ದಾವಣಗೆರೆ:
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ, ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕಣಕ್ಕೆ ಇಳಿವುದೇ ಇಲ್ಲ ಎಂಬುದಾಗಿ ಖಡಕ್ ಆಗಿ ತಿಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹೊಸ ಅಭ್ಯರ್ಥಿಯ ಶೋಧಕ್ಕೆ ಮುಂದಾಗಿದೆ.
ಹೌದು… ಈಗಾಗಲೇ ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಸೋತಿರುವ ಎಸ್.ಎಸ್.ಮಲ್ಲಿಕಾರ್ಜುನ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಣಿದ ನಂತರ ಜನರಿಂದ ಅಂತರ ಕಾಯ್ದುಕೊಂಡಿದ್ದರು. ಈ ವಿಷಯ ತಿಳಿದ ಕಾಂಗ್ರೆಸ್ ಹೈಕಮಾಂಡ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ಘೋಷಿಸಿತ್ತು. ಟಿಕೆಟ್ ಘೋಷಣೆಯಿಂದ ಸಂತಸಗೊಂಡಿದ್ದ ಶಾಮನೂರು ಎದುರಾಳಿ ಅಭ್ಯರ್ಥಿ ಸಿದ್ದೇಶ್ವರ್ ಅವರ ಠೇವಣಿ ಕಳೆಯುವುದಾಗಿ ಹುಮ್ಮಸ್ಸಿನ ಮಾತುಗಳನ್ನಾಡಿದ್ದರು.
ಹಿಂದೆ ಸರಿದ ಅಪ್ಪ-ಮಗ
ಆದರೆ, ಈಗ ವಯಸ್ಸಿನ ಕಾರಣ ನೀಡಿ, ನಾನು ಕ್ಷೇತ್ರದಾದ್ಯಂತ ಪ್ರಚಾರ ಕೈಗೊಳ್ಳಲಾಗುವುದಿಲ್ಲ. ಹೀಗಾಗಿ ನನಗೆ ಬಿ ಫಾರ್‍ಂ ಬೇಡ. ನನ್ನ ಬದಲು ಪುತ್ರ ಮಲ್ಲಿಕಾರ್ಜುನ್‍ಗೆ ನೀಡಿ ಎಂಬುದಾಗಿ ಹೈಕಮಾಂಡ್ ಬಳಿ ತಿಳಿಸಿದ್ದರು. ಇದರಿಂದ ಮುಜುಗರಕ್ಕೆ ಒಳಗಾದ ಹೈಕಮಾಂಡ್ ಮಲ್ಲಿಕಾರ್ಜುನ್‍ಗೆ ಅಭ್ಯರ್ಥಿಯಾಗುವಂತೆ ಸೂಚಿಸಿತ್ತು. ಆದರೆ, ಮಲ್ಲಿಕಾರ್ಜುನ್ ತಾವು ಸಲ್ಲಿಸಿರುವ ಕೆಲ ಬೇಡಿಕೆಗಳನ್ನು ಒಪ್ಪುವುದಾದರೆ ಮಾತ್ರ ಕಣಕ್ಕಿಳಿಯುವುದಾಗಿ ಷರತ್ತು ಹಾಕಿದ್ದರು. ಹೀಗಾಗಿ ಹೈಕಮಾಂಡ್ ಯಾವುದೇ ಬೇಡಿಕೆಗೆ ಸಮ್ಮತಿ ನೀಡದಿರುವ ಕಾರಣಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್‍ರವರು ಸಹ ಲೋಕಸಭೆಗೆ ಸ್ಪರ್ಧಿಸುವುದೇ ಇಲ್ಲ ಎಂಬ ನಿರ್ಧಾರವನ್ನು ವರಿಷ್ಠರಿಗೆ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಮಾಜಿ ಶಾಸಕರು ವಲ್ಲೆ ಅಂದ್ರು:
ಇದರಿಂದ ಮತ್ತಷ್ಟು ಮುಜುಗರಕ್ಕೆ ಒಳಗಾದ ಕಾಂಗ್ರೆಸ್ ಹೈಕಮಾಂಡ್ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದ ಚನ್ನಗಿರಿ ಮಾಜಿ ಶಾಸಕ ವಡ್ನಾಳ್ ರಾಜಣ್ಣನವರನ್ನು ಕೆಪಿಸಿಸಿ ಕಚೇರಿಗೆ ಕರೆಯಿಸಿ ಹಾಗೂ ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡರನ್ನು ಫೋನಾಯಿಸಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗುವಂತೆ ಸೂಚಿಸಿದ್ದರು. ಇವರಿಬ್ಬರೂ ಸಹ ಸ್ಪರ್ಧೆ ಮಾಡಲು ನಿರಾಕರಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಈ ಎಲ್ಲಾ ಬೆಳವಣಿಗೆಯಿಂದ ವಿಚಲಿತವಾಗಿರುವ ಕಾಂಗ್ರೆಸ್ ಹೈಕಮಾಂಡ್ ಹೊಸ ಅಭ್ಯರ್ಥಿಯ ಹುಡುಕಾಟಕ್ಕೆ ಮುಂದಾಗಿದ್ದು, ಈಗ ಸಧ್ಯ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹೆಸರು ಸೂಚಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಕೆಪಿಸಿಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ ಹಾಗೂ ಹೊಸಕೆರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್, ಎಂ.ಟಿ.ಸುಭಾಷ್ ಚಂದ್ರ, ನಿಖಿಲ್ ಕೊಂಡಜ್ಜಿ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಈ ಐವರಲ್ಲಿ ಒಬ್ಬರು ಕಾಂಗ್ರೆಸ್ ಅಭ್ಯರ್ಥಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.