ಬೆಳಗಾವಿ:
ಬೆಳಗಾವಿ ಚಳಿಗಾಲ ಅಧಿವೇಶನ 2024 ಸುಗಮವಾಗಿ ನಡೆಸಲು ವಸತಿ, ಸಾರಿಗೆ, ಉಟೋಪಹಾರ ಸೇರಿದತೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗಿದ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗಮ ಅಧಿವೇಶನಕ್ಕಾಗಿ ಈಗಾಗಲೇ 10 ಸಮಿತಿಗಳನ್ನು ರಚಿಸಲಾಗಿದೆ. ಶಾಸಕರು, ಸಚಿವರು, ಅಧಿಕಾರಿಗಳು ಸಿಬ್ಬಂದಿ ವಸತಿಗಾಗಿ ಖಾಸಗಿ ಹೋಟೆಲ್, ಅತಿಥಿ ಗೃಹ, ಪ್ರವಾಸಿ ಮಂದಿರಗಳಲ್ಲಿ ಒಟ್ಟಾರೆ 2,756 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಕಲಾಪ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ 8 ಕಡೆಗಳಲ್ಲಿ ಪಾವತಿ ಆಧಾರದ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಸ್ವ-ಸಹಾಯ ಸಂಘಗಳು ಸೇರಿದಂತೆ ವಿವಿಧ ಬಗೆಯ ಸಂಸ್ಥೆಗಳಿಗೆ 38 ಸ್ಟಾಲ್ ಗಳಿಗೂ ಅವಕಾಶ ಮಾಡಿಕೊಡಲಾಗುತ್ತಿದೆ. ಸುವರ್ಣ ವಿಧಾನಸೌಧದಲ್ಲಿ ಬಿಎಸ್ಎನ್ಎಲ್ ಸೇರಿದಂತೆ ಎಲ್ಲಾ ಖಾಸಗಿ ಸಂಸ್ಥೆಗಳಿಂದ ಅತ್ಯುತ್ತಮ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾರಿಗೆ ಅಗತ್ಯಗಳಿಗಾಗಿ ವಿವಿಧ ಜಿಲ್ಲೆಗಳಿಂದ ವಿವಿಧ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಡಿಟಿಐ, ಸ್ಪೋರ್ಟ್ಸ್ ಹಾಸ್ಟೆಲ್ ಮತ್ತು ಅಂಬೇಡ್ಕರ್ ಭವನದಲ್ಲಿ ಚಾಲಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನಗಳನ್ನೂ ಬಳಸಿಕೊಳ್ಳಲಾಗುವುದು. ಅಧಿವೇಶನಕ್ಕೆ ಸಾರ್ವಜನಿಕ ಪ್ರವೇಶಕ್ಕಾಗಿ, ಸಂದರ್ಶಕರು ಮತ್ತು ಪ್ರತಿನಿಧಿಗಳಿಗೆ ಸಂಬಂಧಿಸಿದ ಸಿಬ್ಬಂದಿಗೆ ಪಾಸ್‌ಗಳನ್ನು ನೀಡಲು ಆನ್‌ಲೈನ್ ಪಾಸ್ ವ್ಯವಸ್ಥೆ ಮಾಡಲಾಗಿದೆ. ಜನಪ್ರತಿನಿಧಿಗಳ ಸಿಬ್ಬಂದಿಗೆ ಪಾಸ್ ನೀಡಲು ಪೋರ್ಟಲ್ ಸೃಷ್ಟಿಸಲಾಗಿದೆ ಎಂದು ಹೇಳಿದರು.
1924ರಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಛಾಯಾಚಿತ್ರ ಪ್ರದರ್ಶನ ಕೂಡ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಚರ್ಚಾಸ್ಪರ್ಧೆ, ಭಾಷಣ, ಕಿರುಚಿತ್ರ ಪ್ರದರ್ಶನ ಸೇರಿದಂತೆ ಶಾಲಾ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚುವರಿಯಾಗಿ, ಡಿಸೆಂಬರ್ 9 ರಿಂದ ಬೆಳಗಾವಿ ನಗರದ 30 ಪ್ರಮುಖ ವೃತ್ತಗಳಲ್ಲಿ ಮೈಸೂರು ದಸರಾ ಮಾದರಿಯ ದೀಪಾಲಂಕಾರವನ್ನು ಯೋಜಿಸಲಾಗಿದೆ. ಕಾಂಗ್ರೆಸ್ ಶತಮಾನೋತ್ಸವದ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಕೋಟಿ ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಇದನ್ನು ಅಲ್ಪಾವಧಿ ಮತ್ತು ದೀರ್ಘಾವಧಿಯ ವಿವಿಧ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.
ಚಟುವಟಿಕೆ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಸುವರ್ಣಸೌಧ ಬಳಿ ಸೈನ್ಸ್ ಪಾರ್ಕ್ ಉದ್ಘಾಟನೆಗೆ ಸಿದ್ಧಗೊಳಿಸಲಾಗಿದೆ. ಅಧಿವೇಶನಕ್ಕೆ ಎದುರಾಗುವ ಅಡೆತಡೆ ತಪ್ಪಿಸಲು ಪ್ರತಿಭಟನೆ ನಡೆಸಲು ಮುಂದಾಗಿರುವ ವಿವಿಧ ಸಂಘಟನೆಗಳ ಜತೆ ಆಡಳಿತ ಚರ್ಚೆ ನಡೆಸಲಾಗಿದೆ. ಭದ್ರತೆಗಾಗಿ 6,000 ಪೊಲೀಸರನ್ನು ನಿಯೋಜಿಸಲಾಗುವುದು. ಪ್ರತಿಭಟನಾಕಾರರ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ ಪ್ರತಿಭಟನೆಗಾಗಿ 55 ಅರ್ಜಿಗಳು ಬಂದಿದ್ದು, ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ.ಭೀಮಾಶಂಕರ ಗುಳೇದ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರಾಹುಲ್ ಶಿಂಧೆ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು