ಹುಳಿಯಾರು
ಹುಳಿಯಾರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಹಾಗೂ ಮರಳು ಸಾಗಾಣಿಕೆ ಮಾಡುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ದೂರು ನೀಡಿದ್ದರೂ ಕಡಿವಾಣ ಹಾಕದೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕೇಶವಾಪುರದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದ ರೈತರು ಹುಳಿಯಾರು ಕೆರೆ ಸುಮಾರು 450 ಎಕರೆಯಷ್ಟಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ. ಆದರೆ ಈ ಕೆರೆಯ ಮೇಲೆ ಅಕ್ರಮ ಇಟ್ಟಿಗೆ ಕಾರ್ಖಾನೆಯವರ ಕಣ್ಣು ಬಿದ್ದಿದ್ದು ನಿತ್ಯ ನೂರಕ್ಕೂ ಹೆಚ್ಚು ಲೋಡ್ ಮರಳು ಹಾಗೂ ಮಣ್ಣು ದೋಚುತ್ತಿರುವುದರಿಂದ ಬಿದ್ದ ಮಳೆಯ ನೀರು ಭೂಮಿಗೆ ಹಿಂಗದೆ ಅಂತರ್ಜಲ ಬರಿದಾಗಿ ತೆಂಗು ಒಣಗುತ್ತಿದೆ ಎಂದು ಆರೋಪಿಸಿದ್ದಾರೆ.
ಎಂಜಿನಿಯರ್ ಲಿಂಗರಾಜು ಮಾತನಾಡಿ ಕೆರೆಯಲ್ಲಿ ಅತಿಕ್ರಮವಾಗಿ ಜೆಸಿಬಿ ಬಳಸಿ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ತೆಗೆಯುವುದನ್ನು ತಡೆದು ವಿಡಿಯೋ ಸಮೇತ ಹುಳಿಯಾರು ಪೊಲೀಸ್ ಠಾಣೆಗೆ ದೂರು ನೀಡಿಲಾಗಿದೆ. ಆದರೆ, ಪೊಲೀಸರು ಅಪರಾಧವಲ್ಲದ ಪ್ರಕರಣ ಎಂದು ಹಿಂಬರಹ ನೀಡಿ ಪರೋಕ್ಷವಾಗಿ ಮಣ್ಣು ಮತ್ತು ಮರಳು ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಕಂದಾಯ ಅಧಿಕಾರಿಗಳು, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತಿಂಗಳುಗಳೇ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರಲ್ಲದೆ ತಕ್ಷಣ ಕ್ರಮ ಜರುಗಿಸದಿದ್ದರೆ ಪ್ರತಿಭಟನೆಯ ಹಾದಿ ತುಳಿಯಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಮುಖಂಡ ಎಚ್.ಕೆ.ರಾಮಯ್ಯ ಮಾತನಾಡಿ, ಇಟ್ಟಿಗೆ ಕಾರ್ಖಾನೆಗಳು ಅಕ್ರಮವಾಗಿ ತಲೆ ಎತ್ತಿದ ಪರಿಣಾಮ ತೆಂಗಿನ ಅವನತಿ ಆರಂಭವಾಗಿದ್ದು ಈ ಭಾಗದ ರೈತರು ಉದ್ಯೋಗಕ್ಕಾಗಿ ಗುಳೆ ಹೋಗುವಂತಾಗಿದೆ. ಅಲ್ಲದೆ ರಸ್ತೆಯ ಬದಿಯಲ್ಲಿ ಇಟ್ಟಿಗೆ ಕಾರ್ಖಾನೆಯವರು ಸಾವಿರಾರು ಲೋಡ್ ಮಣ್ಣು ಸಂಗ್ರಹ ಮಾಡಿದ್ದರೂ ದಂಡ ವಿಧಿಸದೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಎಚ್.ಟಿ.ದುರ್ಗರಾಜು, ನರಸಿಂಹಯ್ಯ ಎಚ್.ಡಿ.ಮೋಹನ್‍ಕುಮಾರ್, ಕೆ.ರಮೇಶ್, ಕುಮಾರ್, ಮಹಮದ್, ಎಚ್.ಆರ್.ದುರ್ಗಯ್ಯ, ಎಚ್.ಡಿ.ಓಂಕಾರಯ್ಯ, ಹೊನ್ನಯ್ಯ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
