ಹುಳಿಯಾರು:
ಹುಳಿಯಾರು ಕೆರೆಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎನ್ನುವ ದೂರಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರ ನೇತೃತ್ವದ ತಂಡ ಮಂಗಳವಾರ ಮಧ್ಯಾಹ್ನ ಕೆರೆ ವೀಕ್ಷಿಸಿತು.
ಅಚ್ಚರಿ ಎನ್ನುವಂತೆ ಇಲ್ಲಿ ನಡೆಯುತ್ತಿರುವುದು ಮರಳು ಗಣಿಗಾರಿಕೆಯಲ್ಲ ಮಣ್ಣು ಗಣಿಗಾರಿಕೆ. ಇದು ದಶಕಗಳಿಂದ ನಡೆಯುತ್ತಿರುವುದು ಸ್ಪಷ್ಟವಾಗಿದ್ದು, ಅಕ್ರಮವಾಗಿ ಮಣ್ಣು ತುಂಬಿರುವವರ ವಿರುದ್ಧ ಕ್ರಮ ಹಾಗೂ ಮಣ್ಣಿನ ರಾಯಲ್ಟಿ ಸಂಗ್ರಹ ಸಹ ನಿಶ್ಚಿತ. ಆದರೆ ಇಟ್ಟಿಗೆ ಕಾರ್ಖಾನೆ ಮುಚ್ಚುವ ಮುನ್ನ ಕೂಲಿಕಾರರ ಸಂಕಷ್ಟಗಳನ್ನೂ ಆಲಿಸಿ ನಿರ್ಧಾರ ಎನ್ನುವ ಮೂಲಕ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ಹಿಂದಿರುಗಿದರು.
ಹೌದು, ಹುಳಿಯಾರು ಕೆರೆ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಮರಳು, ರಾಳು ಮರಳು, ಕೆಂಪು ಮಣ್ಣು ಜೇಡಿ ಮಣ್ಣುಗಳನ್ನು ಮನಸ್ಸೋ ಇಚ್ಛೆ ಲೂಟಿ ಮಾಡುತ್ತಿದ್ದಾರೆ. ಇದರಿಂದ ಅಂತರ್ಜಲಕ್ಕೆ ಪೆಟ್ಟು ಬಿದ್ದು ಸಾವಿರಾರು ಎಕರೆ ತೆಂಗು, ಅಡಿಕೆ ಬೆಳೆ ಒಣಗಲು ಕಾರಣರಾಗಿದ್ದು, ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಾರ್ವಜನಿಕರು ದೂರು ನೀಡಿದ್ದರು.
ಹಾಗಾಗಿ ಭೂ ವಿಜ್ಞಾನ ಇಲಾಖೆಯ ತುಮಕೂರು ಜಿಲ್ಲೆಯ ಉಪನಿರ್ದೇಶಕ ಮಹಾಂತೇಶ್ ಸೇರಿದಂತೆ ಉಮಾಶಂಕರ್, ಲೋಕೇಶ್, ಇಲಾಖೆಯ ಎಂಜಿನಿಯರ್‍ಗಳ ತಂಡ ರಚಿಸಿ ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಲಾಗಿತ್ತು. ಅದರಂತೆ ಮಂಗಳವಾರ ಹುಳಿಯಾರು ಕೆರೆ ಹಾಗೂ ಅಕ್ರಮ ಇಟ್ಟಿಗೆ ಕಾರ್ಖಾನೆಗಳನ್ನು ವೀಕ್ಷಿಸಿದರು. ಆದರೆ ಕೆರೆ ಮತ್ತು ಕಾರ್ಖಾನೆಗಳನ್ನು ವೀಕ್ಷಿಸುವ ಸಂದರ್ಭದಲ್ಲಿ ನೈಸರ್ಗಿಕ ಸಂಪತ್ತು ಲೂಟಿ ಮತ್ತು ದುರ್ಬಳಕೆಯ ಬಗ್ಗೆ ಒಂದಿಷ್ಟೂ ಅಚ್ಚರಿ ವ್ಯಕ್ತಪಡಿಸದೆ ಇದೊಂದು ಸಹಜ ಪ್ರಕ್ರಿಯೆ ಎನ್ನುವ ಭಾವ ವ್ಯಕ್ತಪಡಿಸಿದರು.
ಲಂಚ ಮುಕ್ತ ವೇದಿಕೆಯ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಅವರು ನೋಡಿ ಸ್ವಾಮಿ ಕೆರೆಯನ್ನು ಹೇಗೆ ಲೂಟಿ ಮಾಡಿದ್ದಾರೆ ಎಂದು ತೋರಿಸಿದರೆ, ಕೆರೆಯಲ್ಲಿ ದಶಕಗಳಿಂದ ಸಂಗ್ರಹವಾಗಿದ್ದ ಊಳು ತೆಗೆದಿದ್ದು ಇದರಿಂದ ಕೆರೆಯಲ್ಲಿ ನೀರು ಸಂಗ್ರಹಣೆಗೆ ನೆರವಾಗುತ್ತದೆ ಎಂದರು. ಇದಕ್ಕೆ ಪ್ರತಿಯಾಗಿ ಮಲ್ಲಿಕಾರ್ಜನ್ ಅವರು ಇದು ಊಳಲ್ಲ, ಮರಳು, ನುಸಿ ಮಣ್ಣು, ಗೋಡು ಮಣ್ಣು ಈ ಮಣ್ಣುಗಳಿಂದಲೇ ನೀರು ಅಂತರ್ಜಲ ಸೇರಲು ಸಾಧ್ಯ. ಆದರೆ ಹೀಗೆ ಬಗೆದಿರುವಾಗ ನೀರು ಹೇಗೆ ಹಿಂಗುತ್ತದೆ ಎಂದು ಪ್ರಶ್ನಿಸಿದರು. ಆದರೆ ಅಧಿಕಾರಿಗಳು ಮೌನರಾದರು.
ಆರ್‍ಟಿಐ ಕಾರ್ಯಕರ್ತ ಶಂಕರೇಶ್ ಅವರು ಗುಂಡಿಯಲ್ಲಿದ್ದ ಮರಳನ್ನು ಬೊಗಸೆಯಲ್ಲಿ ಹಿಡಿದು ತಂದು ನೋಡಿ ಸಾರ್ ಎಂತಹ ಒಳ್ಳೆ ಮರಳನ್ನು ದೋಚುತ್ತಿದ್ದಾರೆ. ಇವರ ಮರಳಿನ ಆಸೆಗೆ ಕೆರೆಯಲ್ಲಿ ಎರಡಾಳು ಎತ್ತರದ ಕಂದಕಗಳು ನಿರ್ಮಿಸಿದ್ದಾರೆ ಎಂದು ತೋರಿಸಿದರು. ಆದರೆ ಅಧಿಕಾರಿಗಳು ಮಾತ್ರ ಇದು ಮರಳಲ್ಲ ಮರಳು ಮಿಶ್ರಿತ ಮಣ್ಣು. ಇದರಿಂದ ಮನೆ ಕಟ್ಟಲು ಸಾಧ್ಯವಿಲ್ಲ ಎಂದರು. ಆಗ ಮರಳು ಮತ್ತು ಮರಳು ಮಿಶ್ರಿತ ಎರಡೂ ಮಣ್ಣನ್ನು ತಂದು ತೋರಿಸಿದರೂ ಅಧಿಕಾರಿಗಳು ಒಪ್ಪದೆ ಮರಳನ್ನು ಲ್ಯಾಬ್‍ಗೆ ಕಳಿಸಿ ರಿಪೋರ್ಟ್ ಪಡೆದು ಮಾತನಾಡುವುದಾಗಿ ಹೇಳಿದರು.
ಆಯ್ತು ಸ್ವಾಮಿ ಮಣ್ಣೋ ಮರಳೋ, ಒಟ್ಟಾರೆ ಅಕ್ರಮವಾಗಿ ದೋಚಿರುವುದಂತೂ ಸ್ಪಷ್ಟವಾಗಿದೆ ತಾನೇ, ಇದರ ಬಗ್ಗೆ ಯಾವ ಕ್ರಮ ಕೈಗೊಳ್ಳುವಿರಿ ಎಂದು ಪ್ರಶ್ನಿಸಿದರೆ ಕೆರೆಯಲ್ಲಿ ಮಣ್ಣು ತೆಗೆಯಲು ರಾಯಲ್ಟಿ ಕಟ್ಟಬೇಕಿದ್ದು ಇಟ್ಟಿಗೆ ಕಾರ್ಖಾನೆಗಳ ಮುಂದೆ ಇರುವ ಮಣ್ಣಿನ ಅಳತೆ ಮಾಡಿ ರಾಯಲ್ಟಿ ಕಟ್ಟಿಸಿಕೊಳ್ಳುತ್ತೇನೆ ಎಂದರು. ಮರಳನ್ನು ಸೀಝ್ ಮಾಡಿದಂತೆ ಅಕ್ರಮವಾಗಿ ಸಂಗ್ರಹಿಸಿರುವ ಮಣ್ಣು ಸೀಝ್ ಮಾಡುವುದಿಲ್ಲ ಎಂದರೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎಂಜಿನಿಯರ್ ಲಿಂಗರಾಜು ಅವರು ಚಿಮ್ಮಣಿ ಇಲ್ಲದೆ ಕಾರ್ಖಾನೆಗಳಲ್ಲಿ ಇಟ್ಟಿಗೆ ಸುಡುತ್ತಿದ್ದು, ಈ ಹೊಗೆಯಿಂದ ಈ ಭಾಗದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತೋಟಗಳ ಬೆಳೆಗಳ ಇಳುವರಿ ಕುಸಿದಿದೆ ಎಂದು ಆರೋಪಿಸಿದರು. ಇದಕ್ಕೆ ಅಧಿಕಾರಿಗಳು ಗ್ರಾಮ ಲೆಕ್ಕಿಗ ಶ್ರೀನಿವಾಸ್ ಅವರಿಗೆ ಈ ಬಗ್ಗೆ ವರದಿ ಕೊಡಿ ಎಂದು ಸೂಚಿಸಿದರು. ರಾಜು ಬಡಗಿ ಅವರು ಇಟ್ಟಿಗೆ ಸುಡಲು ಈ ಭಾಗದ ಹಳೆಯ ಮರಗಳನ್ನು ಕಡಿಯುತ್ತಿದ್ದು, ಪರಿಸರದ ಅಸಮತೋಲನಕ್ಕೆ ಕಾರಣರಾಗಿದ್ದಾರೆ ಎಂದು ದೂರು ನೀಡಿದರು. ಆದರೆ ಇದು ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಅವರಿಗೆ ದೂರು ಕೊಡಿ ಎಂದು ಜವಾಬ್ದಾರಿ ಹಸ್ತಾಂತರಿಸಿದರು.
ಅಕ್ರಮವಾಗಿ ನಡೆಯುತ್ತಿರುವ ಇಟ್ಟಿಗೆ ಕಾರ್ಖಾನೆಗಳನ್ನಾದರೂ ಕಡಿವಾಣ ಹಾಕಿ ಎಂದು ಅಂತಿಮವಾಗಿ ಕೇಳಿಕೊಂಡರು. ಆದರೆ ಇಟ್ಟಿಗೆ ತಯಾರು ಮಾಡುವುದು ಗುಡಿ ಕೈಗಾರಿಕೆಗೆ ಬರುತ್ತದೆ. ಹೆಚ್ಚು ಇಟ್ಟಿಗೆ ತಯಾರು ಮಾಡುತ್ತಿದ್ದರೆ ಸಣ್ಣ ಕೈಗಾರಿಕೆಗೆ ಬರುತ್ತದೆ. ಇಲ್ಲಿ ನಡೆಯುತ್ತಿರುವುದು ಯಾವ ರೀತಿಯ ಇಟ್ಟಿಗೆ ತಯಾರಿ ಎಂದು ಪರಿಶೀಲಿಸಬೇಕಿದೆ. ಇವರು ಪಡೆದಿರುವ ಅನುಮತಿಗಳನ್ನು ನೋಡಬೇಕಿದೆ. ಅಲ್ಲದೆ ಈ ಇಟ್ಟಿಗೆ ತಯಾರಿಯಿಂದ ಸಹಸ್ರಾರು ಕುಟುಂಬ ಬದುಕು ನಡೆಸುತ್ತಿದ್ದು ಅವರ ಕಾಳಜಿ ನೋಡಬೇಕಿದೆ. ಒಟ್ಟಾರೆ ಸದ್ಯಕ್ಕೆ ಏನನ್ನೂ ಹೇಳಲಾರೆ. ಅಧಿಕಾರಿಗಳಿಗೆ ವರದಿ ನೀಡಿ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿ ಹಿಂದಿರುಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ