ಹೊಂದಿಕೊಳ್ಳುವ ಬದಲು ಸಿದ್ಧಾಂತ ಪ್ರತಿಪಾದಿಸಿ

ತುಮಕೂರು:

               ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಬದಲಾಗಿ ಸಿದ್ಧಾಂತ ಅಳವಡಿಸಿಕೊಂಡು ಅದಕ್ಕೆ ಬದ್ಧರಾಗಿರಬೇಕು. ಅದನ್ನೇ ಪ್ರತಿಪಾದಿಸಿಕೊಂಡು ಹೋಗಬೇಕು. ಆಗ ಮಾತ್ರ ದೃಢ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಪ್ರತಿಪಾದಿಸಿದರು.

              ಸಮಾನ ಮನಸ್ಕರ ವೇದಿಕೆಯಿಂದ ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ದಿ. ಎಸ್.ಸಿ. ರಂಗನಾಥ್ ಅವರ ಸಂಸ್ಮರಣೆಯ ಷರೀಫರ ಗೀತೆಗಳ ಗಾಯನ, ಬದುಕು ಬರಹ ಕುರಿತ ಉಪನ್ಯಾಸ ಹಾಗೂ ಹಿರಿಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮನುಷ್ಯ ನೇರ ಮತ್ತು ದಿಟ್ಟತನದಿಂದ ನಡೆಯುವುದು ಒಳ್ಳೆಯದು. ಆಗ ಮಾತ್ರವೇ ತನ್ನ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಲು ಸಾಧ್ಯ ಎಂದರು

              ಕೆಲವರು `ಅಂದರಿಕು ಮಂಚಿವಾಳ್ಳು’ ತರಹ ಇರುತ್ತಾರೆ. ಇವರು ತಮ್ಮ ಸಿದ್ಧಾಂತಗಳನ್ನು ಬದಿಗೊತ್ತಿ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಹಾಗಾಗುವುದು ಬೇಡ. ಸಿದ್ಧಾಂತ ಪ್ರತಿಪಾದಿಸುತ್ತಲೇ ಮುನ್ನಡೆದಾಗ ಅವರು ಇಷ್ಟವಾಗುವ ವ್ಯಕ್ತಿಗಳಾಗುತ್ತಾರೆ ಎಂದರು.

              ಇಂದು ಸಾಮಾಜಿಕ ಸ್ವಾಸ್ಥ್ಯ ಉತ್ತಮವಾಗಿಲ್ಲ. ಹಿಂದೆ ಗುರುಪರಂಪರೆ ಇತ್ತು. ಗುರು ಮಠಗಳು ಒಂದು ಸಿದ್ಧಾಂತ ತಳಹದಿಯ ಮೇಲೆ ನಡೆಯುತ್ತಿದ್ದವು. ಈಗ ಅಂತಹ ಗುರು ಪರಂಪರೆ ನಶಿಸುತ್ತಿದ್ದು, ಧರ್ಮ ಉದ್ಯಮವಾಗುತ್ತಿದೆ. ಮಾನವೀಯ ಮೌಲ್ಯಗಳು ಸಮಾಜದಲ್ಲಿ ಕಳೆದು ಹೋಗುತ್ತಿವೆ. ಅವಿಭಕ್ತ ಕುಟುಂಬಗಳು ನಾಶವಾದಂತೆಲ್ಲ ಪ್ರಕೃತಿಯ ಅವಸಾನವೂ ಆಗುತ್ತಿದೆ. ನಮ್ಮಲ್ಲಿರುವ ಸ್ವಾರ್ಥ ಮತ್ತು ಪ್ರತಿಷ್ಠೆಗೆ ತಕ್ಕಂತೆ ಪ್ರಕೃತಿಯು ಅಟ್ಟಹಾಸ ಮೆರೆಯುತ್ತಿದೆ. ನಮ್ಮಲ್ಲಿನ ಅಹಂಕಾರಗಳಿಗೆ ಪ್ರಕೃತಿ ಪಾಠ ಕಲಿಸುತ್ತಾ ಹೋಗುತ್ತದೆ ಎಂದರು.

                ಯಾರೋ ಹೇಳುವ ಜ್ಯೋತಿಷ್ಯದ ಮಾತುಗಳಿಗೆ, ಊಹಾಪೋಹದ ವರದಿಗಳಿಗೆ ಭಾರತದಲ್ಲಿ ನಂಬಿಕೆ ಹೆಚ್ಚು. ಇದರಿಂದಲೇ ಈ ದೇಶ ಪ್ರಸಿದ್ಧಿ ಪಡೆದಿದೆ. ಇಂತಹ ಊಹಾಪೋಹಗಳಿಗೆ ಬದಲಾಗಿ ವಾಸ್ತವ ಸಂಗತಿಗಳತ್ತ ಹೆಚ್ಚು ಗಮನ ಹರಿಸಬೇಕಿದೆ. ಪ್ರಕೃತಿಯೊಂದಿಗೆ ಬದುಕುವ ದೃಢತೆ ಮಾಡಬೇಕಿದೆ. ಸಿದ್ಧಗಂಗಾ ಶ್ರೀಗಳು ಹೇಳಿಕೊಂಡು ಬಂದ ಹಾಗೆ ಪ್ರಕೃತಿಯ ಮುನಿಸು ಹೇಳಿಕೇಳಿ ಬರುವುದಿಲ್ಲ. ಅದು ಯಾವಾಗಲೂ, ಯಾವ ರೂಪದಲ್ಲಾದರೂ ಬರಬಹುದು ಎಂಬ ಎಚ್ಚರಿಕೆಯ ನಡೆ ನಮ್ಮಲ್ಲಿರಬೇಕು ಎಂದರು.

                 ಕಾರ್ಖಾನೆಗಳ ಉಪನಿರ್ದೇಶಕ ಆರ್.ಕೆ.ಪಾರ್ಥಸಾರಥಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದಿನ ಪೀಳಿಗೆಯಲ್ಲಿ ಗುರುಪರಂಪರೆಯ ಭಕ್ತಿ ಇಲ್ಲ. ದೃಢ ನಂಬಿಕೆಯೂ ಇಲ್ಲ. ಹಿಂದೆ ನೈತಿಕ ಶಿಕ್ಷಣ ಇತ್ತು. ಅದನ್ನು ಓದುವ ಅವಕಾಶಗಳಿದ್ದವು. ಈಗ ಅಂತಹ ಅವಕಾಶಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಎಲ್ಲ ಕಡೆಯೂ ಕಾನ್ವೆಂಟ್ ಸಂಸ್ಕತಿ ಬಂದಿದ್ದು, ಗುರು ಶಿಷ್ಯ ಪರಂಪರೆ ನಶಿಸಿ ಹೋಗುತ್ತಿರುವುದರಿಂದ ಮೌಲ್ಯಗಳು ಕುಸಿಯುತ್ತಿವೆ ಎಂದರು.

               ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಲ್ಲಿ ಶಿಸ್ತು ರೂಢಿಸುವ ಬದಲಾಗಿ ಯಾಂತ್ರಿಕ ಶಿಕ್ಷಣವೇ ಮೇಲುಗೈ ಪಡೆಯುತ್ತಿದೆ. ಪಾಠ ಪ್ರವಚನಗಳು ಯಾಂತ್ರಿಕವಾಗುತ್ತಿವೆ. ಹಿಂದಿನ ದಿನಗಳಲ್ಲಿ ಮಕ್ಕಳು ತಪ್ಪು ಮಾಡಿದರೆ ಶಿಕ್ಷಕರು ಪೋಷಕರ ಗಮನಕ್ಕೆ ತರುತ್ತಿದ್ದರು. ಮಕ್ಕಳನ್ನು ತಿದ್ದುವಲ್ಲಿ ಪೋಷಕರು ಶ್ರಮಿಸುತ್ತಿದ್ದರು. ಈಗ ಅಂತಹ ವಾತಾವರಣವೇ ಇಲ್ಲ. ಮಕ್ಕಳಿಗೆ ದಂಡಿಸಿದರೆ ಅಥವಾ ಎಚ್ಚರಿಕೆ ನೀಡಿದರೆ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟವೂ ಕಡಿಮೆಯಾಗುತ್ತಿದೆ ಎಂದರು.

                ಎಲ್ಲ ಕ್ಷೇತ್ರಗಳಲ್ಲೂ ಈಗ ಯಾಂತ್ರೀಕೃತ ಜೀವನ ನಡೆಯುತ್ತಿದೆ. ಹಿಂದೆ ವೈದ್ಯರು ಮತ್ತು ರೋಗಿಗಳ ನಡುವೆ ಪರಸ್ಪರ ಸ್ಪರ್ಶ ಮತ್ತು ಮಾತುಕತೆಯ ಬಾಂಧವ್ಯ ಇತ್ತು. ಎಷ್ಟೋ ರೋಗಗಳು ಸ್ಪರ್ಶದಿಂದಲೇ ಶೇ.40 ರಷ್ಟು ವಾಸಿಯಾಗುತ್ತಿದ್ದವು. ವೈದ್ಯರು ರೋಗಿಯನ್ನು ಮುಟ್ಟಿದ ಕೂಡಲೇ ಆತನಿಗೆ ಯಾವ ರೋಗ ಇದೆ ಎಂಬುದನ್ನು ಪತ್ತೆ ಮಾಡಲು ಸಹಕಾರಿಯಾಗುತ್ತಿತ್ತು. ಈಗ ಅದರ ಬದಲು ಯಂತ್ರಗಳು ಬಂದಿವೆ. ರೋಗಿ ಆಸ್ಪತ್ರೆಗಳಿಗೆ ಬರುತ್ತಿದ್ದಂತೆಯೇ ವೈದ್ಯರು ಪರೀಕ್ಷಿಸುವ ಬದಲು ಯಂತ್ರಗಳ ಪರೀಕ್ಷೆ ನಡೆಯುತ್ತದೆ. ಆ ರಿಪೋರ್ಟ್ ನೋಡಿಕೊಂಡು ನಂತರ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಹೀಗೆ ಮಾನವನ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿದ್ದು, ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದವರು ವಿಷಾದಿಸಿದರು.

                  ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ವಿ.ಪ. ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಶಿವೇಗೌಡ, ಎನ್.ಸಿ.ರಂಗನಾಥ್ ಅವರ ಪತ್ನಿ ಶಾಂತ ರಂಗನಾಥ್, ಮಿಡಿಗೇಶಿ ನಿವೃತ್ತ ಪ್ರಾಂಶುಪಾಲ ಜಿ.ಅನಂತನಾರಾಯಣಸ್ವಾಮಿ, ನಿವೃತ್ತ ದೈಹಿಕ ಶಿಕ್ಷಕ ಎ.ವಿ.ವೆಂಕಟರಾಮರೆಡ್ಡಿ, ನಿವೃತ್ತ ಆಂಗ್ಲ ಉಪನ್ಯಾಸಕ ಎಂ.ಆಂಜನೇಯಲು ಮುಂತಾದವರು ಉಪಸ್ಥಿತರಿದ್ದರು. ಸಿಂಹದ ಘರ್ಜನೆ-ವೈಚಾರಿಕ ಮತ್ತು ಆಧ್ಯಾತ್ಮಿಕ ಲೇಖನಗಳ ಸಂಕಲನ ಕುರಿತು ನಿವೃತ್ತ ಪ್ರಾಂಶುಪಾಲ ವಿ.ಎಸ್.ಪರಭ್ರಹ್ಮಾಚಾರ್, ದಾಳಿಂಬೆ, ಸೂರ್ಯಕಾಂತಿ, ಮಿಂಚು ಗುಡುಗು ಕವನ ಸಂಕಲನ ಕುರಿತು ಕರ್ನಾಟಕ ಗೆಜೆಟಿಯರ್ ನಿವೃತ್ತ ಸಂಪಾದಕ ಎಸ್.ರಾಜೇಂದ್ರಪ್ಪ ಉಪನ್ಯಾಸ ನೀಡಿದರು. ಸಮಾನ ಮನಸ್ಕರ ವೇದಿಕೆ ಕಾರ್ಯದರ್ಶಿ ವಿ.ಎಸ್.ರಾಜಣ್ಣ ಸ್ವಾಗತಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link