್ನು ನಿರ್ಮಿಸುವುದಾಗಿ ಹೇಳಿದರು. ಬಸ್ ನಿಲ್ದಾಣದ ಸಿಮೆಂಟ್ ರಸ್ತೆ ನಿರ್ಮಾಣ ಮತ್ತಿತರ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 50ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಹಿರಿಯೂರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ಡಿಪೋಗೆ 3ಎಕರೆ ಭೂಮಿಯನ್ನು ಸ್ಟೇಡಿಯಂ ಪಕ್ಕದಲ್ಲಿ ಗುರುತಿಸಲಾಗಿತ್ತು. ಆದರೆ, ಈ ಜಾಗ ಅತ್ಯಂತ ಕಿರುದಾಗಿರುವುದರಿಂದ ಇಲ್ಲಿ ಸಿಬ್ಭಂದಿ ವಸತಿ ಗೃಹಗಳನ್ನು ನಿರ್ಮಿಸಲಾಗುವುದು. ಉದ್ದೇಶಿತ ಡಿಪೋವನ್ನು ಆದಿವಾಲ ಬಳಿಯ 1/9ನಲ್ಲಿ 10 ಎಕರೆ ಜಾಗದಲ್ಲಿ ನಿರ್ಮಿಸಲಾಗುವುದು ಎಂದರು.
ಆತಿಥ್ಯ ಹೋಟೆಲ್: ಹಿರಿಯೂರಿನಿಂದ ಚಿತ್ರದುರ್ಗಕ್ಕೆ ಹೋಗುವ ಪ್ರಯಾಣಿಕರಿಗೆ ಆತಿಥ್ಯ ಹೋಟೆಲ್ ನಿಲುಗಡೆ ಕಿರಿ ಕಿರಿಯಾಗುತ್ತಿದೆ. ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕೇವಲ 5ಕಿ.ಮೀ ದೂರದಲ್ಲಿ ಎಲ್ಲಾ ಬಸ್ ಗಳು ಇಲ್ಲಿ ನಿಲುಗಡೆ ಮಾಡುವುದರಿಂದ ಕಳ್ಳತನ ಪ್ರಕರಣ ನಡೆಯುತ್ತಿವೆ, ಅದಕ್ಕಾಗಿ ನಿಲುಗಡೆ ನಿರ್ಭಂದ ಮಾಡಬೇಕು ಎಂದು ಪ್ರಯಾಣಕರು ಸಚಿವರನ್ನು ಆಗ್ರಹಿಸಿದರು. ನಂತರ ಮಾತನಾಡಿದ ಸಚಿವರು ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಚಿವರ ಭೇಟಿ ಸಂದರ್ಭದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಡಿ.ಟಿ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ಯಶೋಧರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಜಯಣ್ಣ, ನಗರಸಭೆ ಸದಸ್ಯರಾದ ಪ್ರೇಮ್ ಕುಮಾರ್, ಮಂಜುಳಾ, ಅಜಗರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
