ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವಂತಾಬೇಕು : ಮಾದುಸ್ವಾಮಿ

 ಹುಳಿಯಾರು:

      ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರು ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಪ್ರಧಾನಮಂತ್ರಿಗಳಾಗಿ,ರಾಷ್ಟçಪತಿಗಳಾಗಿ ,ಹೈಕೋರ್ಟ್ ಸುಪ್ರೀಂ ಕೋರ್ಟ್ ಜಡ್ಜ್ ಗಳಾಗಿ ಇವತ್ತು ಮುಂದೆ ಬಂದಿದ್ದಾರೆ. ಆದರೆ ಇವರ ಪ್ರಮಾಣ ಬೆರಳೆಣಿಕೆಯಷ್ಟಿದ್ದು.

    ,ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅವರುಗಳು ಮುಂದೆ ಬರಲು ಪರಿಣಾಮಕಾರಿ ಶಿಕ್ಷಣವೊಂದೇ ದಾರಿಯಾಗಿದ್ದು, ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವಂತಾದಾಗ ಮಾತ್ರ ಮಹಿಳೆಯರು ಸ್ವಾಭಿಮಾನಿಗಳಾಗಿ ಬದುಕಲು ನೆರವಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ನುಡಿದರು.

    ಅವರು ಹುಳಿಯಾರಿನಲ್ಲಿ ಸೃಷ್ಟಿ ಸಾಂಸ್ಕೃತಿಕ ಮತ್ತು ಕಲಾ ಮಹಿಳಾ ಸಮಾಜದ ಉದ್ಘಾಟನೆ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮಹಿಳೆಯು ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದ್ದು ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಸಮನಾಗಿ ಬೆಳೆಯಬೇಕು ಎಂದರು.

    ರಾಜ್ಯಾಂಗದಲ್ಲಿ ತಿದ್ದುಪಡಿ ತಂದು ನಾವಿಂದು ಮಹಿಳೆಯರೂ ಸಹ ಎಲ್ಲಾ ಕಡೆ ಪ್ರತಿನಿಧಿಸುವ ಹಕ್ಕನ್ನು ತಂದಿದ್ದು,ಈ ಮೂಲಕ ರಾಜಕೀಯವಾಗಿ ಮುಂದೆ ತಂದಿದ್ದಲ್ಲದೆ ಆರ್ಥಿಕವಾಗಿ ಮುಂದೆ ತರಲು ಸ್ವಶಕ್ತಿ, ಸ್ತ್ರೀಶಕ್ತಿ ಮೂಲಕ ಮಹಿಳೆಯರ ಸಬಲೀಕರಣ ಮಾಡಿದ್ದೇವೆ. ಆರ್ಥಿಕವಾಗಿ ಮುಂದೆ ಬಂದರೆ ಸಾಮಾಜಿಕವಾಗಿ ಸಹ ಮುಂದೆ ಬರುತ್ತಾರೆ ಎಂದು ಅವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

    ನಾವು ಯಾರಿಗಿಂತ ಕಡಿಮೆ ಇಲ್ಲ ಎಂಬ ಮನೋಭಾವ ಮಹಿಳೆಯರಲ್ಲಿ ಮೊದಲು ಮೂಡಬೇಕು.ನಾವು ಕೂಡ ಎಲ್ಲರಂತೆ ಶಕ್ತಿವಂತರು ಎಂಬ ಮನೋಭಾವ ಮೂಡಿಸಿಕೊಂಡು, ಪೂರಕವಾಗಿ ದೊರೆಯುವ ಸಮಾಜದ ಹಾಗೂ ಸರ್ಕಾರದ ಅನುಕೂಲಗಳನ್ನು ಬಳಸಿಕೊಂಡು ಕೆಲಸ ಮಾಡಿದರೆ ಮಹಿಳೆಯರು ಅಬಲೆಯರಲ್ಲ ಸಬಲೇಯರು ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ.ಉದ್ಯೋಗದಲ್ಲಿ,ಹಕ್ಕುಪತ್ರದಲ್ಲಿ ,ಜಮೀನಿನಲ್ಲಿ ಎಲ್ಲವುದರಲ್ಲೂ ಮೀಸಲಾತಿ ಕೊಡುತ್ತಿದ್ದು, ಇವುಗಳನ್ನು ಬಳಸಿಕೊಂಡು ಮಹಿಳೆಯರು ಮುಂದೆ ಬರಬೇಕು ಎಂದರು.

    ಬ್ರಹ್ಮಕುಮಾರಿ ಸಮಾಜದ ಸಂಚಾಲಕಿ ರಾಜಯೋಗಿನಿ ಬಿ.ಕೆ.ಗೀತಕ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಚೈತ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಇದೇ ಸಂದರ್ಭದಲ್ಲಿ  ಪ್ರೇಮಕ್ಕ, ಶೈಲಜಾ ಅವರುಗಳನ್ನು ಸನ್ಮಾನಿಸಲಾಯಿತು.

    ಸೃಷ್ಟಿ ಸಾಂಸ್ಕೃತಿಕ ಮತ್ತು ಕಲಾ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಗೀತಾ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೂತಪ್ಪ, ಉಪಾಧ್ಯಕ್ಷೆ ಶೃತಿ ಸನತ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಬಿಬಿ ಫಾತಿಮಾ, ರತ್ನಮ್ಮ, ಕಾವ್ಯಾರಾಣಿ, ಸಂಧ್ಯಾ ,ಪ್ರೀತಿ ರಾಘವೇಂದ್ರ ಸೇರಿದಂತೆ ಮಹಿಳಾ ಸಮಾಜದ ಅಧ್ಯಕ್ಷೆ ಕವಿತಾ ಬಸವರಾಜು, ಪೂಜಿತ, ಆಶಾ, ಮಮತಾ, ಲತಾ, ಪೂರ್ಣಿಮಾ, ದ್ರಾಕ್ಷಾಯಿಣಿ, ವಸಂತ ವೀರೇಶ್ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap