ಹುಲಿಯೂರು ಗ್ರಾ.ಪಂ. ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮ

ಹುಲಿಯೂರುದುರ್ಗ:

      ಹುಲಿಯೂರುದುರ್ಗ ಗ್ರಾಮ ಪಂಚಾಯತಿ ಆವರಣದಲ್ಲಿ ಸೆ.18ರಂದು ಜನಸ್ಪಂದನಾ ಕಾರ್ಯಕ್ರಮವನ್ನು ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಆಗಮಿಸಿದ್ದರು. ಸಭೆಯಲ್ಲಿ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಶಾಸಕರು ಅಲ್ಲೇ ಪರಿಹಾರವನ್ನು ಸಂಬಂಧಪಟ್ಟ ಇಲಾಖೆಯವರಿಂದ ಮಾತನಾಡಿಸಿ ನಿವಾರಿಸಿದರು.

      ಪಡಿತರ ಅಕ್ಕಿ ವಿತರಣೆಯಲ್ಲಿ ತೊಂದರೆಯಾದರೆ ಕೂಡಲೇ ತಮಗೆ ತಿಳಿಸುವಂತೆ ವಿನಂತಿಸಿದರು. ಈ ಸಮಯದಲ್ಲಿ ಹಳೇಪೇಟೆ ಪಡಿತರ ಅಂಗಡಿಯಲ್ಲಿ ಪಡಿತರ ಸರಿಯಾಗಿ ವಿತರಿಸುತ್ತಿಲ್ಲ ಎಂಬ ದೂರು ಕೇಳಿಬಂದಾಗ ಸಂಬಂಧಪಟ್ಟವರನ್ನು ಕರೆಯಿಸಿ ಕೇಳಿದಾಗ ಸರ್ವರ್ ಪ್ಲಾಬ್ಲಂ ಎಂಬ ಉತ್ತರ ಅವರಿಂದ ಬಂದಿತು. ನಂತರ ಸದರಿ ಪಡಿತರ ಅಂಗಡಿಯವರಿಗೆ ಸರಿಯಾಗಿ ವಿತರಿಸುವಂತೆ ತಿಳಿಸಿದರು.
ಇನ್ನು ಅಬಕಾರಿಗೆ ಸಂಬಂಧಪಟ್ಟಂತ ಹುಲಿಯೂರುದುರ್ಗ ಸೇರಿದಂತೆ ಸಣ್ಣಪುಟ್ಟ ಹಳ್ಳಿಗಳಲ್ಲೂ ಮದ್ಯ ಮಾರಾಟವಾಗುತ್ತಿದೆ ಎಂಬ ಆಕ್ರೋಶ ಸಾರ್ವಜನಿಕರಿಂದ ಕೇಳಿಬಂದಿತು. ಅಬಕಾರಿ ಅಧಿಕಾರಿ ಕಮಲಾಕರ್ ಅವರು ಇದಕ್ಕೆ ಸಂಬಂಧಪಟ್ಟಂತಹ ಹಾಗೂ ತಾವು ದಾಳಿ ಮಾಡಿದಾಗ ದೊರೆತಂತಹ ಹಾಗೂ ಕೇಸು ದಾಖಲಿಸುವ ವಿಷಯ ತಿಳಿಸಿದಾಗ ಜನರು ಇವರ ಮಾತುಗಳಿಗೆ ಭಿನ್ನವಾದ ಪ್ರತಿಕ್ರಿಯೆ ನೀಡಿದರು.

     ನಂತರ ಶಾಸಕರು ಮಾತನಾಡಿ ನಾನು ಗೆದ್ದು ಬಂದಾಗ ಹಲವಾರು ಹಳ್ಳಿಗಳಲ್ಲಿ ಮದ್ಯ ಮಾರಾಟವನ್ನು ಮುಕ್ತ ಮಾಡುತ್ತೇನೆಂದು ಮಾತು ಕೊಟ್ಟಿದ್ದೆ. ಸಾಧ್ಯವಾದರೆ ಈ ನಿಟ್ಟಿನಲ್ಲಿ ನನಗೆ ತಾವು ಸಹಕಾರ ನೀಡಬೇಕೆಂದು ಹುಲಿಯೂರುದುರ್ಗ ಸಬ್ ಇನ್ಸ್‍ಪೆಕ್ಟರ್ ಕೇಳಿದಾಗ ಅವರೂ ಸಹ ನನಗೆ ಸಹಕಾರ ನೀಡಿದ್ದಾರೆ. ಈ ಬಗ್ಗೆ ಹೋರಾಟ ಮಾಡೋಣ ಎಂದರು.

     ಇನ್ನು ಹುಲಿಯೂರುದುರ್ಗ ಬಾರ್‍ಗಳಲ್ಲಿ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಅನಿಲ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ಎಂಎಸ್‍ಐಎಲ್ ಅಂಗಡಿ ತೆರೆಯೋಣ. ಇದರಿಂದ ಅಧಿಕ ಹಣ ನೀಡುವುದನ್ನು ತಪ್ಪಿಸಬಹುದು ಎಂದರು.

      ಉಪ ತಹಸೀಲ್ದಾರ್ ರವೀಂದ್ರ ಮಾತನಾಡಿ ತಮ್ಮ ಇಲಾಖೆಯ ವರದಿ ನೀಡಿ ಕಳೆದ ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೈತನ ಧರ್ಮಪತ್ನಿ ಅವರನ್ನು ಕರೆಸಿ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ನೀಡಿರುವ ವಿಚಾರವನ್ನು ತಿಳಿಸಿದರು. ಹುಲಿಯೂರು ಸುತ್ತಮುತ್ತಲ ಹಳ್ಳಿಗಳಿಂದ ಬಂದಿದ್ದ ಜನತೆ ಸಭೆಯ ಬಗ್ಗೆ ತಮ್ಮ ಮೆಚ್ಚುಗೆ ಸೂಚಿಸಿದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link